ನರೇಗಲ್ಲ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಕಳಪೆ ಬೀಜ ಮಾರಾಟ ಮಾಡುವುದು ಕಂಡುಬಂದರೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಜಿಲ್ಲಾ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕ್ಕಲ್ಲ ಹೇಳಿದರು.
ಪಟ್ಟಣದ ರಸಗೊಬ್ಬರ, ಕ್ರಿಮಿನಾಶಕ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ, ಗುಣಮಟ್ಟದ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡಬೇಕೆಂದು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ರೈತರು ಹೆಸರು, ಗೋವಿನಜೋಳ, ಸಜ್ಜೆ, ಶೇಂಗಾ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಆ ಬೀಜಗಳು ಗುಣಮಟ್ಟದ್ದಾಗಿರಬೇಕು ಮತ್ತು ರೈತರಿಗೆ ಮಾರುಕಟ್ಟೆ ಬೆಲೆಯಲ್ಲಿ ವಿತರಿಸಬೇಕು. ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಹಾಗೂ ಅವಧಿ ಮುಗಿದ ಬೀಜಗಳನ್ನು ಮಾರಾಟ ಮಾಡಬಾರದು. ಬೀಜಗಳಲ್ಲಿ ಲೋಪದೋಷಗಳಿದ್ದರೆ ಅದಕ್ಕೆ ವ್ಯಾಪಾರಸ್ಥನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಮಾರಾಟ ಮಾಡುವ ಎಲ್ಲ ಸಾಮಗ್ರಿಗೂ ಕಡ್ಡಾಯವಾಗಿ ರಶೀದಿ ನೀಡಬೇಕು. ಅಂಗಡಿಗಳಲ್ಲಿ ದರಪಟ್ಟಿ ಹಾಕಬೇಕು. ರಸಗೊಬ್ಬರವನ್ನು ನಿಗದಿ ಪಡಿಸಿದ ದರದಲ್ಲೇ ಮಾರಾಟ ಮಾಡಬೇಕು. ಕೃಷಿ ಇಲಾಖೆ ಸೂಚಿಸಿರುವ ಮಾನದಂಡದಂತೆ ವಹಿವಾಟು ಮಾಡಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ನರೇಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಗದೀಶ ಹಾದಿಮನಿ ಇದ್ದರು. ಸೂಚನಾ ಫಲಕದಲ್ಲಿ ದಾಸ್ತಾನುಗಳ ವಿವರ, ದರ ನಮೂದಿಸದ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲಾಯಿತು.