Advertisement

“ಮರಳು ಮಾಫಿಯಾ ತಡೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ’

02:16 PM Aug 05, 2017 | |

ವಿಜಯಪುರ: ರಾಜಕೀಯವಾಗಿ ನನ್ನನ್ನು ಮುಗಿಸಲು ಪೊಲೀಸರ ಮೂಲಕ ಷಡ್ಯಂತ್ರ ರೂಪಿಸಲಾಗಿದೆ. ಇದಕ್ಕಾಗಿ ಮರಳು ಮಾಫಿಯಾ ಹಾಗೂ ಪೊಲೀಸ್‌ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಈ ತಿಂಗಳ 10ರೊಳಗೆ ಮರಳು ಮಾಫಿಯಾ ಸಂಪೂರ್ಣ ತಡೆಗಟ್ಟಿ, ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ ಇಂಡಿ ಉಪ ವಿಭಾಗದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಎಚ್ಚರಿಸಿದ್ದಾರೆ.

Advertisement

ಜುಲೈ 13ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಬಂಧಿ ತರಾಗಿದ್ದ ರವಿಕಾಂತ ಪಾಟೀಲ, ಹೈಕೋರ್ಟ್‌ ಜಾಮೀನು ನೀಡಿದ ಬಳಿಕ ಶುಕ್ರವಾರ ಜೈಲಿನಿಂದ ಹೊರ ಬಂದ ಅವರು, ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರದಿಂದ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಇಂಡಿ ತಾಲೂಕಿನಲ್ಲಿ ಮಿತಿ ಮೀರಿದ ಮರಳು ಮಾಫಿಯಾ ತಡೆಯಲು ಮುಂದಾಗಿದ್ದೆ. ಇದರಿಂದಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗಿದೆ ಎಂದು ಕಿಡಿ ಕಾರಿದರು. ಈ ಷಡ್ಯಂತ್ರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕ ರಾಜು ಆಲಗೂರು ಪೊಲೀಸರನ್ನು ಬಳಸಿಕೊಂಡು ಸುಳ್ಳು ಪ್ರಕರಣದ ಮೂಲಕ ನನ್ನನ್ನು ಜೈಲಿಗೆ ಕಳುಹಿಸುವ ಕೃತ್ಯ ಎಸಗಿದ್ದಾರೆ. ಇಂಡಿ ತಾಲೂಕಿನಲ್ಲಿ ಮರಳು ಮಾಫಿಯಾ ಹಾವಳಿ ಮೀತಿ ಮೀರಿದೆ. ಈ ಹಾವಳಿ ನಿಯಂತ್ರಿಸುವಲ್ಲಿ ಇಂಡಿ ವ್ಯಾಪ್ತಿಯ ಪೊಲೀಸ್‌ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ತಪ್ಪಿತಸ್ಥ ಝಳಕಿ ಪಿಎಸ್‌ಐ, ಸಿಪಿಐ ಹಾಗೂ ಇಂಡಿ ಡಿವೈಎಸ್‌ಪಿಯನ್ನು ಕೂಡಲೇ
ಅಮಾನತು ಮಾಡಬೇಕು, ಆ. 10ರೊಳಗೆ ಈ ಅಧಿಕಾರಿಗಳನ್ನು ಅಮಾನತು ಮಾಡದಿದ್ದರೆ ಆ. 10ರಂದು ಝಳಕಿ ವೃತ್ತದಲ್ಲಿ ಆತ್ಮದಹನ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದರು.

ನಾನು ಪ್ರತಿಭಟನೆ, ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಲ್ಲ. ಏಕೆಂದರೆ ವಿರೋಧಿಗಳ ಕೈಯಲ್ಲಿ ಈಗ ಅಧಿಕಾರ ಇದೆ.  ಈ ಕಾರಣಕ್ಕಾಗಿ ನಾನು ಈ ಕಠಿಣ ನಿರ್ಧಾರ ಕೈಗೊಳ್ಳುವಂತೆ ಮಾಡಿದೆ ಎಂದು ಹೇಳಿದರು. ನನ್ನ ರಾಜಕೀಯ ಬೆಳವಣಿಗೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ನಾಗಠಾಣ ಶಾಸಕ ರಾಜು ಆಲಗೂರ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ನಾನು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ, ನನ್ನ ಮೇಲೆ ಹಲ್ಲೆ ನಡೆಸಿದವರಿಗೆ ಇಂದು ರಕ್ಷಣೆ ದೊರಕಿದೆ, ಆದರೆ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲುವಂತೆ ಮಾಡಲಾಗಿದೆ. ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಕುಮ್ಮಕ್ಕು ಇದೆ. ನನ್ನ ಮೇಲೆ ಹಲ್ಲೆ ನಡೆದ ಬಗ್ಗೆ ಪ್ರಕರಣ ದಾಖಲಿಸಲು ಹೋದರೆ ಝಳಕಿ ಪಿಎಸ್‌ಐ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದರು.

ಜಾಮೀನು ಮೇಲೆ ಬಿಡುಗಡೆ
ಆ. 1ರಂದು ಕಲಬುರಗಿ ನ್ಯಾಯಾಲಯ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೆ ಸೂಚನೆ ನೀಡಿತ್ತು. 2 ಲಕ್ಷ ರೂ. ಬಾಂಡ್‌ ಹಾಗೂ ಇಬ್ಬರು ಶ್ಯೂರಿಟಿ ಸಹಿ ಪಡೆದು ಜಾಮೀನು ಮಂಜೂರು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗುರುವಾರ ಜಾಮೀನಿನ ಬಿಡುಗಡೆಗೊಳ್ಳುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಪಾರ ಸಂಖ್ಯೆಯ ಬೆಂಬಲಿಗರು ನೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next