Advertisement

ಬಾಜಿನಡ್ಕದಲ್ಲಿ ಹೊಳೆ ಉಕ್ಕಿ ಹರಿದರೆ ಅರ್ಧದಲ್ಲೇ ಬಾಕಿ!

10:00 AM Jul 21, 2018 | Team Udayavani |

ಸುಬ್ರಹ್ಮಣ್ಯ: ಕಾಡಿನ ನಡುವಿನ ಈ ಊರಲ್ಲಿ ವನ್ಯ ಜೀ ವಿಗಳ ಓಡಾಟವೇ ಹೆಚ್ಚು. ರಾತ್ರಿ ಹೊತ್ತಲ್ಲಿ ಈ ಮಾರ್ಗವಾಗಿ ತೆರಳಲು ಜನ ಹಿಂದೇಟು ಹಾಕುತ್ತಾರೆ. ಅಂತಹ ಅಪಾಯಕಾರಿ ದಾರಿಯಲ್ಲಿ ಸಂಚಾರ ಅನಿವಾರ್ಯ. ಇಲ್ಲಿನ ಹೊಳೆಯಲ್ಲಿ ನೀರು ಹೆಚ್ಚಾದರೆ ಊರಿಗೆ ಹೋಗಲು ಆಗುವುದಿಲ್ಲ. ಇದು ಹಾಡಿಕಲ್ಲು ಭಾಗದ ಜನರ ಗೋಳು.

Advertisement

ತಾಲೂಕು ಕೇಂದ್ರದಿಂದ ಕಟ್ಟಕಡೆಯ ಗ್ರಾಮ ಮಡಪ್ಪಾಡಿ. ಅಲ್ಲಿಂದ ಮತ್ತೆ ಐದಾರು ಕಿ.ಮೀ. ದೂರ ಸಾಗಿದರೆ ಸಿಗುವ ಊರು ಹಾಡಿಕಲ್ಲು. ಮಡಪ್ಪಾಡಿಯಿಂದ ಅಲ್ಲಿಗೆ ತೆರಳಲು ಸರಕಾರದ ಕಡೆಯಿಂದ ಸಂಚಾರ ವ್ಯವಸ್ಥೆಗಳಿಲ್ಲ. ಖಾಸಗಿ ವಾಹನ, ಇಲ್ಲವೇ ಕಾಲ್ನಡಿಗೆಯಲ್ಲಿ ತೆರಳಬೇಕು. ಮಡಪ್ಪಾಡಿಯಿಂದ ಹಾಡಿಕಲ್ಲಿಗೆ ತೆರಳುವ ದಾರಿ ಮಧ್ಯೆ ಬಾಜಿನಡ್ಕ ಎನ್ನುವಲ್ಲಿ ರಸ್ತೆಗೆ ಅಡ್ಡಲಾಗಿ ಹೊಳೆ ಹರಿಯುತ್ತದೆ. ಇದು ಮಳೆಗಾಲದಲ್ಲಿ ತುಂಬಿಕೊಳ್ಳುತ್ತದೆ. ಜನರಿಗೆ ದಾಟಲು ಇಲ್ಲೊಂದು ಮೋರಿ ವ್ಯವಸ್ಥೆಯಿದೆ. ಸೂಕ್ತವಾದ ಸೇತುವೆ ನಿರ್ಮಾಣ ಕಾರ್ಯ ಇನ್ನೂ ಆಗಿಲ್ಲ.

ಹಾಡಿ ಕಲ್ಲು ಭಾಗದವರು ತಮ್ಮೂರಿನ ದಾರಿ ಹಿಡಿಯಬೇಕಾದರೆ ಹೊಳೆ ದಾಟದೇ ಅನ್ಯ ಮಾರ್ಗವಿಲ್ಲ. ಮಳೆಗಾಲದಲ್ಲಿ ನೆರೆ ನೀರು ಹೆಚ್ಚಾದರೆ ಅತ್ತ ಕಡೆಯ ಹಳ್ಳಿಗೆ ತೆರಳಿದರೆ ಅರ್ಧದಲ್ಲೇ ಬಾಕಿಯಾಗುವ ಸಾಧ್ಯತೆಯೂ ಇದೆ. ಇಡಿ ರಾತ್ರಿ ರಸ್ತೆಯಲ್ಲೇ ಜಾಗರಣೆ ಕುಳಿತುಕೊಳ್ಳಬೇಕಾದೀತು. ಯಾವ ಸಮಯದಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸುತ್ತದೋ ಎನ್ನುವ ಆತಂಕ ಬೇರೆ ಇರುತ್ತದೆ.

ಬಸ್ಸು ಸಂಚಾರವೂ ಇಲ್ಲಿಲ್ಲ
ಹಾಡಿಕಲ್ಲಿನಲ್ಲಿ 56 ಕುಟುಂಬಗಳಿವೆ. ಪರಿಶಿಷ್ಟ ಜಾತಿ/ಪಂಗಡ ಸಹಿತ ಇತರ ಕುಟುಂಬಗಳು ಹಾಡಿಕಲ್ಲು ಪರಿಸರದಲ್ಲಿ ವಾಸವಿದ್ದಾರೆ. ಕೃಷಿ ಅವಲಂಬಿತ ಅವರು ದೈನಂದಿನ ಸೌಕರ್ಯಗಳಿಗೆ ಮಡಪ್ಪಾಡಿ ತಲುಪಿ ಅಲ್ಲಿಂದ ತಾಲೂಕು ಹಾಗೂ ಇತರ ಊರುಗಳಿಗೆ ತೆರಳಬೇಕು. ಬೆಳೆದ ಫಲ ವಸ್ತುಗಳನ್ನು ಖಾಸಗಿ ವಾಹನದಲ್ಲಿ, ಇಲ್ಲವೆ ತಲೆ ಹೊರೆಯಲ್ಲಿ ಹೊತ್ತೂಯ್ಯಬೇಕು. ಬಸ್ಸಿನ ವ್ಯವಸ್ಥೆಯಿಲ್ಲ. ಪ್ರಾಥಮಿಕ ಶಾಲೆ ಬಿಟ್ಟರೆ ಇಲ್ಲಿ ಬೇರೇನೂ ಇಲ್ಲ. ಹೆಚ್ಚಿನ ಶಿಕ್ಷಣಕ್ಕೆ ಇಲ್ಲಿನವರು ಹೊರಗಡೆಯ ಊರುಗಳಿಗೆ ತೆರಳಬೇಕು.

ಶಾಶ್ವತ ಪರಿಹಾರ
ಮಡಪ್ಪಾಡಿ-ಹಾಡಿಕಲ್ಲು ನಡುವೆ ಇರುವುದು ಕಚ್ಚಾ ರಸ್ತೆ. ನಡೆ ದುಕೊಂಡು ಹೋಗಲು ಹೆಚ್ಚು ಕಡಿಮೆ 1 ಗಂಟೆ ಅವಧಿ ತೆಗೆದುಕೊಳ್ಳುತ್ತದೆ. ಸುತ್ತಲೂ ದಟ್ಟ ಕಾಡು ಇರುವುದರಿಂದ ನಡೆದಾಡುವ ವೇಳೆ ಕಾಡುಪ್ರಾಣಿಗಳ ಭಯ ಇದೆ. 

Advertisement

ತೊಂದರೆಯಾಗದಂತೆ ಕ್ರಮ
ಮಡಪ್ಪಾಡಿ-ಹಾಡಿ ಕಲ್ಲು ನಡುವೆ ಸೇತುವೆ ನಿರ್ಮಾಣಕ್ಕೆ ಶಾಸಕರು ಅನುದಾನ ಮೀಸಲಿಟ್ಟಿದ್ದಾರೆ. ಈಗ ತಾತ್ಕಾಲಿಕ ವ್ಯವಸ್ಥೆಯಾಗಿ ಮೋರಿ ಅಳವಡಿಸಿ ನೆರೆಯ ವೇಳೆ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಒಂದು ಬಾರಿ ಅಳವಡಿಸಿದ್ದ ಮೋರಿ ನೀರಿಗೆ ಕೊಚ್ಚಿಹೋಗಿದೆ. ಪರಿಶೀಲಿಸುತ್ತೇವೆ.
 - ಶಕುಂತಳಾ ಕೇವಳ,
ಗ್ರಾ.ಪಂ. ಅಧ್ಯಕ್ಷೆ, ಮಡಪ್ಪಾಡಿ

ಪ್ರತಿವರ್ಷ ಸಂಕಟ
ಸೇತುವೆ ಇಲ್ಲದೆ ಮಳೆಗಾಲದಲ್ಲಿ ತುಂಬಾ ಕಷ್ಟ ಆಗುತ್ತಿದೆ. ಪ್ರತಿವರ್ಷ ಸಂಕಟ ಅನುಭವಿಸುತ್ತೇವೆ. ಸೇತುವೆ ಆಗುತ್ತದೆ ಎನ್ನುತ್ತಾರೆ. ಯಾವಾಗ ಆಗುತ್ತದೋ ಗೊತ್ತಿಲ್ಲ.
– ಯೋಗೀಶ ಹಾಡಿಕಲ್ಲು, ಸ್ಥಳಿಯ ನಿವಾಸಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next