Advertisement

ಮೊದಲು “ರಣಧೀರ’ಬಂದಿದ್ದರೆ ನಾನು ಸ್ಟಾರ್‌ ಆಗುತ್ತಿದ್ದೆ…

10:17 AM Dec 11, 2019 | Lakshmi GovindaRaj |

“ಮೊದಲು “ರಣಧೀರ’ ಮಾಡಿದ್ದರೆ ಮೊದಲ ಚಿತ್ರದಲ್ಲೇ ನಾನು ಸ್ಟಾರ್‌ ಆಗಿಬಿಡುತ್ತಿದ್ದೆ…’ ತಮ್ಮ ಎರಡು ಚಿತ್ರಗಳ ಸೋಲು ಹಾಗೂ ಮುಂದಿನ ಚಿತ್ರಗಳ ಮೇಲಿರುವ ವಿಶ್ವಾಸ ಕುರಿತು ರವಿಚಂದ್ರನ್‌ ಪುತ್ರ ಮನುರಂಜನ್‌ ಮಾತಿದು. ನಿಮಗೆ ಗೊತ್ತಿರುವಂತೆ ರವಿಚಂದ್ರನ್‌, ತಮ್ಮ ಪುತ್ರ ಮನುರಂಜನ್‌ನನ್ನು “ರಣಧೀರ’ ಚಿತ್ರದ ಮೂಲಕ ಲಾಂಚ್‌ ಮಾಡುವುದಾಗಿ ಹೇಳಿ, ಅದ್ಧೂರಿಯಾಗಿ ಮುಹೂರ್ತ ಕೂಡಾ ಮಾಡಿದ್ದರು.

Advertisement

ಆದರೆ, ಕಾರಣಾಂತರಗಳಿಂದ ಆ ಚಿತ್ರ ಮುಂದುವರೆಯಲಿಲ್ಲ. ಹಾಗಂತ ನಿಂತಿಲ್ಲ. ಮುಂದೆ ಆ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ರವಿಚಂದ್ರನ್‌. ಆದರೆ, ಮನುರಂಜನ್‌ಗೆ ಆ ಸಿನಿಮಾ ಮೇಲಿನ ಕನಸು ಒಂಚೂರು ಕಡಿಮೆಯಾಗಿಲ್ಲ. ಆ ಚಿತ್ರ ಮೊದಲು ಬಿಡುಗಡೆಯಾಗುತ್ತಿದ್ದರೆ ತಾನು ಇಷ್ಟೊತ್ತಿಗೆ ಸ್ಟಾರ್‌ ನಟ ಆಗುತ್ತಿದ್ದೆ ಎಂಬ ನಂಬಿಕೆ ಕೂಡಾ ಮನು ಅವರದು. “ಡ್ಯಾಡಿ ನನಗೆ “ರಣಧೀರ’ ಮಾಡಿದ್ದರೆ, ಹೈಪ್‌ ಸಿಕ್ಕಿರೋದು. ಆದರೆ, ಅದೊಂದು ಸ್ಟ್ರಾಂಗ್‌ ಟೈಟಲ್‌.

ನನ್ನನ್ನು ಜನರು ಹೇಗೆ ಒಪ್ಕೋತ್ತಾರೆ ಎಂಬ ಭಯವೂ ಇತ್ತು. ಅಷ್ಟಕ್ಕೂ ನನಗೆ ಆ ಇಮೇಜ್‌ ಕೂಡ ಇಲ್ಲ. ಒಂದಷ್ಟು ಸಿನಿಮಾ ಮಾಡಿದ ಮೇಲೆ ಆ ಚಿತ್ರ ಮಾಡಿದರೆ, ಜನರಿಗೆ ಕನೆಕ್ಟ್ ಆಗ್ತಿನಿ. ಹಾಗಾಗಿ, “ರಣಧೀರ’ ಸದ್ಯಕ್ಕೆ ನಿಂತಿದೆ. ಆ ಚಿತ್ರ ಮಾಡೋದು ಪಕ್ಕಾ. ಅದರಲ್ಲೇ ನಾನು ಸೂಪರ್‌ ಸ್ಟಾರ್‌ ಆಗೋದು. ನನಗೆ ರವಿಚಂದ್ರನ್‌ ಮಗ ಅಂತ ಟ್ರೀಟ್‌ ಮಾಡ್ತಾರೆ ಎಂಬುದೆಲ್ಲಾ ಸುಳ್ಳು. ಸಕ್ಸಸ್‌ ಇದ್ದರೆ ಮಾತ್ರ ಇಲ್ಲಿ ಬೆಲೆ.

ಮೂರು ವರ್ಷಗಳಿಂದ ನಾನು ಎಲ್ಲವನ್ನೂ ನೋಡಿ, ಕಲಿತಿದ್ದೇನೆ. ರವಿಚಂದ್ರನ್‌ ಮಗ ಅನ್ನೋದು ನನ್ನ ಭುಜದ ಮೇಲಿರುವ ಒಂದಂಶವಷ್ಟೇ. ಮೊದಲ ಚಿತ್ರಕ್ಕೆ ಜನ ಬಂದ್ರು. ಎರಡನೇ ಸಿನಿಮಾಗೆ ಯಾಕೆ ಬರಲಿಲ್ಲ? ಆಗಲೂ ನಾನು ರವಿಚಂದ್ರನ್‌ ಮಗನೇ ತಾನೇ? “ರಣಧೀರ’ ಮಾಡಿದ್ದರೆ, ಒಳ್ಳೆಯ ಓಪನಿಂಗ್‌ ಸಿಕ್ಕಿರೋದು. ನಾನೂ ಒನ್‌ ಆಫ್ ದಿ ಸ್ಟಾರ್‌ ಆಗಿರುತ್ತಿದ್ದೆ. ಆದರೆ, ಡ್ಯಾಡಿ ಒಂದು ಮಾತು ಹೇಳಿದ್ರು, ಇಂಡಸ್ಟ್ರಿ ಹೇಗಿದೆ ಅಂತ ನೋಡಿಕೊಂಡು ಬಾ.

ಯಾರ್ಯಾರು ಹೇಗಿರುತ್ತಾರೆ ತಿಳ್ಕೊ ಅಂದ್ರು. ಧೈರ್ಯವಾಗಿ ಹೋಗು. ನಾನು ಹಿಂದೆ ಇದ್ದೇನೆ. ಸೋತರೆ ನಾನು ಮೇಲೆತ್ತುತ್ತೇನೆ ಅಂದ್ರು. ಹಾಗಾಗಿ, ನಾನೂ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದೇನೆ’ ಎಂದು ತಮ್ಮ ಸೋಲು-ಗೆಲುವಿನ ಬಗ್ಗೆ ಮಾತನಾಡುತ್ತಾರೆ ಮನುರಂಜನ್‌. ಮನುರಂಜನ್‌ ಈಗ ಕನ್ನಡ ಭಾಷೆ ಸುಧಾರಣೆಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರಂತೆ. ಅದಕ್ಕೆ ಈ ಹಿಂದೆ ಜನ ಬೈಯ್ದಿರೋದು.

Advertisement

“ನಾನೀಗ ಕನ್ನಡ ಭಾಷೆ ಬಗ್ಗೆ ಗಂಭೀರವಾಗಿ ಗಮನಹರಿಸಿದ್ದೇನೆ. ಹಿಂದೆ ಕನ್ನಡ ಬಗ್ಗೆ ತುಂಬಾ ಜನ ಬೈಯ್ದಿದ್ದರು. ಈಗ ಬೆಟರ್‌ ಎನಿಸುತ್ತಿದೆ. ಕಾರಣ, ದಿನ ಅರ್ಧ ಗಂಟೆ ಕನ್ನಡ ಪೇಪರ್‌ ಓದುತ್ತೇನೆ. “ಪ್ರಾರಂಭ’ದಲ್ಲೂ ಸೂಕ್ಷ್ಮವಾಗಿಯೇ ಡಬ್ಬಿಂಗ್‌ ಮಾಡಿದ್ದೇನೆ. ನನ್ನ ಕನ್ನಡ ಭಾಷೆ ಸುಧಾರಿಸಿಕೊಳ್ಳಲು ಪೇಪರ್‌ ಓದಿದ್ದೇನೆ. ಕಳೆದ ಆರು ತಿಂಗಳಿನಿಂದಲೂ ಭಾಷೆ ಹಿಡಿತ ಇಟ್ಟುಕೊಳ್ಳುವ ಪ್ರಯತ್ನ ನಡೆದಿದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next