ರಜನಿಕಾಂತ್ ಅಭಿನಯದ “ಪೆಟ್ಟಾ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆಯನ್ನು ಜಾಕ್ ಮಂಜು ಪಡೆದುಕೊಂಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಜಾಕ್ ಮಂಜು ಮುಂದಾಗಿದ್ದಾರೆ. ಇನ್ನು, “ಪೆಟ್ಟಾ’ ಚಿತ್ರಕ್ಕೆ ಕನ್ನಡಕ್ಕೆ ಡಬ್ ಆಗಿಯೂ ಬಿಡುಗಡೆಯಾಗಲಿದೆ ಎಂಬ ಮಾತುಗಳು ಓಡಾಡುತ್ತಿವೆ. ಈ ಬಗ್ಗೆ ಮಾತನಾಡುವ ಜಾಕ್ ಮಂಜು, “ರಜನಿಕಾಂತ್ ಅವರ ಕನ್ನಡ ತುಂಬಾ ಚೆನ್ನಾಗಿದೆ. ಅವರೇ ಕನ್ನಡಕ್ಕೆ ಡಬ್ ಮಾಡಬೇಕೆಂಬುದು ನಮ್ಮ ಆಸೆ.
ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಅವರೇ ಡಬ್ ಮಾಡಿದರೆ ನಾನು ಕನ್ನಡದಲ್ಲೂ ಆ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ. ಕರ್ನಾಟಕದಲ್ಲಿ ಡಬ್ಬಿಂಗ್ ಕುರಿತು ಸಾಕಷ್ಟು ಪರ-ವಿರೋಧವಿದೆ. ಡಬ್ಬಿಂಗ್ ಸಿನಿಮಾಗಳ ಬಿಡುಗಡೆಯನ್ನು ವಿರೋಧಿಸಿ ದೊಡ್ಡ ಪ್ರತಿಭಟನೆಯೇ ನಡೆಯುತ್ತಿದೆ. ಈ ಕುರಿತು ಮಾತನಾಡುವ ಜಾಕ್ ಮಂಜು, “ಇಲ್ಲಿ ಈಗಾಗಲೇ ಅನೇಕ ಡಬ್ಬಿಂಗ್ ಸಿನಿಮಾಗಳು ಬಿಡುಗಡೆಯಾಗಿವೆ. ಡಬ್ಬಿಂಗ್ ಸಿನಿಮಾಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ.
ಕನ್ನಡ ಜನರಿಗೆ ಅವರದೇ ಭಾಷೆಯಲ್ಲಿ ಸಿನಿಮಾ ಸಿಕ್ಕಾಗ ಅದನ್ನು ಅರ್ಥೈಸಲು ಸುಲಭವಾಗುತ್ತದೆ. ಹಾಗಾಗಿ, ನಾನು ಡಬ್ಬಿಂಗ್ ಬೆಂಬಲಿಸುತ್ತೇನೆ. ನನ್ನ ಮೈಸೂರು ಟಾಕೀಸ್‌ನಡಿ ಡಬ್ಬಿಂಗ್ ಸಿನಿಮಾಗಳನ್ನು ಬಿಡುಗಡೆ ಮಾಡಲು ನಾನು ಸಿದ್ಧ’ ಎನ್ನುವುದು ಜಾಕ್ ಮಂಜು ಮಾತು. ಇತ್ತೀಚೆಗೆ “ಪೆಟ್ಟಾ’ ಚಿತ್ರದ ಪತ್ರಿಕಾಗೋಷ್ಠಿಗೆ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಜೊತೆ ಆಗಮಿಸಿದ್ದ ಜಾಕ್ ಮಂಜು, “ರಜನಿಕಾಂತ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಸಿನಿಮಾಕ್ಕೆ ಬಂದ ನಂತರ ಅವರ ಸಿನಿಮಾಗಳನ್ನು ಬಿಡುಗಡೆ ಮಾಡಬೇಕೆಂಬ ಕನಸು ಇತ್ತು.
ಅದು “ಪೆಟ್ಟಾ’ ಮೂಲಕ ಈಡೇರುತ್ತಿದೆ. ಚಿತ್ರಮಂದಿರಗಳಿಂದಲೂ ಈ ಚಿತ್ರಕ್ಕೆ ಬೇಡಿಕೆ ಬರುತ್ತಿದೆ’ ಎಂದರು. ಚಿತ್ರದ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಹೇಳುವಂತೆ, ಇದು ಪಕ್ಕಾ ರಜನಿಕಾಂತ್ ಶೈಲಿ ಸಿನಿಮಾ. ಸಾಮಾನ್ಯವಾಗಿ ಕಥೆ ಬರೆದ ನಂತರ ಹೀರೋ ಹುಡುಕುತ್ತಿದ್ದ ಕಾರ್ತಿಕ್, ಈ ಬಾರಿ ರಜನಿಕಾಂತ್ ಅವರನ್ನೇ ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದಾರಂತೆ. ಅವರ ಮಾಸ್ ಅಭಿಮಾನಿಗಳು ಇಷ್ಟಪಡುವ ಎಲ್ಲಾ ಅಂಶಗಳು ಈ ಚಿತ್ರದಲ್ಲಿರುತ್ತವೆ ಎನ್ನುವುದು ಕಾರ್ತಿಕ್ ಮಾತು.