Advertisement
ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಸೋಮವಾರ ನಡೆದ ನವೋದ್ಯಮಿಳಗೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್, ರಫೇಲ್ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕಚೇರಿ ನೇರವಾಗಿ ಫ್ರಾನ್ಸ್ ಸರ್ಕಾರದೊಂದಿಗೆ ಪರ್ಯಾಯ ಮಾತುಕತೆ ನಡೆಸಿರುವುದು ಬಹಿರಂಗಗೊಂಡಿದೆ.
Related Articles
Advertisement
ಇದು ಕ್ರಿಮಿನಲ್ ಅಪರಾಧವಾಗಿದ್ದು, ಈ ಬಗ್ಗೆ ಜಂಟಿ ಸದನ ಸಮಿತಿ ರಚನೆ ಮಾಡುವಂತೆ ಸಂಸತ್ತಿನಲ್ಲಿ ಒತ್ತಾಯ ಮಾಡಿದರೂ, ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು. ರಫೇಲ್ ಹರಗಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಮುಂದಾದಾಗ ಸಿಬಿಐ ನಿರ್ದೇಶಕರನ್ನೇ ವಜಾ ಮಾಡಲಾಯಿತು. ನಂತರ ಸುಪ್ರೀಂ ಕೋರ್ಟ್ ಅವರನ್ನು ಮರಳಿ ಹುದ್ದೆಗೆ ತರುವಂತಾಯಿತು.
ಚೌಕಿದಾರ್ ಎಂದು ಹೇಳಿಕೊಳ್ಳುವವರು ತನಿಖೆಗೆ ಏಕೆ ಹೆದರುತ್ತಿದ್ದಾರೆ. ರಫೇಲ್ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ. ಹಣ ನೀಡಿರುವುದರಿಂದ ಚೌಕಿದಾರ್ ಚೋರ್ ಹೈ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದರು. ನವೋದ್ಯಮಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಸ್ಟಾರ್ಟ್‌ಅಪ್ ಕಂಪನಿಗಳೇ ಸಧ್ಯದ ಉದ್ಯೋಗದಾತರು. ಮುಂದೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸರಳಗೊಳಿಸಿ, ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ದಲಿತ ನವೋದ್ಯಮಿಗಳಿಗೆ ಆರ್ಥಿಕ ಸಹಕಾರ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ. ದಲಿತರ ಉದ್ಯಮ ಬೆಳವಣಿಗೆಗೆ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಬ್ಯಾಂಕಿಂಗ್ ಉದ್ಯಮ ಕೆಲವೇ ಕೆಲವರ ಹಿಡಿತದಲ್ಲಿದೆ. ಅದು ವಿಕೇಂದ್ರಿಕರಣ ಆಗಬೇಕು. ದಲಿತ ಉದ್ಯಮಿಗಳಿಗೂ ನೇರವಾಗಿ ಹಣಕಾಸಿನ ನೆರವು ದೊರೆಯಲು ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಹೇಳಿದರು.
ಮೋದಿ ಘೋಷಣೆ – ಲಾಠಿ ಚಾರ್ಜ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾನ್ಯತಾ ಟೆಕ್ ಪಾರ್ಕ್‌ಗೆ ಆಗಮಿಸುತ್ತಿದ್ದಾಗ ಕೆಲ ಯುವಕರು ಮೋದಿ… ಮೋದಿ ಎಂದು ಘೋಷಣೆ ಕೂಗಿದರು. ಈ ವೇಳೆ ರಾಜ್ಯ ಎನ್‌ಎಸ್‌ಯುಐ ಘಟಕದ ಅಧ್ಯಕ್ಷ ಮಂಜುನಾಥ್ ಹಾಗೂ ಮೋದಿ ಪರ ಘೋಷಣೆ ಕೂಗಿದವರ ನಡುವೆ ಮಾತಿನ ಚಕಮಕಿ ನಡೆಯುತು. ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಮಧ್ಯೆ ಪ್ರವೇಶಿಸಿ, “ಅನಗತ್ಯ ಘೋಷಣೆ ಕೂಗುವವರನ್ನು ನೋಡಿಕೊಂಡು ಸುಮ್ಮನಿಲ್ಲೀರಲ್ಲಾ, ಅವರನ್ನು ವಾಪಸ್ ಕಳುಹಿಸಿ’ ಎಂದು ಪೊಲೀಸರಿಗೆ ಸೂಚಿಸಿದ ನಂತರ ಪೊಲೀಸರು ಮೋದಿ ಪರ ಘೋಷಣೆ ಕೂಗುತ್ತಿದ್ದ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ರಾಜ್ಯ ನಾಯಕರ ಮೇಲೆ ರಾಹುಲ್ ಗರಂ: ಯುವಕರ ಗುಂಪೊಂದು ಮೋದಿ ಪರ ಘೋಷಣೆ ಕೂಗಿ ಮುಜುಗರ ಉಂಟುಮಾಡಿದ್ದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಏರ್ಪಡಿಸಿದ್ದ ಸಂವಾದಕ್ಕೆ ರಾಹುಲ್ ಆಗಮಿಸುತ್ತಿದ್ದಂತೆ ಕಾರ್ಯಕ್ರಮ ಸ್ಥಳದ ಎದುರು ನಿಂತಿದ್ದ ನೂರಾರು ಯುವಕರು, “ಮತ್ತೂಮ್ಮೆ ಮೋದಿ’, “ರಾಹುಲ್ ಗೋ ಬ್ಯಾಕ್’ ಮತ್ತಿತರ ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿ, ಮೋದಿ, ಮೋದಿ ಎಂದು ಘೋಷಣೆ ಕೂಗಿದರು.
ಈ ವೇಳೆ ಪೊಲೀಸರು ಮೌನವಾಗಿ ನಿಂತಿದ್ದರ ಬಗ್ಗೆಯೂ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘೋಷಣೆ ಕೂಗುವವರು ಹಾಗೂ ಎನ್‌ಎಸ್‌ಯುಐ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಎನ್‌ಎಸ್‌ಯುಐ ವಿದ್ಯಾರ್ಥಿಗಳ ಮೇಲೇ ಹಲ್ಲೆ ಮಾಡಿದ್ದಾರೆ. ಪೊಲೀಸರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಪರಿಷತ್ ಸದಸ್ಯರ ವಿರುದ್ಧ ಆಕ್ರೋಶ: ವಿರೋಧ ಇರುವ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್, ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
“ಅಲ್ಲದೆ, ಕರ್ನಾಟಕ ಪ್ರವಾಸದ ವೇಳೆ ಇಷ್ಟೊಂದು ಮುಜುಗರ ನನಗೆಂದೂ ಆಗಿರಲಿಲ್ಲ. ಕಾರ್ಯಕ್ರಮ ಆಯೋಜಿಸುವಾಗ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ವಿರೋಧವಿರುವ ಪ್ರದೇಶ ಬಿಟ್ಟು ಬೇರೆಡೆ ಕಾರ್ಯಕ್ರಮ ಆಯೋಜಿಸಬಹುದಿತ್ತು,’ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರು ರಾಹುಲ್ ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ನವೋದ್ಯಮಿಗಳ ಜತೆಗಿನ ಸಂವಾದದ ಯಶಸ್ಸು ಕಂಡು ಬಿಜೆಪಿಯವರು ಕಾರ್ಯಕರ್ತರನ್ನು ಬಿಟ್ಟು ಅಡಚಣೆ ಉಂಟು ಮಾಡುವ ಮೂಲಕ ತಮ್ಮ ಹತಾಶ ಮನೋಭಾವ ಪ್ರದರ್ಶಿಸಿದ್ದಾರೆ. ವಿರೋಧ ಪಕ್ಷಗಳ ನಾಯಕರನ್ನು ಗೌರವಿಸುವ ಕನಿಷ್ಠ ಸೌಜನ್ಯ ಕೂಡ ಬಿಜೆಪಿಯವರಿಗೆ ಇಲ್ಲ.-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ