Advertisement

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

09:42 AM Mar 19, 2020 | mahesh |

ಭಾರತದಲ್ಲಿ ವಿಸ್ತಾರವಾದ ಸಾರ್ವಜನಿಕ ಆಡಳಿತ ಸೇವೆ ಇದೆ. ಕೇಂದ್ರ ಸೇವಾ ಆಯೋಗ ಪ್ರತಿ ವರ್ಷ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಕಠಿನ ಮತ್ತು ನಿರಂತರ ಅಧ್ಯಯನ ಮಾಡುವುದರಿಂದ ಸುಲಭವಾಗಿ ಸಾರ್ವಜನಿಕ ಆಡಳಿತ ಸೇವೆಯಲ್ಲಿ ಪಾಸಾಗಬಹುದು.

Advertisement

ಯಾವುದೇ ಒಂದು ದೇಶ ತನ್ನ ವಿವಿಧ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು, ಪ್ರಜಾರಕ್ಷಣೆ, ಅನುಕೂಲಕ್ಕೆ ಬೇಕಾದ ಕಾರ್ಯಗಳನ್ನು ನೆರವೇರಿಸಲು ಒಂದು ಕಾನೂನು ಚೌಕಟ್ಟಿನೊಳಗೆ ರೂಪಿಸಿಕೊಳ್ಳುವ ಕ್ರಮವನ್ನು ಸಾರ್ವಜನಿಕ ಆಡಳಿತ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಸಾರ್ವಜನಿಕ ಆಡಳಿತ ಪ್ರಕ್ರಿಯೆಯು ರಾಜಕೀಯ ಪ್ರಕ್ರಿಯೆಯ ಅಧೀನದಲ್ಲಿರುತ್ತದೆ. ರಾಜಕೀಯ ಪ್ರಕ್ರಿಯೆಗಳ ಜವಾಬ್ದಾರಿಯನ್ನು ನಿಭಾಯಿಸುವ ಬಹುದೊಡ್ಡ ಜವಾಬ್ದಾರಿ ಸಾರ್ವಜನಿಕ ಆಡಳಿತದ್ದಾಗಿದೆ. ರಾಜಕೀಯಕ್ಕೆ ಕಾನೂನುಬದ್ಧ ಸಲಹೆ, ಸಹಾಯ ನೀಡುವುದು, ಕಾರ್ಯಕ್ರಮಗಳ ರೂಪಣೆ, ಸರಕಾರದ ಕಾರ್ಯಾಚರಣೆಗೆ ಸಹಕರಿಸುವುದು ಸಾರ್ವಜನಿಕ ಆಡಳಿತದ ಕೆಲಸಗಳು.
ಭಾರತದಲ್ಲಿ ವಿಸ್ತಾರವಾದ ಸಾರ್ವಜನಿಕ ಆಡಳಿತ ಸೇವೆ ಇದೆ. ಅಖೀಲ ಭಾರತ ಮಟ್ಟದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ನಂತಹ ಕೇಂದ್ರದ ಸೇವೆಗಳು, ರಾಜ್ಯ ಮಟ್ಟದ ಸೇವೆಗಳು, ಸ್ಥಳೀಯ ಮಟ್ಟದ ಸೇವೆಗಳು ಹೀಗೆ ಬೇರೆ ಬೇರೆ ರೀತಿಯ ಸೇವೆಗಳನ್ನು ವರ್ಗೀಕರಿಸಲಾಗಿದೆ. ಸರಕಾರಗಳ ಅಧೀನದಲ್ಲಿರುವ ವಿವಿಧ ಇಲಾಖೆಗಳಲ್ಲಿ ಸರಕಾರಿ ಸವಲತ್ತು, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಜನರ ಮೂಲ ಆವಶ್ಯಕತೆಗಳಿಗೆ ಸ್ಪಂದನೆಯೊಂದಿಗೆ ಜನಸೇವೆಯೇ ಸಾರ್ವಜನಿಕ ಆಡಳಿತದ ಗುರಿಯಾಗಿರುತ್ತದೆ.

ಸಾರ್ವಜನಿಕ ಆಡಳಿತದ ಮೂಲಕ ಜನಸೇವೆ ಮಾಡಬೇಕೆಂಬ ಕನಸು ಇರುತ್ತದೆ. ಆದರೆ, ಈ ಕಲಿಕೆ ಹೇಗೆ, ಇದರ ವಿಸ್ತಾರತೆ ಏನು, ಕಲಿತ ಅನಂತರ ಉದ್ಯೋಗದ ಹಾದಿ ಸುಲಭವಾಗುತ್ತದೆಯೇ ಎಂಬ ಹಲವಾರು ಪ್ರಶ್ನೆ, ಗೊಂದಲಗಳು ಸಹಜ. ಅಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುವುದೊಂದು ಕಲೆ. ಶ್ರದ್ಧೆ ಮತ್ತು ಆಸಕ್ತಿಯಿಂದ ತೊಡಗಿಸಿಕೊಂಡಲ್ಲಿ ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿ ಜನಮನ ಗೆಲ್ಲುವುದು ಸಾಧ್ಯ.

ಸಾರ್ವಜನಿಕ ಆಡಳಿತ ಸೇವೆಯಲ್ಲಿ ಪಳಗುವುದಕ್ಕೆ ಹಲವಾರು ತರಬೇತಿ ಕೇಂದ್ರಗಳಿವೆ. ಮಂಗಳೂರಿನಲ್ಲಿ ಸರ್ವಜ್ಞ ಐಎಎಸ್‌ ಅಕಾಡೆಮಿ ಎಂಬ ಕೇಂದ್ರದಲ್ಲಿ ಐಎಎಸ್‌, ಕೆಎಎಸ್‌ ಸಹಿತ ಸಾರ್ವಜನಿಕ ಆಡಳಿತ ಸೇವೆಗೆ ಬೇಕಾದ ಸಿದ್ಧತೆ ಮತ್ತು ಅರ್ಹತೆಗಳ ಪಾಠ ಮಾಡಲಾಗುತ್ತದೆ.

Advertisement

ಅರ್ಹತೆ ಏನು?
ಯಾವುದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಮುಂದುವರಿಯಬಹುದು. ಆದರೆ, ವಿಷಯ ಜ್ಞಾನ, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳ ಅರಿವು, ದೈನಂದಿನ ಆಗುಹೋಗುಗಳ ಬಗ್ಗೆ ಮಾಹಿತಿ ಅಗತ್ಯವಾಗಿ ಬೇಕಾಗುತ್ತದೆ. ಕಲಿಕಾಸಕ್ತಿ, ಶ್ರದ್ಧೆ, ಪ್ರಾಮಾಣಿಕತೆ, ದಕ್ಷತೆ ಈ ಕ್ಷೇತ್ರದಲ್ಲಿ ಬೇಕಾದ ಮೂಲ ಆವಶ್ಯಕತೆಗಳಾಗಿವೆ.

ಅವಕಾಶ ಹೇಗಿದೆ?
ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಯುವಕರಿಗೆ ವಿಪುಲ ಅವಕಾಶಗಳಿವೆ. ಸರಕಾರದ ವ್ಯವಸ್ಥೆಯಲ್ಲಿ ವಿವಿಧ ಇಲಾಖೆಗಳಿರುವುದರಿಂದ ಆ ಇಲಾಖೆಗಳ ಜವಾಬ್ದಾರಿ ನಿರ್ವಹಿಸಲು ಜನರ ಆವಶ್ಯಕತೆ ಬಹಳವಿರುತ್ತದೆ. ಹೀಗಾಗಿ ಅವಕಾಶ ಜಾಸ್ತಿಯೇ.

ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೀನುಗಾರಿಕಾ ಇಲಾಖೆ, ನೀರು, ನೈರ್ಮಲ್ಯ ಇಲಾಖೆಗಳಲ್ಲಿ ಹೆಚ್ಚಿನ ಅವಕಾಶ ಯುವಕರಿಗಿರುತ್ತದೆ. ಆದರೆ, ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾದರೆ ಶ್ರಮ ವಹಿಸಬೇಕಾದುದು ಅವಶ್ಯಕ. ಶ್ರಮದಿಂದಷ್ಟೇ ಗೆಲುವು ಎಂಬುದನ್ನು ಅರಿತುಕೊಳ್ಳಬೇಕು. ಕಾಲೇಜು ಹಂತದಲ್ಲೇ ಈ ಕುರಿತು ಆಸಕ್ತಿ ಬೆಳೆಸಿಕೊಂಡರೆ ಸಮರ್ಥ ಅಧಿಕಾರಿಯಾಗಿ ರೂಪುಗೊಳ್ಳಬಹುದು.

ಕುಶಲಮತಿಗಳಾಗಿರಬೇಕು
ಸರಕಾರದ ಯಾವುದೇ ಹೊಸ ಯೋಜನೆಗಳು ಜಾರಿಗೊಂಡಾಗ ಅದನ್ನು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸುವುದು ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿರುವವರ ಬಹುಮುಖ್ಯ ಕೆಲಸ. ಜನರಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮತ್ತು ತಾನು ಕೆಲಸ ಮಾಡುವ ಸ್ಥಳದಲ್ಲಿ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಾದ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಜನಸ್ನೇಹಿಯಾಗಿ ಕೆಲಸ ಮಾಡುವ ಮನಸ್ಥಿತಿ ಸಾರ್ವಜನಿಕ ಆಡಳಿತ ಸೇವೆಯಲ್ಲಿರುವವರಾಗಿರಬೇಕು.

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next