ಹಿರೇಕೆರೂರ: ಪ್ರಾಮಾಣಿಕವಾಗಿ ಹೋರಾಟ ಮಾಡುವ ಜಿಲ್ಲೆಯ ರೈತ ಸಂಘಟನೆಯ ಮುಖಂಡರ ಮೇಲೆ ಸುಳ್ಳು ಮೊಕದ್ದಮೆ ಹಾಕಿದ್ದು, ಕೂಡಲೇ ಮೊಕದ್ದಮೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜುಲೈನಲ್ಲಿ ಜಿಲ್ಲಾ ರೈತ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಲು ಹಾವೇರಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅದು ಕಾನೂನು ಬಾಹಿರವಾಗಿದ್ದರೆ ಅಂದೇ ರೈತರನ್ನು ಬಂಧಿಸಬಹುದಾಗಿತ್ತು. ಆದರೆ, 9 ತಿಂಗಳು ನಂತರ ಸಾರ್ವಜನಿಕರಿಗೆ ತೊಂದರೆ ಮಾಡಿದ್ದೀರಿ ಎಂದು ರೈತ ಸಂಘದ ಮುಖಂಡರ ಮೇಲೆ ಮೊಕದ್ದಮೆ ಹಾಕಿ, ರೈತರು ತಲೆ ಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಕೊಟ್ಟು ಬಂಧನ ವಾರೆಂಟ್ ಹೊರಡಿಸಿರುವುದು ವಿಚಿತ್ರ ಹಾಗೂ ವಿಪರ್ಯಾಸ.
ಯಾರಿಗೂ ತೊಂದರೆಯಾಗದಂತೆ ಚಳವಳಿ ಮಾಡಿ ರೈತರ ಧ್ವನಿಯಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುವ ರೈತ ಸಂಘಟನೆ ಅಶಕ್ತಗೊಳಿಸಲು ಅಂದಿನ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಬಳಸಿಕೊಂಡು ಸುಳ್ಳು ಪ್ರಕರಣ ಹಾಕಿದ್ದಾರೆ. ಅನ್ನದಾತರನ್ನು ಜೈಲಿಗೆ ಕಳುಹಿಸಲು ಹುನ್ನಾರ ಮಾಡಿರುವುದು ಖಂಡನೀಯ ಎಂದರು.
ರೈತ ಸಂಘದ ಗೌರವಾಧ್ಯಕ್ಷ ಬಸನಗೌಡ ಗಂಗಪ್ಪಳವರ, ಎಸ್.ವಿ.ಚಪ್ಪರದಹಳ್ಳಿ, ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಮಹ್ಮದ್‌ಗೌಸ್ ಪಾಟೀಲ, ಶಂಕ್ರಪ್ಪ ಶಿರಗಂಬಿ, ಶಂಭು ಮುತ್ತಗಿ, ಶಾಂತನಗೌಡ ಪಾಟೀಲ, ರಾಜು ಮುತ್ತಗಿ, ಪರಮೇಶಗೌಡ ಪಾಟೀಲ, ಯಶವಂತ ತಿಮಕಾಪುರ, ದೊಡ್ಡಗೌಡ ಪಾಟೀಲ, ಮರಿಗೌಡ ಪಾಟೀಲ, ವೀರನಗೌಡ ಬಾಳಂಬೀಡ, ಜಕಣಾಚಾರಿ ಕಮ್ಮಾರ ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಇದ್ದರು.
Advertisement
ಪಟ್ಟಣದ ಎಪಿಎಂಸಿ ಆವರಣದಿಂದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಆರ್.ಎಚ್.ಭಾಗವಾನ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
Related Articles
Advertisement