Advertisement

ಪ್ರಿಯಾಂಕ್‌ಗೆ ಧೈರ್ಯವಿದ್ದರೆ ನನ್ನ ಹಗರಣ ತೆಗೆಯಲಿ: ವಾಲ್ಮೀಕಿ ನಾಯಕ

03:01 PM Mar 22, 2018 | Team Udayavani |

ವಾಡಿ: ನಾನು ಚಿತ್ತಾಪುರ ಶಾಸಕನಾಗಿದ್ದಾಗ ಯಾರ್ಯಾರ ಜೊತೆ ಎಲ್ಲೆಲ್ಲಿ ಒಪ್ಪಂದ ಮಾಡಿಕೊಂಡಿದ್ದೇನೆ ಎಂಬುದು ಎಲ್ಲವೂ ಗೊತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪದೇಪದೆ ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ಹಗರಣ ಬಯಲಿಗೆ ತರಲಿ. ನಾನು ಅವರಿಗೆ ಶರಣಾಗುತ್ತೇನೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ ಸವಾಲು ಹಾಕಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಯಾವುದೇ ಕಂಪನಿಯ ಗುಲಾಮನಾಗಿ ಅಧಿಕಾರ ನಡೆಸಿಲ್ಲ. ಯಾರಿಂದಲೂ ನಯಾ ಪೈಸೆ ಹಣ ಪಡೆದಿಲ್ಲ. ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಬದಲಿಗೆ ಎಸಿಸಿಯಲ್ಲಿದ್ದ ಗಣಾತೆ ಗುತ್ತಿಗೆದಾರನ 450 ಜನ ಕಾರ್ಮಿಕರಿಗೆ ಕಾಯಂ ಉದ್ಯೋಗ ಕೊಡಿಸಿದ್ದೇನೆ. ಅಮಾನತುಗೊಂಡಿದ್ದ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸುವ ಕಾರ್ಯ ಮಾಡಿದ್ದೇನೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ರಾಜಕೀಯಕ್ಕೆ ಬಂದಮೇಲೆ ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಮಾಡಿದ್ದಾರೆ ಎಂದು ನಾನು ಯಾವೂತ್ತೂ ಹೇಳಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಚಿತ್ತಾಪುರದ
ಓರಿಯಂಟ್‌ ಕಂಪನಿಯಲ್ಲಿ ಪ್ರಿಯಾಂಕ್‌ ಏನೇನು ಗೋಲ್‌ ಮಾಲ್‌ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕಾಗುತ್ತದೆ ಎಂದು ಆರೋಪಿಸಿದರು.

ಮಾ.20ರಂದು ಚಿತ್ತಾಪುರದಲ್ಲಿ ಕಾಂಗ್ರೆಸ್‌ ಸಮಾವೇಶ ಸಂಘಟಿಸಿದ ಸಚಿವ ಪ್ರಿಯಾಂಕ್‌, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಮಾವೇಶಕ್ಕೆ ಜನರನ್ನು ಕರೆ ತರಲು ಸಹಾಯ ಮಾಡುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಪ್ರತಿ ಗ್ರಾಪಂ ಪಿಡಿಒಗಳ ಮೂಲಕ ವಾಹನ ವ್ಯವಸ್ಥೆ ಮಾಡಿಸಿದ್ದಾರೆ. ಅಲ್ಲದೆ ಈ ಹಿಂದೆ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭಗಳನ್ನು ಕಾಂಗ್ರೆಸ್‌ ಸಮಾರಂಭಗಳಾಗಿ ಪರಿವರ್ತಿಸಿ ಸರಕಾರದ ಅನುದಾನ ಸ್ವಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಕಳೆದ ಉಪ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ಬಿಜೆಪಿ ಅಭ್ಯರ್ಥಿ ಗೆದ್ದರೆ ಚಿತ್ತಾಪುರವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ನೀಡಿದ್ದ ಭರವಸೆ ಏನಾಯಿತು ಎಂಬ “ಉದಯವಾಣಿ’ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ವಾಲ್ಮೀಕಿ ನಾಯಕ, ದತ್ತು ಪಡೆದು ಅಭಿವೃದ್ಧಿ ಮಾಡುವುದಕಿಂತ ಹೆಚ್ಚಿನ ಅನುದಾನವನ್ನು ಯಡಿಯೂರಪ್ಪ ಚಿತ್ತಾಪುರಕ್ಕೆ ನೀಡಿದ್ದಾರೆ. ಶೂನ್ಯ ಸ್ಥಿತಿಯಲ್ಲಿದ್ದ ಚಿತ್ತಾಪುರ ಪ್ರಗತಿ ಕಾಣಲು ಬಿಜೆಪಿ ಸರಕಾರ ನೀಡಿದ ಕೋಟ್ಯಂತರ ರೂ. ಅನುದಾನ ಕಾರಣವಾಗಿದೆ ಎಂದರು. ಪ್ರಿಯಾಂಕ್‌ ಖರ್ಗೆ ಶಾಸಕರಾಗಿ ಸಚಿವರಾದ ಬಳಿಕ ಐದು ವರ್ಷ ಯಾವೂದೇ ತಾಂಡಾಗಳಿಗೆ ಮತ್ತು ಬಹುತೇಕ ಗ್ರಾಮಗಳಿಗೆ ಒಮ್ಮೆಯೂ ಭೇಟಿ ನೀಡಿಲ್ಲ.

ಚುನಾವಣೆ ಹತ್ತಿರ ಬಂದಿರುವುದರಿಂದ ಅವರಿಗೆ ಈಗ ತಾಂಡಾಗಳು ನೆನಪಾಗುತ್ತಿವೆ. ಮತಕ್ಕಾಗಿ ಬಂಜಾರಾ ಜನರ
ಮನವೊಲಿಸಲು ಮುಂದಾಗಿದ್ದಾರೆ ಎಂದರು. ಓರಿಯಂಟ್‌ ಸಿಮೆಂಟ್‌ ಕಂಪನಿಯಲ್ಲಿ ಯಾರನ್ನೂ ಖಾಯಂ ನೌಕರರನ್ನಾಗಿ ನೇಮಿಸಿಕೊಳ್ಳುತ್ತಿಲ್ಲ. ಕಂಪನಿಯಲ್ಲಿ ಕಾರ್ಮಿಕ ಸಂಘ ಕಟ್ಟಲು ಆಡಳಿತ ಮಂಡಳಿ ಅವಕಾಶ ನೀಡುತ್ತಿಲ್ಲ. ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಗುತ್ತಿಗೆ ಕೆಲಸವನ್ನು ರದ್ದುಪಡಿಸಿ ಕಾಯಂಗೊಳಿಸಲಿ ಎಂದು ಸವಾಲು ಹಾಕಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next