Advertisement

ಗರ್ಭಿಣಿಯರಿಗೆ ವಿನಾಕಾರಣ ಸ್ಕ್ಯಾನ್‌ ಮಾಡಿದರೆ ಕ್ರಮ

03:45 AM Jan 10, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ಕ್ಯಾನಿಂಗ್‌ ಕೇಂದ್ರಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಈ ಸಂಬಂಧ ಎಲ್ಲ ಸ್ಕ್ಯಾನಿಂಗ್‌ ಕೇಂದ್ರಗಳ ಕಾರ್ಯ ವೈಖರಿ ಕುರಿತು ಹದಿನೈದು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆಯಾ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದೆ. ವಿಕಾಸಸೌಧದಲ್ಲಿ ಸೋಮವಾರ ನಡೆದ ಗರ್ಭಧಾರಣೆ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮದ ರಾಜ್ಯ ಮೇಲ್ವಿಚಾರಣಾ ಮಂಡಳಿ ಸಭೆಯ ನಂತರ ಸುದ್ದಿಗಾರರಿಗೆ ಆರೋಗ್ಯ ಸಚಿವ
ರಮೇಶ್‌ಕುಮಾರ್‌ ಈ ಮಾಹಿತಿ ನೀಡಿದರು.

Advertisement

ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಭ್ರೂಣ ಲಿಂಗಪತ್ತೆಯಂತಹ ನಿಯಮಬಾಹಿರ ಚಟುವಟಿಕೆಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭ್ರೂಣಲಿಂಗ ಪತ್ತೆಯಲ್ಲಿ ತೊಡಗಿರುವ, ಸಮರ್ಪಕ ದಾಖಲೆಗಳನ್ನು ಹೊಂದಿರದ, ಪರವಾನಗಿ ಇಲ್ಲದಿರುವ ಹಾಗೂ ಅಪೂರ್ಣ ವರದಿಗಳನ್ನು ನೀಡುತ್ತಿರುವ ಸ್ಕ್ಯಾನಿಂಗ್‌ ಕೇಂದ್ರಗಳನ್ನು ಪತ್ತೆಹಚ್ಚಿ, ಹದಿನೈದು ದಿನಗಳಲ್ಲಿ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹಾಗೊಂದು ವೇಳೆ 15 ದಿನಗಳಲ್ಲಿ ಅಧಿಕಾರಿಗಳು ವರದಿ ಸಲ್ಲಿಸದಿದ್ದರೆ, ಆ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದೂ ಎಚ್ಚರಿಸಿದರು.

ಕಾರಣವಿಲ್ಲದೆ ಸ್ಕ್ಯಾನ್‌ ಮಾಡಿದರೆ ಶಿಸ್ತು ಕ್ರಮ: ಇದಲ್ಲದೆ, ಗರ್ಭಿಣಿಗೆ ಪ್ರಸೂತಿ ತಜ್ಞರು ಸ್ಕ್ಯಾನ್‌ಗೆ ಸೂಚಿಸುವಾಗ ನಿರ್ದಿಷ್ಟ ಕಾರಣಗಳನ್ನು ನೀಡತಕ್ಕದ್ದು. ಕಾರಣಗಳನ್ನು ನೀಡದೆ, ಅತ್ತ ಸ್ಕ್ಯಾನಿಂಗ್‌ ಕೇಂದ್ರಗಳು ಕೂಡ ಕಾರಣಗಳನ್ನು
ತಿಳಿಯದೆ ಸ್ಕ್ಯಾನ್‌ ಮಾಡಿದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವ ರಮೇಶ್‌ಕುಮಾರ್‌ ಆದೇಶಿಸಿದರು.
ಪ್ರಸೂತಿ ತಜ್ಞರು ತಮ್ಮಲ್ಲಿಗೆ ಬಂದ ಗರ್ಭಿಣಿಯರಿಗೆ ಸ್ಕ್ಯಾನ್‌ ಮಾಡಿಸಿಕೊಳ್ಳಲು ಸೂಚಿಸುತ್ತಾರೆ. ಆದರೆ, ಇದಕ್ಕೆ ನಿಖರ ಕಾರಣ ತಿಳಿಸಿರುವುದಿಲ್ಲ.

ಅದೇ ರೀತಿ, ಸ್ಕ್ಯಾನ್‌ ಸೆಂಟರ್‌ಗಳು ಕೂಡ ಕಾರಣಗಳನ್ನು ಕೇಳುವುದಿಲ್ಲ. ಇನ್ಮುಂದೆ ಹೀಗೆ ವಿನಾಕಾರಣ ಸ್ಕ್ಯಾನ್‌ಗೆ ಸೂಚಿಸುವಂತಿಲ್ಲ. ಕಡ್ಡಾಯವಾಗಿ ಇಂತಹದ್ದೇ ಕಾರಣಕ್ಕೆ ಸ್ಕ್ಯಾನಿಂಗ್‌ಗೆ ಸೂಚಿಸಲಾಗಿದೆ ಎಂದು ವೈದ್ಯರು
ನಮೂದಿಸಬೇಕು. ಇದನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಪ್ರತಿ ತಿಂಗಳು ಆಯಾ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗೆ ಸ್ಕ್ಯಾನಿಂಗ್‌ ಕೇಂದ್ರಗಳಿಂದ ಗರ್ಭಿಣಿಯರ ಸ್ಕ್ಯಾನ್‌ಗಳನ್ನು
ಎಷ್ಟು ಮಾಡಲಾಗಿದೆ ಎಂಬುದರ ಮಾಹಿತಿ ಬರುತ್ತದೆ. ಆ ಅಂಕಿ-ಅಂಶಗಳ ಆಧಾರದ ಮೇಲೆ ವಿಶ್ಲೇಷಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ವರ್ಷದಲ್ಲಿ 20 ಪ್ರಕರಣ ದಾಖಲು:
2002ರಿಂದ ಈವರೆಗೆ ನೋಂದಣಿ ಮಾಡಿಸದೆ ಕಾರ್ಯನಿರ್ವಹಿಸುತ್ತಿರುವ, ಸಮರ್ಪಕ ದಾಖಲೆಗಳನ್ನು ಹೊಂದಿರದಿರುವುದು ಸೇರಿದಂತೆ ಮತ್ತಿತರ ನಿಯಮಗಳ ಉಲ್ಲಂಘನೆ ಮಾಡಿದ್ದ 72 ಸ್ಕ್ಯಾನಿಂಗ್‌ ಕೇಂದ್ರಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಪೈಕಿ ಕಳೆದ ಒಂದು ವರ್ಷದಲ್ಲಿ ಇಂತಹ 20 ಪ್ರಕರಣಗಳು ದಾಖಲಾಗಿದ್ದು, ಸ್ಕ್ಯಾನಿಂಗ್‌
ಯಂತ್ರಗಳನ್ನು ಜಪ್ತಿ ಮಾಡಲಾಗಿದೆ. ಇದುವರೆಗೆ ಯಾವೊಂದು ಕೇಸಿನಲ್ಲೂ ಶಿಕ್ಷೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next