ಹಳಿಯಾಳ: ಈ ಬಾರಿ ಹಳಿಯಾಳದಲ್ಲಿ ಪಿಒಪಿ ಗಣೇಶನ ಮೂರ್ತಿಗಳಿಗೆ, ಸಾರ್ವಜನಿಕ, ಜನ ಸಂದನಿ ಇರುವ ಸ್ಥಳದಲ್ಲಿ ಪಟಾಕಿ ಮಾರಾಟಕ್ಕೆ ಹಾಗೂ ಭಾರೀ ಶಬ್ದ ಹೊರಸುಸುವ ಡಿಜೆ ಸೌಂಡ್ ಸಿಸ್ಟಮ್‌ಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು ಯಾರಾದರು ಕಾನೂನು ಉಲ್ಲಂಘಿಸಿದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಮಿನಿವಿಧಾನಸೌಧದ ತಾಹಶೀಲ್ದಾರ್ ಕಚೇರಿಯಲ್ಲಿ ನಡೆದ ಪರಿಸರಕ್ಕೆ ಹಾನಿಕಾರಕ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ನಿಷೇಧ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪಿಒಪಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಿದರೆ 10 ಸಾವಿರ ರೂ. ದಂಡ, ಸಾರ್ವಜನಿಕ ಪ್ರದೇಶದಲ್ಲಿ ಪಟಾಕಿಗಳ ಮಾರಾಟ ಹಾಗೂ ಭಾರಿ ಶಬ್ದ ಮಾಡುವ ಡಿಜೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ತಾಲೂಕಾಡಳಿತದ ಸೂಚನೆ ಪಾಲಿಸದೆ ಇದ್ದರೆ ಡಿಜೆ ಪರಿಕರಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಸ್ಪಷ್ಟ ಸಂದೇಶ ನೀಡಿದ ತಹಶೀಲ್ದಾರ್ ಗುಳಗುಳಿ, ಗಣೇಶನ ಹಬ್ಬವನ್ನು ಪಟಾಕಿ ರಹಿತ, ಪರಿಸರ ಸ್ನೇಹಿ ಹಾಗೂ ಸ್ನೇಹ ಮತ್ತು ಸೌಹಾರ್ದದಿಂದ ಆಚರಿಸಲು ಮನವಿ ಮಾಡಿದರು.
ಸಿಪಿಐ ಬಿ.ಎಸ್. ಲೋಕಾಪುರ, ಪಿಎಸೈ ಆನಂದಮೂರ್ತಿ ಸಿ, ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಅಗ್ನಿಶಾಮಕ ಠಾಣಾಧಿಕಾರಿ ಪಿ.ಎಸ್. ಜಾರ್ಜ್, ಗಣೇಶ ಮೂರ್ತಿಕಾರ ಶಿವಾನಂದ ತೇಲಿ, ಮಲ್ಲಿಕಾರ್ಜುನ ಕುಂಬಾರ, ನಾಗಪ್ಪ ಗೌಡ್ರ, ಶಂಕರ ಗೌಡ್ರ ಹಾಗೂ ಪಟಾಕಿ ಮಾರಾಟ ಸಂಘದ ಅಧ್ಯಕ್ಷ ಸತ್ಯಜೀತ ಗಿರಿ ಇದ್ದರು.