ಉಪ್ಪುಂದ: ಪ್ರಯತ್ನದ ಜತೆ ಭಗವಂತನ ಆಶೀರ್ವಾದ ಇದ್ದರೆ ಜೀವನದಲ್ಲಿ ಯಶಸ್ಸು ಬೇಗ ಪಡೆದು ಕೊಳ್ಳಬಹುದು. ದೇವರನ್ನು ಪೂಜಿಸಿದಾಗ ಮಾನಸಿಕ ಧೈರ್ಯ, ಚೈತನ್ಯ ದೊರೆಯುತ್ತದೆ. ಗುಡಿಯೊಳಗಿನ ದೇವರ ಆರಾಧನೆ ಮಾತ್ರ ಸಾಲದು. ಎಲ್ಲರೊಳಗೂ ದೇವರು ನೆಲೆಸಿದ್ದಾನೆ.
ಇತರರನ್ನು ನಿಂದಿಸದೆ ಜೀವನ ನಡೆಸಿದರೆ ಜೀವನದ ಜತೆಗೆ ಭಗವಂತನ ಆರಾಧನೆಯನ್ನೂ ಮಾಡಿದಂತಾಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತಿರ್ಥ ಸ್ವಾಮೀಜಿ ಹೇಳಿದರು.
ಬುಧವಾರ ರಾತ್ರಿ ಉಳ್ಳೂರು ಮೇಕೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನಃ ಅಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಶ್ರೀ ಗಣಪತಿ, ಶಾಸ್ತಾ, ನಾಗ ದೇವರ ನೂತನ ಪ್ರತಿಷ್ಠೆ, ನೂತನ ಸುತ್ತು ಪೌಳಿ, ತೀರ್ಥ ಬಾವಿ, ರಾಜಗೋಪುರಗಳ ಅರ್ಪಣ ಮಹೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ಪ್ರವೃತ್ತಿ ಮತ್ತೂಬ್ಬರ ದುಃಖಕ್ಕೆ ಕಾರಣವಾದರೆ ಭಗವಂತ ಮೆಚ್ಚುವುದಿಲ್ಲ. ಗುಡಿಯಲ್ಲಿ ಮಾಡುವ ಪೂಜೆ ಸಾಂಕೇತಿಕವಾಗಿದ್ದು, ಇದರಿಂದ ಸ್ಫೂರ್ತಿ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮೊಳಗಿನ ಅಸುರ ಭಾವವನ್ನು ದೂರ ಮಾಡಿದಾಗ ಭಗವಂತ ಹರಸುತ್ತಾನೆ ಎಂದರು.
ಈ ಸಂದರ್ಭ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕಮಲಶಿಲೆ ಬ್ರಾಹ್ಮಿà ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಎಸ್. ಸಚ್ಚಿದಾನಂದ ಚಾತ್ರ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು.ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ದೇಗುಲ ನಿರ್ಮಾಣ ಕಾರ್ಯಕ್ಕೆ ಶ್ರಮಿಸಿದ ಎಲ್ಲ ಭಕ್ತರನ್ನು ಸ್ಮರಿಸಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು.