ಮೌಡ್ಯಗಳಿಂದ ಹೊರಬಾರದೇ ಇರುವುದು ನಗೆಪಾಟಲಿನ ವಿಷಯವಾಗಿದೆ. ಧರ್ಮ, ದೇವರ ಹೆಸರಿನಲ್ಲಿ ಹೆಣ್ಣನ್ನು ಪ್ರತಿಸ್ತರದಲ್ಲಿಯೂ ಶೋಷಣೆಗೆ ಗುರಿ ಮಾಡಿರುತ್ತಾರೆ. ಗರ್ಭ ಮತ್ತು ಮುಟ್ಟಿನ ಸಂದರ್ಭದಲ್ಲಿ ಹೆಣ್ಣನ್ನು ಮಡಿ-ಮೈಲಿಗೆಯ ಹೆಸರಿನಲ್ಲಿ ಈ ಸಮಾಜ ಈಗಲೂ ಕೀಳಾಗಿ ಕಾಣುತ್ತಿದೆ.
Advertisement
ಒಂದೊಂದು ಜಾತಿ-ಧರ್ಮದಲ್ಲಿ ಮುಟ್ಟಿನ ಸಂದರ್ಭದಲ್ಲಿ ಒಂದೊಂದು ರೀತಿಯ ಆಚರಣೆಯನ್ನು ಮಾಡುತ್ತಿದ್ದಾರೆ. ಮುಟ್ಟಾದ ಹೆಣ್ಣುಮಗಳನ್ನು ಯಾರೂ ಮುಟ್ಟುವಂತಿಲ್ಲ. ಆಕೆ ದೇವರ ಕೋಣೆ ಹಾಗೂ ಅಡುಗೆ ಮನೆಯನ್ನು ಪ್ರವೇಶಿಸುವಂತಿಲ್ಲ. ಇನ್ನೂ ಕೆಲವು ಪ್ರದೇಶಗಳಲ್ಲಿ ಆಕೆಯನ್ನು ಮನೆಯ ಹೊರಗೆ ಪ್ರತ್ಯೇಕವಾದ ಕೋಣೆಯಲ್ಲಿ ಇರಿಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗೊಲ್ಲ ಸಮುದಾಯದ ಮಹಿಳೆಯರು ಮುಟ್ಟಾದಾಗ ಬಸ್ಸು ನಿಲ್ದಾಣಗಳಲ್ಲಿ ರಾತ್ರಿಯನ್ನು ಕಳೆಯುತ್ತಿದ್ದಾರೆ ಎನ್ನುವುದು ಮೌಡ್ಯದ ಪರಮಾವಧಿಯಾಗಿ ಕಾಣುತ್ತಿಲ್ಲವೆ?
ಮುಟ್ಟು ಅಸಹ್ಯ ಅಥವಾ ಮೈಲಿಗೆಯಾಗಿದ್ದರೆ, ಆ ದೇವರು ಹೆಣ್ಣಿಗೆ ಅಂತಹ ಜೈವಿಕ ಕ್ರಿಯೆಯನ್ನು ಕೊಡುತ್ತಿರಲಿಲ್ಲ. ಮುಟ್ಟು ಹೆಣ್ಣಿಗೆ ಇರುವಂತಹ ವಿಶೇಷವಾದ ಶಕ್ತಿ. ಇದೊಂದು ಪ್ರಕೃತಿಯ ನಿಯಮ. ಹಸಿವು, ಬಾಯಾರಿಕೆ ಹಾಗೂ ವಿಸರ್ಜನೆ ಇದ್ದ ಹಾಗೆ ತಿಂಗಳ ಮುಟ್ಟು ಕೂಡ. ವೇದಗಳ ಕಾಲದಲ್ಲಿಯೂ ಯಾವುದೇ ಗ್ರಂಥದಲ್ಲಿಯೂ ಮುಟ್ಟನ್ನು ಮೈಲಿಗೆ ಎಂದಾಗಲಿ ಹಾಗೂ ಆ ದಿನಗಳಲ್ಲಿ ಆಕೆ ದೇವರ ಕಾರ್ಯವನ್ನು ಮಾಡಬಾರದು ಎಂದಾಗಲೀ ಉಲ್ಲೇಖಗೊಂಡಿಲ್ಲವೆಂದು ಹೇಳುತ್ತಾರೆ. ಈ ಮಡಿ-ಮೈಲಿಗೆಯನ್ನು ಹುಟ್ಟಿಸಿಕೊಂಡವರು ಈ ಬುದ್ಧಿಹೀನ ಜನಗಳೇ ಹೊರತು ದೇವರು ಹಾಗೂ ಧರ್ಮಗ್ರಂಥಗಳು ಅಲ್ಲ. ದುರ್ಬಲ ಮನಸ್ಸಿನ ಹೆಂಗಸರು ಈ ಮೌಡ್ಯಗಳಿಗೆ ಬೇಗ ಶರಣಾಗುತ್ತಾರೆ.
Related Articles
Advertisement
ಯಾವುದೇ ಧರ್ಮಗ್ರಂಥದಲ್ಲಿ ಹೆಣ್ಣನ್ನು ಅಥವಾ ಹೆಣ್ಣಿನ ಯಾವುದೇ ಅಂಗವನ್ನು ಅಶುದ್ಧ ಎಂದು ಪರಿಗಣಿಸಿಲ್ಲ. ಕೆಲವು ಧಾರ್ಮಿಕ ಗ್ರಂಥ ಹಾಗೂ ಪುರಾಣ ಗ್ರಂಥಗಳಲ್ಲಿ ಹೆಣ್ಣು ದೇವರೆಂದು ಪೂಜಿಸಲ್ಪಡುತ್ತಾಳೆ.
ಅಸ್ಸಾಂನಲ್ಲಿರುವ ಕಾಮಾಖ್ಯ ದೇವಾಲಯದಲ್ಲಿ ದೇವಿಯ ಯೋನಿಯನ್ನು ಪೂಜಿಸುತ್ತಾರೆ ಹಾಗೂ ಆಕೆ ಆಷಾಢ ಮಾಸದಲ್ಲಿ ಮುಟ್ಟಾಗುತ್ತಾಳೆ, ಆಕೆಯ ಮುಟ್ಟಾದ ರಕ್ತದಿಂದ ಬ್ರಹ್ಮಪುತ್ರ ನದಿಯು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಹಾಗೂ ಈ ದೇವಾಲಯಕ್ಕೆ ಎಲ್ಲ ಮಹಿಳೆಯರಿಗೂ ಎಲ್ಲ ದಿನಗಳಲ್ಲಿ ದೇವಾಲಯಕ್ಕೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಿರುವಾಗ ಈ ಸಮಾಜವು ಮುಟ್ಟಿನ ಬಗ್ಗೆ ಇರುವ ವೈಜ್ಞಾನಿಕ ಕಾರಣಗಳನ್ನು ಪರಿಗಣಿಸದೆ, ಧರ್ಮ ಹಾಗೂ ದೇವರ ಹೆಸರಿನಲ್ಲಿ ಹೆಣ್ಣನ್ನು ಅಶುದ್ಧ ಎಂದು ಪರಿಗಣಿಸುತ್ತಿದೆ. ಈ ಮೂಢನಂಬಿಕೆಯನ್ನು ಬೇರು ಸಹಿತ ಕಿತ್ತು ಹಾಕಲು ಈ ಸಮಾಜ, ಸರ್ಕಾರ ಹಾಗೂ ದೇವಾಲಯಗಳ ಆಡಳಿತ ವರ್ಗ ಕೈಜೋಡಿಸಬೇಕು. ಬಹುತೇಕ ಹೆಣ್ಣು ಮಕ್ಕಳಿಗೆ ಮುಟ್ಟಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ, ಹಾಗೂ ಅವರು ಈ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ನಾಚಿಕೆ ಹಾಗೂ ಅಸಹ್ಯ ಪಡುತ್ತಾರೆ. ನಮಗೆ ಇದು ದೇವರ ಶಾಪ ಹಾಗೂ ಕಾಯಿಲೆ ಎಂದೆಲ್ಲ ತಿಳಿದುಕೊಂಡಿರುವರು. ಹೆತ್ತವರು ಹಾಗೂ ಶಿಕ್ಷಕರು, ಹೆಣ್ಣು ಮಕ್ಕಳು ಹದಿಹರೆಯಕ್ಕೆ ಬರುವ ಮೊದಲೇ ಮುಟ್ಟಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಅವರ ಅಂಜಿಕೆ ಹಾಗೂ ನಾಚಿಕೆಯನ್ನು ನಿವಾರಣೆ ಮಾಡಬೇಕು.
ಮುಟ್ಟಿನ ಬಗ್ಗೆ ಇರುವ ಕೀಳರಿಮೆಯನ್ನು ತೊರೆಯಲು ದೇವಾಲಯಗಳಲ್ಲಿ ಮಹಿಳೆಯರಿಗೆ ಎಲ್ಲ ದಿನಗಳಲ್ಲಿ ಬರಲು ಅನುಮತಿಯನ್ನು ಕಲ್ಪಿಸಬೇಕಾಗಿದೆ. ವಿದ್ಯಾವಂತರಾಗಿರುವ ನಾವು ಮನೆಯಲ್ಲಿ ಹೀನ ಸಂಪ್ರದಾಯವನ್ನು ಆಚರಿಸಬಾರದು ಹಾಗೂ ಮುಟ್ಟಿನ ಬಗ್ಗೆ ತಲೆಯಲ್ಲಿ ತುಂಬಿರುವ ಸುಳ್ಳು ಮಾಹಿತಿಯನ್ನು ಮನಸ್ಸಿನಿಂದ ಮೊದಲು ಕಿತ್ತು ಹಾಕಬೇಕು. ಎಲ್ಲರಲ್ಲೂ ಇಂತಹ ಮಾನಸಿಕ ದೃಢತೆ ಮತ್ತು ಧೈರ್ಯ ತುಂಬಬೇಕು.
– ತನುಜಾದ್ವಿತೀಯ ಎಂ. ಕಾಂ.
ಮಂಗಳೂರು ವಿಶ್ವವಿದ್ಯಾನಿಲಯ