ನವದೆಹಲಿ:“ಒಬ್ಬ ವ್ಯಕ್ತಿಯು ಸರ್ಜಿಕಲ್ ಗ್ಲೌಸ್ ಧರಿಸಿಕೊಂಡು ಯಾವುದಾದರೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ, ಅವನನ್ನು ಸುಮ್ಮನೆ ಬಿಡಬಹುದೇ?’
ಇದು ಸುಪ್ರೀಂ ಕೋರ್ಟ್ ಮುಂದೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕೇಳಿದ ಪ್ರಶ್ನೆ. ಆಂಗಿಕ ಸ್ಪರ್ಶ ಅಥವಾ ದೈಹಿಕ ಸಂಪರ್ಕ ಮಾಡದೆಯೇ ಲೈಂಗಿಕ ದೌರ್ಜನ್ಯ ಎಸಗಿದರೆ ಅದನ್ನು ಪೋಕ್ಸೋ ಕಾಯ್ದೆ ಯಡಿ “ಲೈಂಗಿಕ ಹಲ್ಲೆ’ ಎಂದು ಪರಿಗಣಿಸಲಾಗದು ಎಂಬ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ವೇಳೆ ಅಟಾರ್ನಿ ಜನರಲ್ ಈ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ:ರಾಯರ ಮಧ್ಯಾರಾಧನೆ ಆಗಮಿಸಿದ ಗಾಲಿ ಜನಾರ್ದನ ರೆಡ್ಡಿ
ನ್ಯಾಯಪೀಠದ ತೀರ್ಪಿಗೆ ಭಾರೀ ವಿರೋಧ ವ್ಯಕ್ತಪಡಿಸಿದ ಅವರು, ಪೋಕ್ಸೋ ಕಾಯ್ದೆಯಡಿ ಒಂದು ವರ್ಷದಲ್ಲಿ 43 ಸಾವಿರ ಕೇಸುಗಳು ದಾಖಲಾಗಿವೆ. ಅತ್ಯಾಚಾರ ಎಂದು ಪರಿಗಣಿಸಲು ದೈಹಿಕ ಸಂಪರ್ಕವೇ ಪ್ರಧಾನವಾದದ್ದು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಪ್ರತಿಪಾದಿಸಿದ್ದು ಅತ್ಯಂತ ಆಘಾತದ ವಿಚಾರ.
ಮುಂದಿನ ದಿನಗಳಲ್ಲಿ ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದು ವಾದಿಸಿದರು.ಹಲವು ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದ ನ್ಯಾ.ಪುಷ್ಪಾ ಗಣೇದಿವಾಲಾ ನೇತೃತ್ವದ ನ್ಯಾಯಪೀಠ ಜ.19ರಂದು “ಅಪ್ರಾಪ್ತ ಬಾಲಕಿಯ ದೇಹದಿಂದ ವಸ್ತ್ರಗಳನ್ನು ಕಳಚದೆ, ದೇಹ ಮುಟ್ಟಿದ್ದಾನೆ ಎಂದಾದರೆ ಅದನ್ನು ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಆದೇಶ ನೀಡಿತ್ತು.