ಬೆಳಗಾವಿ: ರಾಜ್ಯದ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಕನಿಷ್ಠ 150 ಸ್ಥಾನಗಳನ್ನು ನೀಡಬೇಕು. ಇಲ್ಲದಿದ್ದರೆ ಮತ್ತೆ ಕಳ್ಳರು ನಮ್ಮ ಶಾಸಕರನ್ನು ಕದ್ದುಕೊಂಡು ಹೋಗಿ ಸರಕಾರ ರಚಿಸುತ್ತಾರೆ. ಆಗ ರಾಜ್ಯದಲ್ಲಿ ಮತ್ತೂಮ್ಮೆ ಕಳ್ಳರ ಸರಕಾರ ಬರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಯಮಕನಮರಡಿ ಕ್ಷೇತ್ರದಲ್ಲಿ ಶನಿವಾರ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ವೇಳೆ ಮತ್ತೆ ಕಳ್ಳರ ಸರಕಾರ ಬಂದರೆ ಬಡ- ಮಧ್ಯಮ ವರ್ಗದ ಜನರ ಲೂಟಿ ಆಗಲಿದೆ. ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು ಎಂದರು.
ಭಾಷಣದುದ್ದಕ್ಕೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ರಾಹುಲ್, ಕರ್ನಾಟಕದಲ್ಲಿ ಮೇಲಿಂದ ಮೇಲೆ ಪ್ರವಾಸ ಮಾಡುತ್ತಿರುವ ಮೋದಿ ಅವರು ಇದುವರೆಗೆ ಎಲ್ಲಿಯೂ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಏನು ಮಾಡುತ್ತೇವೆ ಎಂಬುದನ್ನು ಹೇಳಿಲ್ಲ. ಆದರೆ ಪ್ರತಿ ಭಾಷಣದಲ್ಲಿ ಒಂದಿಲ್ಲೊಂದು ನೆಪ ಹೇಳುತ್ತಾರೆ. ಭಾವನಾತ್ಮಕವಾಗಿ ಜನರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಾರೆ ಎಂದರು.
ಕರ್ನಾಟಕದಲ್ಲಿ ಪ್ರವಾಹ ಬಂದಾಗ ಪ್ರಧಾನಿ ಮೋದಿ ಏನು ಮಾಡಿದ್ದಾರೆ? ಎರಡು ರಾಜ್ಯಗಳ ನಡುವೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಕರ್ನಾಟಕದ ಪರ ಏನು ಮಾಡಿದ್ದಾರೆಂದು ಪ್ರಶ್ನಿಸಿದ ರಾಹುಲ್, ಇವತ್ತು ಪ್ರಧಾನಿಗಳು ಯಾವ ಮುಖ್ಯ ವಿಷಯದ ಬಗ್ಗೆಯೂ ಮಾತನಾಡದೆ, ನನಗೆ 91 ಸಲ ಬೈದರು ಎಂಬುದರ ಲೆಕ್ಕ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುತ್ತಿದ್ದಂತೆ ಈಗಾಗಲೇ ನೀಡಿರುವ ಐದು ಗ್ಯಾರಂಟಿ ಭರವಸೆಗಳನ್ನು ತತ್‌ಕ್ಷಣ ಕಾರ್ಯರೂಪಕ್ಕೆ ತರುತ್ತೇವೆ. ಮೊದಲ ಸಂಪುಟ ಸಭೆಯಲ್ಲೇ ಈ ಭರವಸೆಗಳಿಗೆ ಅನುಮೋದನೆ ನೀಡಲಾಗುವುದು ಎಂದರು.
ನಾವು ಬಿಜೆಪಿಯಂತೆ ಸುಳ್ಳು ಭರವಸೆ ನೀಡಿಲ್ಲ. ನೋಟು ಅಮಾನ್ಯದಂತಹ ಕೆಟ್ಟ ಕೆಲಸಗಳನ್ನು ಮಾಡಿಲ್ಲ. ಬಿಜೆಪಿ ಮೂರು ವರ್ಷಗಳಲ್ಲಿ ಜನರಿಂದ ಲೂಟಿ ಮಾಡಿದ ಹಣವನ್ನು ಗೃಹಲಕ್ಮಿ, ಸಖೀ ಮೊದಲಾದ ಐದು ಗ್ಯಾರಂಟಿ ಯೋಜನೆಗಳ ಮೂಲಕ ಮರಳಿ ಜನರಿಗೆ ಕೊಡುತ್ತಿದ್ದೇವೆ ಎಂದರು.