ಕುಮಟಾ: ತಾಲೂಕಿನಲ್ಲಿ ಕಂದಾಯ ಭೂಮಿ ಇಲ್ಲದಿರುವುದರಿಂದ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಶಾಶ್ವತವಾಗಿ ಸಮಸ್ಯೆ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. ಮಾಲ್ಕಿ ಜಾಗ ಕೊಡಲು ಯಾರಾದರೂ ಸಿದ್ಧರಿದ್ದರೆ ಅದನ್ನು ಸರ್ಕಾರದ ವತಿಯಿಂದ ಖರೀದಿಸಿ ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಅವರು ತಾಲೂಕಿನ ಕೋನಳ್ಳಿ, ಊರಕೇರಿ ಭಾಗದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ಕಂದಾಯ ಭೂಮಿ ಇಲ್ಲದಿರುವುದರಿಂದ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಪ್ರತ್ಯೇಕ ಜಾಗ ಕೊಡುವುದು ಅಸಾಧ್ಯವಾಗಿದೆ. ಯಾರಾದರೂ ಜಾಗ ಇದ್ದರೆ ಕೊಡಿ ಎಂದರು.
ಕರಾವಳಿ ಭಾಗದಲ್ಲಿ ಈ ವರ್ಷ ವಿಪರೀತ ಮಳೆಯಾಗಿದೆ. ಈ ಭಾಗದಲ್ಲಿ ತಗ್ಗು ಪ್ರದೇಶದಲ್ಲಿ ಮನೆಗಳು ಜಾಸ್ತಿಯಾಗುತ್ತಿದೆ. ಎಲ್ಲೆಂದರಲ್ಲಿ ಜನವಸತಿ ಬೆಳೆಯುತ್ತಿದೆ. ಹಳ್ಳ-ಹೊಳೆಗಳು ಹೂಳು ಸಮಸ್ಯೆಯಾಗುತ್ತಿದೆ. ಪಟ್ಟಣದಲ್ಲಿ ರಾಜಾ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯುವಂತಾದರೆ ಸಮಸ್ಯೆ ಬಗೆಹರಿಯುತ್ತದೆ. ಇದಕ್ಕಾಗಿ ಕನಿಷ್ಠ 3 ಕೋಟಿ ರೂ. ಬೇಕು. ಕೇಂದ್ರದ ಸಹಾಯ ಪಡೆದು ರಾಜಾ ಕಾಲುವೆ ನಿರ್ವಹಣೆಗೆ ಪ್ರಯತ್ನಿಸುತ್ತೇನೆ. ಮೊನ್ನೆ ಪ್ರವಾಹದ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿದ್ದರೂ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಸೂಚಿಸಿದ್ದೆ. ವರ್ಷಕ್ಕೊಮ್ಮೆ ಬರುವ ಪ್ರವಾಹ ನಿಲ್ಲಿಸಲಾಗದು. ಆದರೆ ಪ್ರವಾಹ ಪರಿಣಾಮ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು.
ತಹಶೀಲ್ದಾರ್ ಮೇಘರಾಜ ನಾಯ್ಕ, ಇಒ ಸಿ.ಟಿ. ನಾಯ್ಕ, ಜಿಪಂ ಎಇ ರಾಮದಾಸ ಗುನಗಿ, ಲೋಕೋಪಯೋಗಿ ಎಇ ರಾಜು ಶಾನಭಾಗ ಇನ್ನಿತರರು ಇದ್ದರು.