ಬೆಂಗಳೂರು: ಮುಂದಿನ ಜನವರಿ 15ರೊಳಗೆ ಮಹದಾಯಿ-ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸಲು ಮೂರೂ ರಾಜಕೀಯ ಪಕ್ಷಗಳು ಮುಂದಾಗದಿದ್ದಲ್ಲಿ ಹೊಸದಾಗಿ ಉದಯವಾಗಿರುವ ಜನ ಸಾಮಾನ್ಯರ ಪಕ್ಷದ ಅಡಿಯಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಎಚ್ಚರಿಸಿದ್ದಾರೆ.
ನಗರದ ಟೌನ್‌ಹೌಲ್‌ನಲ್ಲಿ ಶುಕ್ರವಾರ ಜನ ಸಾಮಾನ್ಯರ ವೇದಿಕೆ ಹಾಗೂ ಮಹದಾಯಿ- ಕಳಸಾ ಬಂಡೂರಿ ಹೋರಾಟ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ರಾಜ್ಯದ ನೆಲ, ಜಲ, ಭಾಷೆಯ ರಕ್ಷಣೆ ಹಾಗೂ ಪ್ರಾದೇಶಿಕ ಅಸಮಾನತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಹಲವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿರುವ ಉತ್ತರ ಕರ್ನಾಟಕದಲ್ಲಿ ಕಳಸಾ ಬಂಡೂರಿ ಸಮಸ್ಯೆ ಬಹಳ ಪ್ರಮುಖವಾದದ್ದು. ಹಲವಾರು ದಶಕಗಳಿಂದ ಈ ಬಗ್ಗೆ ರಾಜಕಾರಣಿಗಳು ನಿರ್ಲಕ್ಷ್ಯ ತೋರುತ್ತಿವೆ. ಈ ವಿಚಾರದಲ್ಲಿ ರಾಜ್ಯದ ಪ್ರಮುಖ ಮೂರು ಪಕ್ಷಗಳಿಗೆ ಜನರ ಹಿತಕ್ಕಿಂತ ಪಕ್ಷವೇ ದೊಡ್ಡದು ಎನ್ನುವಂತಾಗಿರುವುದರಿಂದ ಸಮಸ್ಯೆ ಬಗೆರಿಸಲು ಕಾಳಜಿ ವಹಿಸುತ್ತಿಲ್ಲ.
ಈ ಹಿನ್ನಲೆಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಜನ ಸಾಮಾನ್ಯರಿಂದಲೇ ಪ್ರಾರಂಭಗೊಂಡ ಪಕ್ಷದ ಅಗತ್ಯವಿದ್ದು, ಅದರಂತೆ ಜನ ಸಾಮಾನ್ಯರ ಪಕ್ಷದ ಮೂಲಕ ಹೋರಾಟ ನಡೆಸಲಾಗುವುದು ಎಂದರು.
ಕಳಸಾ ಬಂಡೂರಿ ಕೇಂದ್ರ ಯುವ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಹದಾಯಿ ಯೋಜನೆಗೆ ಎಳ್ಳು ನೀರು ಬಿಟ್ಟಿದ್ದಾರೆ. ಹೀಗಾಗಿ ನಮ್ಮ ಬೇಡಿಕೆಯನ್ನು ನಾವೇ ಈಡೇರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಜನ ಸಾಮಾನ್ಯರ ಪಕ್ಷ ಉದಯವಾಗಿದೆ ಎಂದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಸಿದ್ದರಾಮ ಸ್ವಾಮೀಜಿ, ಜನ ಸಾಮಾನ್ಯರ ವೇದಿಕೆಯ ಅಧ್ಯಕ್ಷ ಡಾ. ಅಯ್ಯಪ್ಪ, ಜೆಡಿಯು ಮುಖಂಡ ಡಾ.ಎಂ.ಪಿ.ನಾಡಗೌಡ, ಜನ ಸಾಮಾನ್ಯರ ವೇದಿಕೆ ಸಂಚಾಲಕ ಟಿ.ವಿ.ಸತೀಶ್, ಹೋರಾಟಗಾರ ಆಂಜನೇಯ ರೆಡ್ಡಿ ಮತ್ತಿತರರು ಇದ್ದರು. ಇದೇವೇಳೆ ಜನ ಸಾಮಾನ್ಯರ ಪಕ್ಷದ ಲಾಂಛನ ಹೊಲ ಉಳುತ್ತಿರುವ ಟ್ರಾಕ್ಟರ್‌ಅನ್ನು ಚಂದ್ರಶೇಖರ ಪಾಟೀಲ ಅನಾವರಣಗೊಳಿಸಿದರು.