Advertisement
ಮಳೆಗಾಲದ ಪ್ರಾರಂಭದಿಂದಲೇ ನಗರದ ಅನೇಕ ಕಡೆಗಳಲ್ಲಿ ರಸ್ತೆ ಮಧ್ಯೆ ಮ್ಯಾನ್‌ಹೋಲ್ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಳೆದ ಆರು ತಿಂಗಳಿನಿಂದ ಒಂದೊಂದು ಪ್ರದೇಶಗಳಲ್ಲಿ ನಿರಂತರವಾಗಿ ಮ್ಯಾನ್‌ಹೋಲ್ ಕಾಮಗಾರಿ ನಡೆಯುತ್ತಿದೆ. ಮಳೆಯಿಂದ ವಿವಿಧ ಕಡೆಗಳಲ್ಲಿ ಮಾನ್‌ಹೋಲ್‌ಗಳು ಬ್ಲಾಕ್ ಆಗಿದ್ದು, ಅವುಗಳನ್ನು ದುರಸ್ತಿಗೊಳಿಸಿ ಒಳಚರಂಡಿ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರುವುದು ಕೂಡ ಈಗ ಮಹಾನಗರ ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ.
ನಗರದ ಹಲವು ಕಡೆಗಳಲ್ಲಿ ಮಹಾ ಮಳೆಗೆ ಚರಂಡಿಗಳಲ್ಲಿ ಹರಿಯಬೇಕಾಗಿದ್ದ ಮಳೆನೀರು ಒಳಚರಂಡಿ ಮಾರ್ಗಕ್ಕೆ ಸಂಪರ್ಕ ಪಡೆದುಕೊಂಡು ಮ್ಯಾನ್ ಹೋಲ್‌ಗಳ ಮೂಲಕ ಹೊರಬರುತ್ತಿತ್ತು. ಅರೆಬರೆ ಕಾಮಗಾರಿಯಿಂದಾಗಿ ಮ್ಯಾನ್ ಹೋಲ್‌ಗಳು ಬಾಯಿ ತೆರೆದುಕೊಂಡು ಅಪಾಯದ ಸ್ಥಿತಿಯಲ್ಲಿದೆ. ಇಂತಹ ಮ್ಯಾನ್‌ಹೋಲ್‌ಗಳಿಂದ ಜನರ ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ನಗರದ ಬಿಜೈ ಮಾರುಕಟ್ಟೆ, ಕೆ.ಎಸ್. ರಾವ್ ರಸ್ತೆ, ಜೈಲು ರಸ್ತೆ, ಕದ್ರಿಯಿಂದ ಬಂಟ್ಸ್ ಹಾಸ್ಟೆಲ್‌ಗೆ ಬರುವ ರಸ್ತೆ ಸೇರಿದಂತೆ ನಗರದ ಇನ್ನಿತರ ರಸ್ತೆಗಳಲ್ಲಿ ಅರೆಬರೆ ಕಾಮಗಾರಿ ನಡೆಸಲಾಗಿದೆ. ನಗರದ ಜೈಲ್‌ರಸ್ತೆಯಿಂದ ಬಿಜೈ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಲವು ದಿನಗಳಿಂದ ಒಳಚರಂಡಿ ಮ್ಯಾನ್‌ಹೋಲ್ ತೆರೆದಿಟ್ಟು ಕಾಮಗಾರಿ ನಡೆಸು ತ್ತಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಅದೇ ಪ್ರದೇಶದ ಪಿಂಟೋ ಬೇಕರಿ ಪಕ್ಕದಲ್ಲಿ ಇರುವಂತಹ ಮ್ಯಾನ್‌ಹೋಲ್ ಒಂದರಲ್ಲಿ ಒಂದು ತಿಂಗಳು ಹಿಂದೆ ಕಲ್ಲು ಸೇರಿಕೊಂಡಿತ್ತು ಎಂಬ ಕಾರಣಕ್ಕಾಗಿ ರಸ್ತೆ ಮಧ್ಯೆ ಅಗೆಯಲಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ.
Related Articles
Advertisement