ಹುಬ್ಬಳ್ಳಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ತಾಕತ್ತಿದ್ದರೆ ಐಟಿಯವರಿಗೆ ನನ್ನ ಬೇನಾಮಿ ಆಸ್ತಿ ಹಾಗೂ ಭ್ರಷ್ಟಾಚಾರ ಬಗ್ಗೆ ದೂರು ಕೊಟ್ಟು ದಾಳಿ ಮಾಡಿಸಲಿ. ಯಾರು ಬೇಡವೆಂದಿದ್ದಾರೆಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಕಿಡಿಕಾರಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಐಟಿ ದಾಳಿಯಾದ ತಕ್ಷಣ ಸಚಿವ ಡಿ.ಕೆ. ಶಿವಕುಮಾರ ತಕ್ಷಣ ರಾಜಿನಾಮೆ ನೀಡಬೇಕಿತ್ತು. ಇಲ್ಲವೇ ಮುಖ್ಯಮಂತ್ರಿ ರಾಜಿನಾಮೆ ಪಡೆಯಬೇಕಿತ್ತು. ಆದರೆ ಅದರ ಬದಲು ಇನ್ನೊಬ್ಬರ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಲ್ಲದೆ ಸಚಿವರ ತಾಯಿಯೇ ನೇರವಾಗಿ ಸಿಎಂ ವಿರುದ್ಧ ಆರೋಪ ಮಾಡಿದ್ದಾರಲ್ಲವೆಂದರು.
ಭಾವನಾತ್ಮಕ ದಾಳಿ: ಗುಜರಾತ್‌ನಲ್ಲಿ ಬರಗಾಲ ಆವರಿಸಿ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಅಂತಹ ಸಂದರ್ಭದಲ್ಲಿ ಅಲ್ಲಿನ ಶಾಸಕರು ಅವರಿಗೆ ನೆರವಿಗೆ ಬರುವ ಬದಲು ಬೆಂಗಳೂರಿಗೆ ಬಂದು ಮಸ್ತಿ ಮಾಡುತ್ತಿರುವುದನ್ನು ನೋಡಿ ಜನರು ಆಕ್ರೋಶಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಅಲ್ಲಿಗೆ ತೆರಳಿದಾಗ ಭಾವನಾತ್ಮಕವಾಗಿ ಯಾರಾದರೂ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರಬಹುದು. ಇದೊಂದು ಆಕಸ್ಮಿಕ ಘಟನೆ ಅಷ್ಟೇ ಎಂದರು.
ದೊಡ್ಡ ದಂಧೆ: ಸಿಎಂಗೆ ಆಡಳಿತದಲ್ಲಿ ಹಿಡಿತವಿಲ್ಲ. ಅಧಿಕಾರಿಗಳಂತೂ ಇವರ ಮಾತು ಕೇಳುತ್ತಿಲ್ಲ. ನಿಷ್ಠಾವಂತ ಅಧಿಕಾರಿಗಳಿಗೆ ಕಿಮ್ಮತ್ತು ಇಲ್ಲದಂತಾಗಿದೆ. ಸಿಎಂ ತಮ್ಮ ಆಪ್ತ ಕೆಂಪಯ್ಯ ಮಾತು ಕೇಳಿ ಪದೇ ಪದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ.
ಇದೊಂದು ದೊಡ್ಡ ದಂಧೆಯೇ ಆಗಿ ಬಿಟ್ಟಿದೆ. ಭ್ರಷ್ಟರಿಗೆ ಒಳ್ಳೆಯ ಹುದ್ದೆ ಹಾಗೂ ನಿಷ್ಠಾವಂತರಿಗೆ ನಾಮಕಾವಾಸ್ತೆ ಹುದ್ದೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಮಹಾಪೌರ ಡಿ.ಕೆ. ಚವ್ಹಾಣ, ಉಪ ಮಹಾಪೌರ ಲಕ್ಷ್ಮೀ ಬಾಯಿ ಬಿಜವಾಡ ಮೊದಲಾದವರಿದ್ದರು.