Advertisement
ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ 12,800 ಕೋ.ರೂ. ನಿಗದಿಪಡಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಇದಕ್ಕೆ ವೆಚ್ಚ ಮಾಡಿದ್ದು ಕೇವಲ 2,800 ಕೋ.ರೂ. ಮಾತ್ರ. ಅಂದರೆ ಯೋಜನಾ ವೆಚ್ಚದ ಶೇ. 10 ಮಾತ್ರ ವಿನಿಯೋಗವಾಗಿದೆ. ಹೀಗೆಯೇ ಮುಂದುವರಿದರೆ ಯೋಜನೆ ಪೂರ್ಣಗೊಳ್ಳಲು ಎಷ್ಟು ವರ್ಷ ಬೇಕಾಗಬಹುದು ಎಂಬುದನ್ನು ಜನತೆ ಆಲೋಚಿಸಬೇಕಾಗಿದೆ. ಯೋಜನೆಯ ಕಾಮಗಾರಿ 2014ರಲ್ಲಿ ಆರಂಭಗೊಂಡಿತ್ತು. ಕಾಮಗಾರಿ ಆರಂಭಗೊಂಡ ಒಂದೇ ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ನೀಡುವುದಾಗಿ ಕಾಂಗ್ರೆಸ್ ಸರಕಾರ ಹೇಳಿತ್ತು. ಆದರೆ ಕಾಮಗಾರಿ ಸಕಲೇಶಪುರದಿಂದ ಮುಂದಕ್ಕೆ ಹೋಗಿಲ್ಲ ಎಂಬುದು ವಾಸ್ತವ ಎಂದರು.
Related Articles
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸಿ ಕೋಟ್ಯಂತರ ರೂ. ಸರಕಾರಿ ಹಣವನ್ನು ವ್ಯಯ ಮಾಡುತ್ತಿದ್ದಾರೆ. ಒಂದೊಂದು ಸಭೆಗೆ 50ರಿಂದ 60 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಯೋಜನೆಗಳ ಉದ್ಘಾಟನೆ ಎಂದು ಹೇಳಲಾಗುತ್ತದೆ. ಆದರೆ ಅವರೇ ನೀಡುವ ಜಾಹೀರಾತುಗಳು “ಆಯಾ ಯೋಜನೆಗಳು ಪ್ರಗತಿಯಲ್ಲಿವೆ, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ, ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿದೆ’ ಎಂದು ಹೇಳುತ್ತಿವೆ. ಕಾಂಗ್ರೆಸ್ ಸಭೆಗಳಲ್ಲಿ ಸಿ.ಎಂ. ಇಬ್ರಾಹಿಂ ಅವರಿಂದ ಖಾಲಿಯಾಗಿರುವ ವಿದೂಷಕನ ಸ್ಥಾನವನ್ನು ಸಿದ್ದರಾಮಯ್ಯ ಅವರು ತುಂಬಿದ್ದಾರೆ ಎಂದು ಕಾಂಗ್ರೆಸ್‌ನವರೇ ಆಡಿಕೊಳ್ಳುತ್ತಿದ್ದಾರೆ ಎಂದವರು ಟೀಕಿಸಿದರು.
Advertisement
ಬಿಜೆಪಿ ಸಂಸದರು ವಿವರಿಸಲಿಮಹಾದಾಯಿ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಪರಿಹಾರ ರೂಪಿಸುವ ಕಾರ್ಯವನ್ನು ರಾಜ್ಯದ ಬಿಜೆಪಿ ಸಂಸತ್ ಸದಸ್ಯರು ಮಾಡಬೇಕು. ರಾಜ್ಯದಲ್ಲಿ 17 ಮಂದಿ ಬಿಜೆಪಿ ಸಂಸದರು ಇದ್ದಾರೆ. ಆದರೆ ಪ್ರಧಾನಿಯವರಿಗೆ ವಾಸ್ತವಾಂಶಗಳನ್ನು ಮನದಟ್ಟು ಸಾಮರ್ಥ್ಯ ಇವರಾರಿಗೂ ಇಲ್ಲ. ಈ ಹಿಂದೆ ಕಾವೇರಿ ವಿಚಾರದಲ್ಲಿ ಈ ರೀತಿಯ ಸಮಸ್ಯೆ ತಲೆದೋರಿದಾಗ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಮಧ್ಯಪ್ರವೇಶಿಸಿ ಪರಿಹಾರ ರೂಪಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಶಾಸಕ ಬಿ.ಬಿ. ನಿಂಗಯ್ಯ, ಮುಖಂಡರಾದ ಅಮರನಾಥ ಶೆಟ್ಟಿ, ಭೋಜೇ ಗೌಡ, ಎಂ.ಬಿ. ಸದಾಶಿವ, ಮಹಮ್ಮದ್ ಕುಂಞಿ, ರಾಂ ಗಣೇಶ್, ಅಕ್ಷಿತ್ ಸುವರ್ಣ, ಹೈದರ್ ಪರ್ತಿಪ್ಪಾಡಿ, ಅಲ್ತಾಫ್, ಸುಮತಿ ಹೆಗ್ಡೆ, ಇಕ್ಬಾಲ್ ಅಹಮ್ಮದ್, ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು. ರೈತರಿಗೆ “ಆತ್ಮಹತ್ಯೆ ಭಾಗ್ಯ’
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಮುಂತಾದ ಭಾಗ್ಯಗಳ ಸರಮಾಲೆಯನ್ನೇ ಪ್ರಕಟಿಸಿದ ಕಾಂಗ್ರೆಸ್ ಸರಕಾರ ರೈತರಿಗೆ ಆತ್ಮಹತ್ಯೆ ಭಾಗ್ಯವನ್ನೂ ನೀಡಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 3,500ಕ್ಕಿಂತಲೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಮಾಡಿರುವ ಸಾಲಮನ್ನಾ ಇನ್ನೂ ರೈತರನ್ನು ತಲುಪಿಲ್ಲ. ಸಾಲ
ಮನ್ನಾ ಘೋಷಣೆಯಾದ ಬಳಿಕ 400ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಚ್‌ಡಿಕೆ ಆರೋಪಿಸಿದರು. ಸರಕಾರ ಸಂಪೂರ್ಣ ವಿಫಲ
ಕರಾವಳಿ ಭಾಗದಲ್ಲಿ ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಅಭಿವೃದ್ಧಿಗಿಂತ ಧರ್ಮದ ಹೆಸರನ್ನು ಮುಂದು ಮಾಡಿಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕಾರ್ಯವನ್ನು ಬಿಜೆಪಿ, ಕಾಂಗ್ರೆಸ್ ಮಾಡುತ್ತಿವೆ. ಇದು ಸಂಪೂರ್ಣವಾಗಿ ನಿಲ್ಲಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿಗೆ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಕುಮಾರಸ್ವಾಮಿ ಟೀಕಿಸಿದರು.