Advertisement
ಹೀಗಾಗಿ ಹಗಲು, ರಾತ್ರಿ ಎನ್ನದೆ ಸಂಚಾರ ಸ್ಥಗಿತವಾದ ಸಂದರ್ಭ ಅರಣ್ಯ ಆವರಿತ ಪ್ರದೇಶದಲ್ಲಿ ಜನರು ಪ್ರಯಾಣ ಸಾಧ್ಯವಾಗದೆ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ನೀರು ನುಗ್ಗಿದ ಸಂದರ್ಭ ವಾಹನ ಸಂಚರಿಸದಂತೆ ಈ ಬಾರಿ ಸೇತುವೆ ಬಳಿ ತಹಶೀಲ್ದಾರ್ ಅವರ ಸೂಚನೆ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಬೆಳ್ಳಾರೆಯಿಂದ ಸವಣೂರು ಸಂಪರ್ಕದ 11 ಕಿ.ಮೀ. ದೂರದ ರಸ್ತೆಯ ಪೆರುವಾಜೆ ಪುದ್ದೊಟ್ಟು ಸೇತುವೆ ಬಳಿಯಿಂದ ಅನತಿ ದೂರದಲ್ಲಿ ಸಂಪರ್ಕ ಕಡಿತ ಉಂಟಾಗುತ್ತದೆ. ಸೇತುವೆ ನಿರ್ಮಾಣಕ್ಕೆ ಮೊದಲು ಮಳೆಗಾಲದಲ್ಲಿ ಗೌರಿ ಹೊಳೆ ದಾಟಲೆಂದು ಮಾಪಳಕಜೆ ಬಳಿ ಗೌರಿ ಹೊಳೆಗೆ ನಿರ್ಮಿಸಿದ್ದ ತೂಗು ಸೇತುವೆ ಸ್ಥಳದ ಸನಿಹದಲ್ಲಿ ಇರುವ ಸಣ್ಣ ತೋಡಿನಲ್ಲಿ ನೀರು ಒಳ ಬಂದು ರಸ್ತೆಗೆ ನುಗ್ಗುತ್ತಿದೆ. ಎರಡು ತಾಸು ನಿರಂತರ ಮಳೆ ಬಂದರೆ ರಸ್ತೆಗೆ ಹೊಳೆ ನೀರು ನುಗ್ಗುತ್ತದೆ. ಈ ವರ್ಷ ಏಳೆಂಟು ಬಾರಿ ರಸ್ತೆ ಬಂದ್ ಆಗಿದೆ. ಈ ಗೋಳು ಕಳೆದ ಅನೇಕ ವರ್ಷಗಳಿಂದ ಇದೆ. ಬಸ್ ಸಂಚಾರ ರಸ್ತೆ
ಬೆಳ್ಳಾರೆ-ಸವಣೂರು ಮೂಲಕ ಪುತ್ತೂರು, ಕಾಣಿಯೂರು, ಕಡಬ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎರಡು ಗಂಟೆಗೊಮ್ಮೆ ಇಲ್ಲಿ ಬಸ್‌ಗಳು ಸಂಚರಿಸುತ್ತಿವೆ. ನೂರಾರು ವಿದ್ಯಾರ್ಥಿ ಗಳು, ಕಚೇರಿ ಕೆಲಸಕ್ಕೆ ತೆರಳುವವರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆಗೆ ನೀರು ನುಗ್ಗಿ ಪುತ್ತೂರು, ಸವಣೂರು, ಕಾಣಿಯೂರು, ಕಡಬ ಭಾಗದಿಂದ ಬೆಳ್ಳಾರೆಗೆ, ಬೆಳ್ಳಾರೆ, ಪೆರುವಾಜೆ ಪರಿಸರದಿಂದ ಪುತ್ತೂರಿಗೆ ತೆರಳುವ ಪ್ರಯಾಣಿಕರು ತಾಸುಗಟ್ಟಲೆ ರಸ್ತೆಯಲ್ಲೇ ಕಾಯಬೇಕು. ಪರ್ಯಾಯ ರಸ್ತೆಯಲ್ಲಿ ಹತ್ತಾರು ಕಿ.ಮೀ. ಹೆಚ್ಚು ಓಡಾಟ ನಡೆಸಬೇಕಾದ ಕಾರಣ ನೀರು ಇಳಿಯುವ ತನಕ ಕಾದು ಅನಂತರ ಸಂಚಾರ ಮುಂದುವರಿಸಬೇಕಾದ ದಯನೀಯ ಸ್ಥಿತಿ ಇಲ್ಲಿನದು.
Related Articles
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಿಸಿದ ಬಳಿಕ ಧರ್ಮಸ್ಥಳಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಬೆಳ್ಳಾರೆ – ಸವಣೂರು ಸಂಪರ್ಕ ರಸ್ತೆ ಸಂಚಾರಕ್ಕೆ ಹೆಚ್ಚು ಅನುಕೂಲಕರ. ಮೈಸೂರು, ಮಡಿಕೇರಿ, ಕಾಸರಗೋಡು, ಸುಳ್ಯ ಭಾಗದ ಜನರು ಈ ರಸ್ತೆಯಾಗಿ ಸಾಗುತ್ತಾರೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಇಲ್ಲಿ ವಾಹನ ಓಡಾಟ ಹೆಚ್ಚಾಗಿದೆ. ಜತೆಗೆ ಪೆರುವಾಜೆ, ಸವಣೂರು, ಬೆಳಂದೂರಿನಲ್ಲಿ ಪ್ರಥಮ ದರ್ಜೆ ಕಾಲೇಜು, ಗ್ರಾ.ಪಂ. ಕಟ್ಟಡ, ಸಂತೆ ವ್ಯವಹಾರ, ಬ್ಯಾಂಕ್ ಮೊದಲಾದ ಕಚೇರಿಗಳಿಗೆ ತೆರಳಬೇಕಿದ್ದರೂ ಈ ರಸ್ತೆಯೇ ಉಪಯುಕ್ತ.
Advertisement
ಶಾಶ್ವತ ಪರಿಹಾರಕ್ಕೆ ಆಗ್ರಹರಸ್ತೆಗೆ ನೀರು ನುಗ್ಗುವ ಹೊಳೆ ಭಾಗದಲ್ಲಿ ತುಂಬಿರುವ ಹೂಳು ತೆರವುಗೊಳಿಸಿದರೆ ಸಣ್ಣಪುಟ್ಟ ಮಳೆಗೆ ಬ್ಲಾಕ್ ಆಗುವ ಸಮಸ್ಯೆ ತಪ್ಪಲಿದೆ. ಮಳೆಗಾಲಕ್ಕೆ ಕೆಲವು ದಿನಗಳ ಮೊದಲು ಹೂಳು ತೆರವಾಗಬೇಕಿದೆ. ಜತೆಗೆ ಹೊಳೆ ಬದಿಗೆ ತಡೆಗೋಡೆ ನಿರ್ಮಿಸಿ ರಸ್ತೆಯನ್ನು ಮೇಲಕ್ಕೆ ಏರಿಸಬೇಕು. ಅರಣ್ಯ ಇಲಾಖೆ ವ್ಯಾಪ್ತಿಗೆ ಈ ಪ್ರದೇಶ ಒಳ ಪಟ್ಟಿರುವ ಕಾರಣ ಸಹಕಾರವೂ ಅಗತ್ಯ. ಪತ್ರ ಬರೆಯಲಾಗುವುದು
ರಸ್ತೆಗೆ ನೀರು ನುಗ್ಗುವ ಹೊಳೆಯ ಭಾಗದಲ್ಲಿ ಮರಳು ಮಿಶ್ರಿತ ಹೂಳು ತುಂಬಿದ್ದು, ಅದರ ತೆರವು ಅಗತ್ಯವಾಗಿದೆ. ಹೊಳೆ ಬದಿಯಲ್ಲಿ ತಡೆಗೋಡೆಯಂತಹ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಂಡು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗುವುದು.
– ಅನಸೂಯಾ ಅಧ್ಯಕ್ಷೆ, ಪೆರುವಾಜೆ ಗ್ರಾ.ಪಂ.
ಸಂಚಾರ ಕಷ್ಟ
ಈ ಸಲ ಏಳೆಂಟು ಬಾರಿ ಸಂಚಾರ ಸ್ಥಗಿತವಾಗಿತ್ತು. ಪ್ರತಿ ದಿನ ಪುತ್ತೂರು, ಸವಣೂರಿಗೆ ಬಸ್ ಮೂಲಕ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಾಧ್ಯ ವಾಗುತ್ತಿಲ್ಲ. ನೀರು ರಸ್ತೆಗೆ ಬಾರದ ಹಾಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
-ಬೃಂದಾ ಎಂ., ವಿದ್ಯಾರ್ಥಿನಿ
ಈ ಸಲ ಏಳೆಂಟು ಬಾರಿ ಸಂಚಾರ ಸ್ಥಗಿತವಾಗಿತ್ತು. ಪ್ರತಿ ದಿನ ಪುತ್ತೂರು, ಸವಣೂರಿಗೆ ಬಸ್ ಮೂಲಕ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಾಧ್ಯ ವಾಗುತ್ತಿಲ್ಲ. ನೀರು ರಸ್ತೆಗೆ ಬಾರದ ಹಾಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
-ಬೃಂದಾ ಎಂ., ವಿದ್ಯಾರ್ಥಿನಿ
ಕಿರಣ್ ಪ್ರಸಾದ್ ಕುಂಡಡ್ಕ