ಕಾರ್ಕಳ: ಹೆದ್ದಾರಿ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರ ಪರಿಣಾಮ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳಿಗೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಪಡುಬಿದ್ರಿಯಿಂದ ಕಾರ್ಕಳ ಸಾಗುವ ರಾಜ್ಯ ಹೆದ್ದಾರಿ 1ರ 32 ಕಿ.ಮೀ ಉದ್ದದ ರಸ್ತೆಯಲ್ಲಿ ಈ ಬಾರಿ ಮಳೆ ಸುರಿಯುತ್ತಿದ್ದಂತೆ ಮಳೆಯ ನೀರು ಚರಂಡಿಯಲ್ಲಿ ಹರಿಯದೆ ನೇರವಾಗಿ ರಸ್ತೆಯಲ್ಲೇ ಹರಿಯುವುದರ ಪರಿಣಾಮ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೂ ನಿತ್ಯ ಸಮಸ್ಯೆಯಾಗುತ್ತಿದೆ. ಕೆಲವೊಂದು ಬಾರಿ ಸುರಿಯುವ ಭಾರೀ ಮಳೆಗೆ ರಸ್ತೆಯ ತುಂಬೆಲ್ಲ ನೀರು ಹರಿಯುವುದರಿಂದ ಅಪಘಾತಗಳಿಗೆ ನಿತ್ಯ ಎಡೆ ಮಾಡಿಕೊಡುತ್ತಿದೆ.
ಕೆಲವೆಡೆ ರಸ್ತೆಯಲ್ಲೇ ಕಲ್ಲು ಮಣ್ಣು ಮಳೆಯ ನೀರಿನೊಂದಿಗೆ ರಸ್ತೆಗೆ ಹರಿದು ಬರುವ ಕಸ ಕಡ್ಡಿ ಕಲ್ಲು ಮಣ್ಣು ಎಲ್ಲವೂ ರಸ್ತೆಯಲ್ಲೇ ಶೇಖರಣೆಗೊಳ್ಳುವುದರಿಂದ ಬೈಕ್ ಸವಾರರಂತು ನಿತ್ಯ ಎಡವಟ್ಟು ಮಾಡಿಕೊಂಡು ರಸ್ತೆಯಲ್ಲಿ ಬಿದ್ದು ಗಾಯಗೊಂಡ ನಿದರ್ಶನ ಸಾಕಷ್ಟಿದೆ. ಮಾವಿನಕಟ್ಟೆ ಸಮೀಪದ ತಿರುವು ರಸ್ತೆಯಲ್ಲಿ ಹಾಗೂ ನಂದಳಿಕೆ ಲಕ್ಷ್ಮೀಜನಾರ್ದನ ದೇವಾಲಯದ ತಿರುವು ರಸ್ತೆಯಲ್ಲಿ ಮತ್ತು ಬೆಳ್ಮಣ್, ಸಾಂತೂರು, ಹಾಗೂ ಅಡ್ವೆ ನಂದಿಕೂರು ಪರಿಸರದಲ್ಲಿಯೂ ಮಳೆಯ ನೀರು ರಸ್ತೆಯಲ್ಲೇ ಹರಿದಾಡುತ್ತಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಹೆದ್ದಾರಿಯಲ್ಲಿ ಮಳೆ ನೀರು ಹರಿಯುವುದರ ಪರಿಣಾಮ ಸಾಕಷ್ಟು ಕಡೆಗಳಲ್ಲಿ ನಿರಂತರ ಅಪಘಾತಗಳಾಗುತ್ತಿವೆ. ನೀಚಾಲು ತಿರುವು ರಸ್ತೆಯಲ್ಲಿ, ನಂದಿಕೂರು, ಹಾಗೂ ಬೆಳ್ಮಣ್‌ನ ನೀಚಾಲು ತಿರುವು ಭಾಗದಲ್ಲಿ ಮತ್ತು ನಂದಳಿಕೆ ಬೋರ್ಡ್ ಶಾಲೆಯ ಇಳಿಜಾರು ರಸ್ತೆಯಿಂದ ದಡ್ಡು ದ್ವಾರದ ವರೆಗೆ ಹಾಗೂ ಮಾವಿನಕಟ್ಟೆ, ಪರ್ಪಲೆ ಭಾಗದಲ್ಲಿಯೂ ಮಳೆ ನೀರು ರಸ್ತೆಯಲ್ಲೇ ಹರಿಯುವುದರ ಪರಿಣಾಮ ಅಪಘಾತಗಳಿಗೆ ಕಾರವಾಗುತ್ತಿದೆ.
ಮಣ್ಣು ಅಗೆದಿದ್ದೇ ಇಷ್ಟಕ್ಕೆಲ್ಲ ಕಾರಣ
ರಾಜ್ಯ ಹೆದ್ದಾರಿಯುದ್ದಕ್ಕೂ ಈ ಬಾರಿ ಚರಂಡಿ ಎಲ್ಲವೂ ಮಾಯಾವಾಗಿದೆ. ಬಹುತೇಕ ಕಡೆಗಳಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ಅಗೆದು ಹಾಕಿದ ಪರಿಣಾಮ ಚರಂಡಿಯ ತುಂಬೆಲ್ಲ ಮಣ್ಣು ತುಂಬಿಕೊಂಡು ಚರಂಡಿಯೇ ಇಲ್ಲದಂತಾಗಿದೆ. ಜೋರಾಗಿ ಮಳೆ ಬಂದರೆ ಸಾಕು ಹೆದ್ದಾರಿಯುದ್ದಕ್ಕೂ ಇಲ್ಲಿನ ನಿತ್ಯ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಸ್ಥಳೀಯ ಗ್ರಾ.ಪಂ.ಗಳಿಗೆ ಮನವಿಯನ್ನು ಮಾಡಿಕೊಂಡರೂ ಹಾಗೂ ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಿದರೂ ಪ್ರಯೋಜನವಾಗಿಲ್ಲ.