Advertisement

ಉಡುಪಿ: ವಿಳಂಬವಾದರೆ ಈ ವರ್ಷ ಕುಚ್ಚಲು ಅಕ್ಕಿ ಸಿಗದು

10:06 AM Jun 13, 2022 | Team Udayavani |

ಉಡುಪಿ: ಸ್ಥಳೀಯ ಕುಚ್ಚಲು ಅಕ್ಕಿ ಯನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್‌) ಯಡಿ ವಿತರಿಸಲು ಒಂದು ವರ್ಷದ ಮಟ್ಟಿಗೆ ಕೇಂದ್ರ ಸರಕಾರ ನೀಡಿರುವ ಅನುಮತಿ ಮುಗಿಯುತ್ತಿದ್ದು, ಮುಂದಿನ ಅವಧಿಗೆ ಹೊಸದಾಗಿ ಅನುಮತಿ ಪಡೆಯಬೇಕು. ಇಲ್ಲವಾದರೆ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆ ಕಷ್ಟವಾಗಲಿದೆ.

Advertisement

ಒಂದು ವರ್ಷದ ಅವಧಿಗೆ ಕೇಂದ್ರ ಸರಕಾರ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಈ ಹಿಂದೆ ಅನುಮತಿ ಕಲ್ಪಿಸಿತ್ತು. ಅಷ್ಟು ಹೊತ್ತಿಗಾಗಲೇ ಉಭಯ ಜಿಲ್ಲೆಯಲ್ಲಿ ಭತ್ತದ ಕೊçಲು ಪೂರ್ಣಗೊಂಡು ರೈತರು ಭತ್ತವನ್ನು ಮಾರಾಟ ಮಾಡಿದ್ದರು. ಭತ್ತ ಖರೀದಿ ಕೇಂದ್ರ ತೆರೆಯುವುದು ವಿಳಂಬವಾದ್ದರಿಂದ ಸರಕಾರ ಅನುಮತಿ ನೀಡಿದ್ದರೂ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆ ಸಾಧ್ಯವಾಗಿರಲಿಲ್ಲ.

ಉಡುಪಿ, ದಕ್ಷಿಣ ಕನ್ನಡಕ್ಕೆ ಪಿಡಿಎಸ್‌ನಲ್ಲಿ ವಿತರಣೆಗೆ ಪ್ರತೀ ತಿಂಗಳು ಕನಿಷ್ಠ 1 ಲಕ್ಷ ಕ್ವಿಂಟಾಲ್‌ ಅಕ್ಕಿ ಅಗತ್ಯ ಇಷ್ಟು ಪ್ರಮಾಣದಲ್ಲಿ ಈ ಜಿಲ್ಲೆಗಳಲ್ಲಿ ಉತ್ಪತ್ತಿ ಇಲ್ಲ. ಹೀಗಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯದಿಂದ ಅಕ್ಕಿ ಪಡೆಯಬೇಕು. ಆಂಧ್ರಪ್ರದೇಶದಿಂದ ಬರುವ ಕುಚ್ಚಲು ಅಕ್ಕಿಯನ್ನು ಇಲ್ಲಿಯವರು ಇಷ್ಟಪಡುವುದಿಲ್ಲ. ಆದ್ದರಿಂದ ಕೇರಳ / ಮೈಸೂರು, ಬೆಳಗಾವಿ ಭಾಗದ ಎಂಒ4, ಜಯ, ಪಂಚಮುಖೀ, ಸಹ್ಯಾದ್ರಿ, ಉಮಾ, ಜ್ಯೋತಿ ಮತ್ತು ಕಜೆ ತಳಿಯ ಭತ್ತವನ್ನು ಖರೀದಿಸಿ ನೀಡಬೇಕಾಗುತ್ತದೆ. ಕಳೆದ ವರ್ಷ ಅನುಮತಿ ಪಡೆಯುವಾಗಲೇ ವಿಳಂಬವಾದ್ದರಿಂದ ಕುಚ್ಚಲು ಅಕ್ಕಿ ನೀಡಲು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಅದನ್ನೇ ಮುಂದುವರಿಸಿದರೆ ಕರಾವಳಿಯ ಜನತೆಗೆ ಸ್ಥಳೀಯ ಕುಚ್ಚಲು ಅಕ್ಕಿ ಪಿಡಿಎಸ್‌ನಡಿ ಸಿಗಲಿದೆ ಎಂಬುದನ್ನೇ ಮರೆತು ಬಿಡಬೇಕಾಗುತ್ತದೆ.

ಇಲಾಖೆಯ ಅಧಿಕಾರಿಗಳ ಸಭೆ
ಪಿಡಿಎಸ್‌ ಅಡಿಯಲ್ಲಿ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಸಂಬಂಧಿಸಿ ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಭತ್ತ ಖರೀದಿ ಕೇಂದ್ರದ ಅಧಿಕಾರಿಗಳು ಈಗಾಗಲೇ ಒಂದು ಹಂತದ ಸಭೆ ನಡೆಸಿದ್ದಾರೆ. ಇನ್ನೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಂಡು ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

ಮಾಸಾಂತ್ಯಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ
ಅಕ್ಟೋಬರ್‌ ಅಥವಾ ನವೆಂಬರ್‌ ಒಳಗೆ ಕೇಂದ್ರದಿಂದ ಅನುಮತಿ ಪಡೆಯಬೇಕು. ಹೀಗಾಗಿ ಜೂನ್‌ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಈ ಸಂಬಂಧ ಪ್ರಸ್ತಾವನೆಯನ್ನು ರಾಜ್ಯಕ್ಕೆ ಸಲ್ಲಿಸಲಾಗುತ್ತದೆ. ರಾಜ್ಯದಿಂದ ಅದನ್ನು ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ. ಸ್ಥಳೀಯ ಕುಚ್ಚಲು ಅಕ್ಕಿ ಕೊರತೆಯಾದಲ್ಲಿ ಅದೇ ತಳಿಯ ಅಕ್ಕಿಯನ್ನು ಹೊರರಾಜ್ಯ ಅಥವಾ ಹೊರ ಜಿಲ್ಲೆಯಿಂದಲೂ ಪಡೆಯಲು ಅವಕಾಶ ಏಕಕಾಲದಲ್ಲೇ ಕಲ್ಪಿಸುವಂತೆ ಈ ಬಾರಿ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಸ್ಥಳೀಯ ಕುಚ್ಚಲು ಅಕ್ಕಿಯನ್ನು ಪಿಡಿಎಸ್‌ ಅಡಿಯಲ್ಲಿ ವಿತರಣೆಗೆ ಪ್ರತೀ ವರ್ಷ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕಾಗಿ ಈಗಾಗಲೇ ಒಂದು ಹಂತದ ಸಭೆ ನಡೆಸಿದ್ದೇವೆ. ಶೀಘ್ರವೇ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಿದ್ದೇವೆ. ಈ ಬಾರಿ ಅವಧಿಗೂ ಮೊದಲೇ ಕೇಂದ್ರದ ಅನುಮತಿ ಸಿಗುವ ನಿರೀಕ್ಷೆಯಿದೆ.
-ಕೆ.ಪಿ. ಮಧುಸೂದನ್‌ /
ಮೊಹಮ್ಮದ್‌ ಇಸಾಕ್‌,
ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ./ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next