ಮಳೆ ಕೊಂಚ ತಡವಾದರೂ ನೀರಿನ ಸಮಸ್ಯೆ ತಾರಕಕ್ಕೇರುವುದು ಗ್ಯಾರಂಟಿ.
ಹೀಗಿರುವಾಗ ಪರ್ಯಾಯ ಮೂಲದತ್ತ ಚಿಂತನೆ ಈಗಲೇ ಆರಂಭವಾಗಬೇಕಿದೆ.
Advertisement
ಮಹಾನಗರ: ನಗರದಲ್ಲಿ ಕುಡಿಯುವ ನೀರಿನ ಮೂಲವಾಗಿರುವ ನೇತ್ರಾವತಿ ಒಡಲು ಬರಿದಾಗುತ್ತಿರುವಂತೆ ಪರ್ಯಾಯ ಮೂಲಗಳಾಗಿರುವ ಕೆರೆ, ಬಾವಿ, ಬೋರ್‌ವೆಲ್‌ಗಳತ್ತ ಪಾಲಿಕೆ ಅಧಿಕಾರಿಗಳತ್ತ ಗಮನಹರಿಸುತ್ತಾರೆ. ಆದರೆ ಅದಕ್ಕಿಂತ ಮೊದಲು ನೀರು ಸಂರಕ್ಷಣೆ, ಅಂತರ್ಜಲ ವೃದ್ಧಿಯಂತಹ ಯೋಜನೆಗಳ ಬಗ್ಗೆ ಚಿಂತಿಸುವುದಿಲ್ಲ.
ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರಿ ಬಾವಿ ಇದ್ದರೂ ಅದರ ನೀರನ್ನು ಪಡೆದುಕೊಳ್ಳಲು ಕೆಲವು ಕಡೆಯಲ್ಲಿ ಆಗುತ್ತಿಲ್ಲ. ಉದಾಹರಣೆಗೆ ಜಪ್ಪಿನಮೊಗರು ಶಾಲೆಯ ಬಳಿಯಲ್ಲಿರುವ ಒಂದು ಸರಕಾರಿ ಬಾವಿಯ ನೀರು ಕಲುಷಿತಗೊಂಡು ಹಸುರು ಬಣ್ಣಕ್ಕೆ ಬದಲಾಗಿದೆ. ಹೀಗಾಗಿ ಇದು ಕುಡಿಯಲು ಯೋಗ್ಯವಿಲ್ಲ. ಒಂದುವೇಳೆ ಎಲ್ಲೆಡೆ ನೀರಿನ ಕೊರತೆ ಉಂಟಾಗಿ ವಿಷಮ ಸ್ಥಿತಿ ಎದುರಾದರೆ ಈ ನೀರನ್ನು ಶುದ್ಧಿಕರಿಸಿ ಬಳಿಕವಷ್ಟೇ ಬಳಕೆ ಮಾಡಬೇಕಿದೆ. ಜತೆಗೆ ಹಲವು ಸರಕಾರಿ ಬಾವಿಗಳ ಸುತ್ತ ಗಿಡ ಮರ ತುಂಬಿಕೊಂಡು ಆ ಬಾವಿಯ ನೀರೂ ಉಪಯೋಗಕ್ಕೆ ಸಿಗದಂತಾಗಿದೆ.
Related Articles
ತುಂಬೆಯಿಂದ ಪೈಪ್‌ಗ್ಳ ಮೂಲಕ ನಗರಕ್ಕೆ ನೀರು ಬರಲು ಶುರುವಾದ ಬಳಿಕ ಈ ಹಿಂದೆ ಇದ್ದ ಸರಕಾರಿ ಬಾವಿ/ಕೆರೆಗಳನ್ನು ಪಾಲಿಕೆಯು ನಗಣ್ಯ ಮಾಡುತ್ತಾ ಬಂದಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿದ್ದ ಬಾವಿಗಳನ್ನು ಇದ್ದೂ ಇಲ್ಲದಂತಾಗಿದೆ. ನಳ್ಳಿಯಲ್ಲಿ ಸರಾಗವಾಗಿ ನೀರು ಬರುವ ಕಾಲದಲ್ಲಿ ನೆನಪಾಗದ ಬಾವಿಗಳು, ನಳ್ಳಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವಾಗ ಮಾತ್ರ ನೆನಪಾಗುತ್ತಿದೆ.
Advertisement
ಒಂದು ವೇಳೆ ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದರೆ ಬಾವಿಯೇ ದಾರಿ ತೋರಬೇಕಿದೆ. ಈ ಮಧ್ಯೆ, ಇನ್ನು ಕೆಲವೇ ದಿನಗಳಲ್ಲಿ ಮಳೆ ಬಂದರೆ ಮತ್ತೆ ಬಾವಿಗಳ ನೆನಪಾಗುವುದು ಮುಂದಿನ ವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ಮಾತ್ರ !
ಖಾಸಗಿ ಬಾವಿಯ ನೀರಿಗೂ ಪ್ಲಾನ್
ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿಯಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಶಕ್ತವಾಗಿರುವ ಸುಮಾರು 20ಕ್ಕೂ ಅಧಿಕ ಬಾವಿಗಳಿವೆ. ಕದ್ರಿ ಪರಿಸರದ 150 ಮೀಟರ್‌ನ ಒಳಗಡೆ ಯೇ 8 ಖಾಸಗಿ ಬಾವಿಗಳಿವೆ. ಸೂಟರ್‌ಪೇಟೆ, ಪಂಪ್‌ವೆಲ್, ಪಡೀಲ್, ಆನೆಗುಂಡಿ, ಸುಲ್ತಾನ್‌ಬತ್ತೇರಿ, ಅತ್ತಾವರ, ಮರೋಳಿ ಸಹಿತ ನಾನಾ ಭಾಗಗಳಲ್ಲಿ ಖಾಸಗಿ ಬಾವಿಗಳಿವೆ. ಇಲ್ಲಿಂದ ನಗರದ ವಿವಿಧ ಭಾಗಗಳಿಗೆ ಟ್ಯಾಂಕರ್ ಮೂಲಕ ನೀರು ಸಾಗಾಟವಾಗುತ್ತಿದೆ. ಖಾಸಗಿ ಬಾವಿ ಗಳ ಬಗ್ಗೆಯೂ ಪಾಲಿಕೆ ಈಗ ಲೆಕ್ಕಾಚಾರ ಶುರು ಮಾಡಿದೆ. ಒಂದು ವೇಳೆ ನೀರಿನ ಕೊರತೆ ಎದುರಾದರೆ ಅವುಗಳಿಂದಲೂ ನೀರು ತರಲು ಯೋಜನೆ ರೂಪಿಸಿದ್ದಾರೆ. ಒರತೆಯ ಕೊರತೆ!
ನಗರದ ಬಹುತೇಕ ಬಾವಿಗಳಲ್ಲಿ ಹಿಂದೆ ಸಾಕಷ್ಟು ಒರತೆ ಇತ್ತು. ಆದರೆ ಒಂದೆರಡು ವರ್ಷಗಳಿಂದ ನೀರಿನ ಒರತೆ ಕಡಿಮೆ ಇದೆ. ಒಮ್ಮೆ ಬಾವಿಯ ನೀರನ್ನು ಸಂಪೂರ್ಣ ಪೈಪ್ ಮೂಲಕ ತೆಗೆದರೆ ಮತ್ತೆ ಅದೇ ಮಟ್ಟಕ್ಕೆ ನೀರು ಏರಲು ಕೆಲವು ಸಮಯ ಬೇಕು. ಇನ್ನು ಕೆಲವು ಬಾವಿಗಳಲ್ಲಿ ನೀರು ಏರುತ್ತಲೇ ಇಲ್ಲ. ಇಂತಹ ಬಾವಿಗಳಿಂದ ಪೂರ್ಣವಾಗಿ ನೀರು ಪಂಪ್ ಮಾಡಿದರೆ ಬತ್ತಿಹೋಗುವ ಆತಂಕವೂ ಇದೆ. ಲಭ್ಯ ನೀರಿನ ಮಿತ ಬಳಕೆ ಅನಿವಾರ್ಯ
ನಗರದಲ್ಲಿ ಕುಡಿಯುವ ನೀರಿನ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸುತ್ತಿದ್ದಂತೆ ಸಮಸ್ಯೆ ಬಿಗಡಾಯಿಸಿತ್ತು. ಆದರೆ ತುಂಬೆ ವೆಂಟೆಡ್ ಡ್ಯಾಂನಲ್ಲಿನ ನೀರಿನ ಲಭ್ಯತೆ ಮತ್ತು ಮಳೆಯಾಗುವ ಸಾಧ್ಯತೆಯಿರುವ ಕಾರಣ ಮಹಾನಗರ ಪಾಲಿಕೆಯು ಸದ್ಯಕ್ಕೆ ರೇಷನಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಹೀಗಾಗಿ ಬೇಸಗೆಯಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಇರುವ ಕೆಲವೊಂದು ಪ್ರದೇಶಗಳನ್ನು ಹೊರತುಪಡಿಸಿದರೆ, ನಗರದ ಹೆಚ್ಚಿನ ಕಡೆಗಳಲ್ಲಿ ಈಗ ನೀರಿನ ಸಮಸ್ಯೆ ಬಹುತೇಕ ಸುಧಾರಿಸಿದೆ. ನಗರದಲ್ಲಿ ನೀರಿನ ಹಾಹಾಕಾರ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ “ಸುದಿನ’ವು “ಜೀವ ಜಲ ಪ್ರತಿ ಹನಿ ಉಳಿಸೋಣ ಬನ್ನಿ’ ಎಂಬ ಶೀರ್ಷಿಕೆಯಡಿ ಏಳು ದಿನಗಳ ಜಲ ಜಾಗೃತಿ ಅಭಿಯಾನ ನಡೆಸಿತು. ಆ ಮೂಲಕ ನಗರದ ಜನತೆಯ ನೀರಿನ ಸಮಸ್ಯೆಯನ್ನು ಪತ್ರಿಕೆಯು ಅಧಿಕಾರಿಗಳ ಗಮನಕ್ಕೆ ತಂದಿತು. ಮಳೆಗಾಲ ಶುರುವಾಗುವುದಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಅಲ್ಲಿಯವರೆಗೆ ತುಂಬೆ ಡ್ಯಾಂನಲ್ಲಿ ಈಗ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದು ಅನಿವಾರ್ಯ. ಒಂದುವೇಳೆ ಮೇ 20ರೊಳಗೆ ನೀರಿಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಮತ್ತೆ ನೀರಿನ ಅಭಾವ ಸೃಷ್ಟಿಯಾಗುವ ಆತಂಕ ಕೂಡ ಇರುವುದರಿಂದ ಎಲ್ಲರೂ ಕುಡಿಯುವ ನೀರಿನ ಬಗ್ಗೆ ಅತಿಯಾದ ಜಾಗೃತಿ ವಹಿಸುವುದು ಅವಶ್ಯ. ಜನರಲ್ಲಿ ಜೀವ ಜಲದ ಪ್ರಾಮುಖ್ಯ, ಅದನ್ನು ಪೋಲಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಆಶಯದ ಈ ಅಭಿಯಾನವು ಇಂದಿಗೆ ಮುಕ್ತಾಯಗೊಳಿಸುತ್ತಿದ್ದೇವೆ. ಕೆರೆ ಮರೆತ ಮಂಗಳೂರು!
ನಗರ ಒಂದೊಮ್ಮೆ ಕೆರೆಗಳ ಊರಾಗಿತ್ತು. ಎಮ್ಮೆಕೆರೆ, ಗುಜ್ಜರಕೆರೆ, ಕಾವೂರು ಕೆರೆ, ಬೈರಾಡಿಕೆರೆ ಸೇರಿದಂತೆ ಹಲವು ಕೆರೆಗಳ ಪಟ್ಟಿಯೇ ನಗರದಲ್ಲಿತ್ತು. ಹಿಂದೆ ಕುಡಿಯುವ ನೀರಿಗೆ ಇದುವೇ ಮೂಲವಾಗಿತ್ತು. ಆದರೆ ಕಾಲಕಳೆದಂತೆ ಕೆರೆಗಳನ್ನೇ ಮರೆತ ಆಡಳಿತ ವ್ಯವಸ್ಥೆ ಅದನ್ನು ತ್ಯಾಜ್ಯ ಹಾಕುವ ಗುಂಡಿಗಳಾಗಿ ಪರಿವರ್ತಿಸಿವೆ. ಕೆಲವು ಕೆರೆಗಳು ಸರಿಯಾಗಿದೆಯಾದರೂ ಹಲವು ಕೆರೆಗಳಿಗೆ ಒಳಚರಂಡಿ ನೀರು ನುಗ್ಗಿ, ಅತಿಕ್ರಮಣದಿಂದ ಸೋತು ಹೋಗಿವೆ. ಹೀಗಾಗಿ ನಮ್ಮ ಕಣ್ಣ ಮುಂದಿರುವ ಜಲರಾಶಿಯನ್ನು ನಾವು ಮರೆತು “ನೀರಿಲ್ಲ’ ಎಂದು ಪರಿತಪಿಸುವಂತಾಗಿದೆ! 11 ಕಡೆ ಬೋರ್‌ವೆಲ್
ಬಾವಿ ಮತ್ತು ಕೆರೆಗಳ ಕಥೆ ಒಂದಾದರೆ ಪಾಲಿಕೆ ಅಧೀನದಲ್ಲಿರುವ ಸರಕಾರಿ ಬೋರ್‌ವೆಲ್‌ಗಳದ್ದು ಇನ್ನೊಂದು ಕಥೆ. ಬಹುತೇಕ ಬೋರ್‌ವೆಲ್‌ಗಳಿಗೆ ಪಂಪ್ ಪೈಪ್ ಸೌಕರ್ಯವೇ ಇಲ್ಲ. ಇಂತಹ ಬೋರ್‌ವೆಲ್‌ಗಳನ್ನು ಕೂಡ ಸುಸ್ಥಿತಿಯಲ್ಲಿಡಲು ಜಿಲ್ಲಾಡಳಿತ ಸೂಚಿಸಿದ ಪರಿಣಾಮ ಬೋರ್‌ವೆಲ್ ಮೇಲೆ ಪಾಲಿಕೆ ಅಧಿಕಾರಿಗಳು ಈಗ ಕಣ್ಣಿಟ್ಟಿದ್ದಾರೆ. ಸಮಸ್ಯೆ ಇನ್ನಷ್ಟು ಬಿಗಡಾಯಿಸಿದರೆ 11 ಬೋರ್‌ವೆಲ್ ಕೊರೆಯಲು ಪಾಲಿಕೆ ನಿರ್ಧರಿಸಿದೆ. ಈ ಸಂಬಂಧ ಸ್ಥಳ ತನಿಖೆ ನಡೆಸಲಾಗುತ್ತಿದೆ. ಭೂ ವಿಜ್ಞಾನಿಗಳು ಈ ಕುರಿತಂತೆ ಪರಿಶೀಲನೆ ಆರಂಭಿಸಿದ್ದಾರೆ. ಬಾವಿ ಲೆಕ್ಕಾಚಾರ
ಮಂಗಳೂರಿನಲ್ಲಿರುವ ಸರಕಾರಿ ಬಾವಿಗಳು 42
ನೀರಿನ ಪ್ರಮಾಣ ಕಡಿಮೆ ಇರುವ ಬಾವಿಗಳು 6
ಗಿಡ ಗಂಟಿಗಳಿಂದ ತುಂಬಿರುವ ಬಾವಿಗಳು 10
ನೀರು ಕಲುಷಿತಗೊಂಡ ಬಾವಿಗಳು 7
ಪಂಪ್ ಪೈಪ್ ಅಗತ್ಯವಿರುವ ಬಾವಿಗಳು 5 - ದಿನೇಶ್ ಇರಾ