Advertisement

ಅಧಿಕಾರಕ್ಕೆ ಬಂದ್ರೆ 5 ಸಾವಿರ ರೂ. ಮಾಸಾಶನ: ಕುಮಾರಸ್ವಾಮಿ

06:26 PM Feb 26, 2021 | Team Udayavani |

ಸೇಡಂ: ಮುಂದಿನ ಅವಧಿಯಲ್ಲಿ ಜೆಡಿಎಸ್‌ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ ಹಿರಿಯ ನಾಗರಿಕರ ಮಾಸಾಶನವನ್ನು ಪ್ರತಿ ತಿಂಗಳು ಐದು ಸಾವಿರ ರೂ. ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜೆಡಿಎಸ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಯುವ ಮುಖಂಡ, ಉದ್ಯಮಿ ಬಾಲರಾಜ ಗುತ್ತೇದಾರ, ಪುರಸಭೆ ಮಾಜಿ ಅಧ್ಯಕ್ಷ ಎಕ್ಬಾಲ್‌ ಖಾನ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು. ಜೆಡಿಎಸ್‌ ರಾಜ್ಯದಲ್ಲಿ ಇಲ್ಲವೇ ಇಲ್ಲ ಎನ್ನುವ ರೀತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಬಿಂಬಿಸುತ್ತಿವೆ.

ರೈತರಿಗಾಗಿ ದುಡಿದ ಪಕ್ಷವನ್ನು ಜನರು ಯಾವತ್ತೂ ಕೈಬಿಡಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ರೈತರಿಗಾಗಿ ಜಾರಿಗೆ ತಂದಿದ್ದರು. ಉತ್ತರ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು ಎನ್ನುವ ಚಿಂತನೆ ನಡೆದಿದೆ ಎಂದರು.

ರಾಜ್ಯದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿರಿಸಿದ್ದ ಹಣವನ್ನು ಬೇರೊಂದು ಯೋಜನೆಗೆ
ಬಳಸಿಕೊಳ್ಳುವ ಮೂಲಕ ರೈತರಿಗೆ ಮೋಸ ಮಾಡಿದೆ. ಪ್ರವಾಹದಿಂದ ನೆಲಕ್ಕುರುಳಿದ ಮನೆಗಳ ಮಾಲೀಕರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪೆಟ್ರೋಲ್‌ ಬೆಲೆ ಗಗನಕ್ಕೇರಿದೆ ಎಂದು ಗುಡುಗಿದರು.

ಬಡವರಿಗೆ ಉಚಿತ ಅಕ್ಕಿ ಕೊಡಬೇಕೆಂಬ ಯೋಜನೆ ರೂಪಿಸಿದ್ದು ನಾನು. ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡಿದ್ದೆ. ಮನೆಗೊಂದು ಉದ್ಯೋಗ, ರೈತಪರ ಯೋಜನೆಗಳನ್ನು ಜಾರಿಗೆ ತರದೇ ಇದ್ದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಎರಡು ಅವಧಿ ಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಆಡಳಿತ ನೋಡಿದ್ದೀರಿ. ಈ ಬಾರಿ ಜೆಡಿಎಸ್‌ಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

Advertisement

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌, ಗುರುಮಿಠಕಲ್‌ ಶಾಸಕ ನಾಗಣ್ಣಗೌಡ ಕಂದಕೂರ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮುಖಂಡ ನಾಸೀರ ಹುಸೇನ ಉಸ್ತಾದ, ಬಾಲರಾಜ ಗುತ್ತೇದಾರ, ಎಕ್ಬಾಲ್‌ ಖಾನ್‌ ಮಾತನಾಡಿದರು. ಜೆಡಿಎಸ್‌ ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ ಸ್ವಾಗತಿಸಿದರು. ಅಶೋಕ ಗುತ್ತೇದಾರ, ಸಂಜೀವನ್‌ ಯಾಕಾಪುರ, ಶಿವಕುಮಾರ ನಾಟೀಕಾರ, ಜೆಡಿಎಸ್‌ ರಾಜ್ಯ ಯುವ ಘಟಕ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಮರಾವ್‌, ಜಿ.ಎಸ್‌. ರೆಹಮತ್‌, ರಮೇಶ ಪಾಟೀಲ, ರಾಜು ಗುತ್ತೇದಾರ, ಅಲೀಂ ಇನಾಮದಾರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next