Advertisement

“ಇಂದ್ರಾಣಿ ಪುನಶ್ಚೇತನಗೊಂಡರೆ ನಗರದ ಬಹುತೇಕ ಸಮಸ್ಯೆ ಇತ್ಯರ್ಥ’

08:51 AM Jul 30, 2019 | Team Udayavani |

ಉಡುಪಿ: ಕೊಳಚೆ ಸೇರ್ಪಡೆಯಿಂದಾಗಿ ಕಲುಷಿತಗೊಂಡಿರುವ ಇಂದ್ರಾಣಿ ನದಿಯನ್ನು ಶುದ್ಧೀಕರಿಸಬೇಕೆಂದು ಆಗ್ರಹಿಸಿ “ಇಂದ್ರಾಣಿ ಉಳಿಸಿ’ ಸಮಿತಿ ಆಶ್ರಯದಲ್ಲಿ ರವಿವಾರ ಇಂದ್ರಾಣಿ ನದಿ ಆರಂಭವಾಗುವ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸುರಿಯುವ ತೊರೆಯಿಂದ ಕೊಡವೂರು ಬಳಿ ಸಮುದ್ರಕ್ಕೆ ಸೇರುವವರೆಗೆ ಪರಿಸರಾಸಕ್ತರ ಜಾಥಾ ನಡೆಯಿತು.

Advertisement

ಇಂದ್ರಾಣಿ ಸರೋವರಕ್ಕೆ ಹಾಲೆರೆಯುವ ಮೂಲಕ ಪರಿಸರ ಚಿಂತಕ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶ್ಯಾನುಭಾಗ್‌ ಮಾತನಾಡಿ, ಇಂದ್ರಾಣಿ ನದಿ ಪುನಶ್ಚೇತನಗೊಂಡರೆ ಉಡುಪಿ ನಗರದ ಬಹುತೇಕ ಸಮಸ್ಯೆಗಳು ಬಗೆ ಹರಿಯುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಮಾರು 10 ಕಿ.ಮೀ. ಹರಿಯುವ ಈ ನದಿಗೆ ಎಂಟು ಕಡೆಗಳಿಂದ ನೀರು ಸೇರುತ್ತವೆ. ಬೀಡಿನಗುಡ್ಡೆಯಿಂದ ಹರಿಯುವ ನೀರು ಶ್ರೀವೆಂಕಟರಮಣ ದೇವಸ್ಥಾನದ ಸರೋವರ ತುಂಬಿ, ಶ್ರೀಕೃಷ್ಣಮಠದ ಸರೋವರ ತುಂಬಿ ಇಂದ್ರಾಣಿಯನ್ನು ಸೇರುತ್ತದೆ. ಹೀಗೆಯೇ ಸಗ್ರಿ, ಬ್ರಹ್ಮಗಿರಿ, ಅಜ್ಜರಕಾಡಿನಿಂದಲೂ ನೀರು ಬಂದು ಸೇರುತ್ತವೆ.

ಈಗ ಇದೆಲ್ಲ ಸರಕಾರಿ ದಾಖಲೆಗಳಲ್ಲಿ “ತೋಡು’ ಎನಿಸಿವೆ. ಇವೆಲ್ಲವೂ ಸರಿಯಾಗಬೇಕು. ಒಳಚರಂಡಿ ಯೋಜನೆ ಸಮರ್ಪಕವಾಗದ ಕಾರಣ ಎಲ್ಲೆಲ್ಲೂ ಪರಿಸರ ಹಾಳಾಗುತ್ತಿದೆ. ಇದರಿಂದ ಡೆಂಗ್ಯೂನಂತಹ ಕಾಯಿಲೆ ಹಬ್ಬುತ್ತಿವೆ ಎಂದು ಡಾ|ಶ್ಯಾನುಭಾಗ್‌ ಕಳವಳ ವ್ಯಕ್ತಪಡಿಸಿದರು.

Advertisement

ಇಂದ್ರಾಣಿ, ಬುಡ್ನಾರು ಸುತ್ತ ಕೃಷಿ ಬದುಕು ನಡೆಯುತ್ತಿತ್ತು. ಈಗ ಇದೆಲ್ಲ ಮಾಯವಾಗಿ ವಾತಾವರಣ ಕಲುಷಿತಗೊಂಡಿವೆ ಎಂದು ಪ್ರಸ್ತಾವನೆಯಲ್ಲಿ ಇಂದ್ರಾಣಿ ಜಯಕರ ಶೆಟ್ಟಿ ಹೇಳಿದರು. “ಇಂದ್ರಾಣಿ ಉಳಿಸಿ’ ಸಮಿತಿ ಸಂಚಾಲಕ ಶ್ರೀಕಾಂತ ಶೆಟ್ಟಿ ಪ್ರಸ್ತಾವನೆಗೈದರು.

ಕೊಡವೂರಿನಲ್ಲಿ ನಡೆದ ಸಮಾರೋಪದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್‌ ಮಲ್ಪೆ, ವಿದೇಶಗಳಲ್ಲಿದ್ದ ಒಂದೋ ಎರಡೋ ನದಿಗಳನ್ನು ಅವುಗಳ ಬೆಲೆಯರಿತು ಸುಸ್ಥಿತಿಯಲ್ಲಿರಿಸಿಕೊಂಡಿದ್ದಾರೆ.ನಮ್ಮಲ್ಲಿ ಸಾವಿರಾರು ನದಿಗಳಿದ್ದರೂ ಅವುಗಳ ಬೆಲೆ ಗೊತ್ತಿಲ್ಲದೆ ಹಾಳು
ಮಾಡಿಕೊಂಡಿದ್ದೇವೆ. ಹುಟ್ಟುವಾಗ ಇರುವ ಇಂದ್ರಾಣಿ ತೀರ್ಥ ಅಷ್ಟೇ ಪವಿತ್ರವಾಗಿ ಕಡಲನ್ನು ಸೇರುವಂತಾಗಬೇಕು ಎಂದು ಹಾರೈಸಿದರು.
ಗಣ್ಯರಾದ ರಂಜನ್‌ ಕಲ್ಕೂರ, ರಾಘವೇಂದ್ರ ರಾವ್‌, ಸಂತೋಷ್‌ ಶೆಟ್ಟಿ, ಪ್ರೊ|ಮುರುಗೇಶಿ ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ದನ್‌ ಕಾರ್ಯಕ್ರಮ ನಿರ್ವಹಿಸಿದರು. ಇಂದ್ರಾಣಿಯ ಒಂದು ಕೊಡ ತೀರ್ಥವನ್ನು ಕಡಲಿಗೆ ಹಾಕುವ ಮೂಲಕ ಜಾಥಾವನ್ನು ಕೊನೆಗೊಳಿಸಲಾಯಿತು.

ಇಂದ್ರಾಣಿ ರಕ್ಷಿಸಿ ಎಂಬ ಫ‌ಲಕಗಳನ್ನು ಹೊತ್ತ ಬೈಕ್‌ ಸವಾರರು ಹತ್ತು ಕಿ.ಮೀ. ಜಾಥಾ ನಡೆಸಿದರು.

ಮೂಲ ಸೌಕರ್ಯ ಮೊದಲೋ? ನಗರ ಮೊದಲೋ?
ನಗರ ಯೋಜನೆ ಎಂದರೆ ಮೊದಲು ಮೂಲಭೂತ ಸೌಕರ್ಯ ಒದಗಿಸಿ ಬಳಿಕ ನಗರ ನಿರ್ಮಾಣವಾಗಬೇಕು. ನಮ್ಮಲ್ಲಿ ಹಾಗಲ್ಲ. ಮೊದಲು ನಗರ ನಿರ್ಮಾಣ ಮಾಡಿ ಅನಂತರ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. ಇದುವೇ ಸಮಸ್ಯೆಗಳ ಮೂಲ. ಹಿಂದೆ 25,000 ಜನರಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಿದ್ದರು. ಈಗ ಲಕ್ಷಾಂತರ ಜನರಿಗೆ ಇದು ಹೇಗೆ ಸಾಕಾಗುತ್ತದೆ? ಸೂಕ್ತ ಒಳಚರಂಡಿ ಯೋಜನೆ ಜಾರಿಯಾಗದೆ ಈ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ. 1961ರಿಂದ ಈ ಸಮಸ್ಯೆ ಕಾಡುತ್ತಿದೆ ಎಂದು ಡಾ| ರವೀಂದ್ರನಾಥ ಶ್ಯಾನುಭಾಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next