ಕೆಂಗೇರಿ: “ನಾನು ತಪ್ಪು ಮಾಡಿದ್ದರೆ ನನ್ನನ್ನು ಸುಟ್ಟು ಹಾಕಿ, ಬೆಂಕಿ ಇಟ್ಟುಬಿಡಿ ಕೇವಲ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಸ್ತಿತ್ವಕ್ಕಾಗಿ ಕಸ ಘಟಕದ ಸ್ಥಾಪನೆ ವಿಚಾರದಲ್ಲಿ ನನ್ನ ಪಾತ್ರವಿಲ್ಲದಿದ್ದರೂ ವೈಯಕ್ತಿಕವಾಗಿ ತೇಜೋವಧೆ ಮಾಡಿದೆ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಭಾವೋದ್ವೇಗದಿಂದ ನುಡಿದರು.
ಕೆಂಗೇರಿ ಉಪನಗರದಲ್ಲಿ ನೂತನವಾಗಿ ಸರ್ಕಾರದ 50 ಲಕ್ಷ ರೂ., ಅನುದಾನದಲ್ಲಿ ನಿರ್ಮಾಣ ಮಾಡಲಾದ ಅತ್ಯಾಧುನಿಕ ಗ್ರಂಥಾಲಯ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಭಾವೋದ್ವೇಗಕ್ಕೊಳಗಾದರು.
ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ತನ್ನನ್ನು ಬೆದರಿಸಲು ಪ್ರಯತ್ನ ಪಟ್ಟರೆ ತಾನು ಯಾವುದಕ್ಕೂ ಅಂಜುವುದಿಲ್ಲ. ಕ್ಷೇತ್ರದ ಜನತೆ ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ. ಅವರ ಸೇವಕನಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.
ಸರ್ಕಾರದ ಅನುದಾನದಲ್ಲಿ ಮೇಲ್ಸೇತುವೆ, ರಸ್ತೆ, ಶಾಲಾ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು ಅಭಿವೃದ್ಧಿ ಸಹಿಸದ ಬಿಜೆಪಿ ಮುಖಂಡರು ವೃಥಾ ಆರೋಪ ಮಾಡುತ್ತಿದ್ದಾರೆಂದರು. ಇನ್ನು ಐಎಎಸ್, ಐಪಿಎಸ್ ಹಾಗೂ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಲು 10 ಲಕ್ಷ ಅನುದಾನದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ, ಬಿಬಿಎಂಪಿ ವಸೂಲಿ ಮಾಡಿರುವ ಗ್ರಂಥಾಲಯ ಸೆಸ್Õ ಬಾಕಿ ಇರುವ ಹಣವನ್ನು ಇಲಾಖೆಗೆ ಪಾವತಿಸಿದರೆ ಇನ್ನೂ ಹೆಚ್ಚಿನ ಸೇವೆ ಒದಗಿಸಲಾಗುವುದು ಎಂದರು. ಇದೇ ವೇಳೆ ಹಾಪ್‌ಕಾಮ್ಸ್ ನಿರ್ದೇಶಕ ಎಂ.ಜಯಕುಮಾರ್, ಡಾ.ರಾಜ್ ಕುಮಾರ್‌ರ ಸಮಗ್ರ ಜೀವನ ಚರಿತ್ರೆ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದರು.
ಕೆಂಗೇರಿ ವಾರ್ಡ್‌ನ ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ, ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್, ಕೆಂಗೇರಿ ಪುರಸಭೆ ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು, ತಾಪಂ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ಕಾಂಗ್ರೆಸ್ ಮುಖಂಡರಾದ ಟಿ.ಪ್ರಭಾಕರ್, ಕೆ.ಆರ್.ಮೂರ್ತಿ, ಕೆ.ಸಿ.ಸತೀಶ್, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಗಮಕಿ ಹೈಮಾವತಮ್ಮ ಮತ್ತಿತರರಿದ್ದರು.