Advertisement

“ಸಾಧನೆ ಮಾಡಿದ್ದರೆ ತನ್ನ ಹೆಸರಿನ ಮೂಲಕ ಮತಯಾಚಿಸಲಿ’

11:50 PM Apr 10, 2019 | sudhir |

ಮಡಿಕೇರಿ : ತಮ್ಮ ಸಾಧನೆ ಶೂನ್ಯವಾಗಿರುವ ಹಿನ್ನೆಲೆಯಲ್ಲಿ ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಅವರು ತನ್ನ ಹೆಸರಿನ ಮೂಲಕ ಮತಯಾಚಿಸಲು ಧೈರ್ಯವಿಲ್ಲದೆ ಪ್ರಧಾನಿ ಮೋದಿ ಅವರ ಹೆಸರನ್ನೇ ಬಳಸಿಕೊಂಡು ಮತಯಾಚನೆಯಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಟೀಕಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲೇ ಕಾಣಿಸಿಕೊಳ್ಳದ ಪ್ರತಾಪ್‌ ಸಿಂಹ ಅವರು ಇದೀಗ ಸುಳ್ಳು ಜಾಹೀರಾತುಗಳ ಮೂಲಕ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸದರಾಗಿ ಶೂನ್ಯ ಕೊಡುಗೆ ನೀಡಿರುವುದರಿಂದ ಮತದಾರರಿಗೆ ಉತ್ತರಿಸಲಾಗದೆ ಮೋದಿ ಅವರ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಜಾಹೀರಾತಿನಲ್ಲಿ ನೀಡಿರುವಂತೆ ಯಾವುದೇ ಅನುದಾನವನ್ನು ಪ್ರತಾಪ್‌ ಸಿಂಹ ಜಿಲ್ಲೆಗೆ ಹಂಚಿಕೆ ಮಾಡಿಲ್ಲ. ಎಲ್ಲ ಅಭಿವೃದ್ಧಿ ಕಾರ್ಯಗಳು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಅವಧಿಯ ಅನುದಾನದಿಂದಲೇ ನಡೆದಿದೆ ಹೊರತು ಕೇಂದ್ರದ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.
ಜಾಹೀರಾತಿನಲ್ಲಿ ನೀಡಿರುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯಲ್ಲಿ ಮಾಡಿದ್ದರೆ ತನ್ನ ಹೆಸರಿನಲ್ಲೇ ಮತಯಾಚಿಸಬಹುದಲ್ಲ, ಯಾಕೆ ಮೋದಿ ಅವರ ಹೆಸರನ್ನು ಬಳಸಿಕೊಳ್ಳಬೇಕು ಎಂದು ಚಂದ್ರಕಲಾ ಪ್ರಶ್ನಿಸಿದರು.

ಸುಳ್ಳು ಜಾಹೀರಾತಿನ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಅವರು ತಿಳಿಸಿದರು.

ಕಾಳುಮೆಣಸು ಆಮದು ಪ್ರಕರಣದಲ್ಲಿ ಪ್ರತಾಪ್‌ ಸಿಂಹ ಅವರ ಪಾತ್ರವಿದೆ, ಮಳೆಹಾನಿ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಆರೋಪಿಸಿದ ಚಂದ್ರಕಲಾ, ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಬೆಳೆಗಾರರು ಇನ್ನಾದರು ಎಚ್ಚೆತ್ತುಕೊಳ್ಳಬೇಕೆಂದರು.
ಜಿ.ಪಂ ಸದಸ್ಯೆ ಕುಮುದಾ ಧರ್ಮಪ್ಪ ಮಾತನಾಡಿ ಜಿಲ್ಲೆಗೆ ರೈಲು ತರುವುದಾಗಿ ಐದು ವರ್ಷಗಳ ಹಿಂದೆ ಭರವಸೆ ನೀಡಿದ್ದ ಪ್ರತಾಪ್‌ ಸಿಂಹ ಅವರು, ರೈಲು ತಾರದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ ಮತ್ತೆ ಚುನಾವಣಾ ಕಣದಲ್ಲಿರುವ ಅವರು ರೈಲು ತರುವ ಬದಲು ರೈಲು ಬಿಟ್ಟಿದ್ದೇ ಹೆಚ್ಚು ಎಂದು ಟೀಕಿಸಿದರು.

Advertisement

ಅತಿವೃಷ್ಟಿಯಿಂದ ಜಿಲ್ಲೆಯ ಜನ ಸಂಕಷ್ಟಕ್ಕೆ ಸಿಲುಕಿದಾಗ ರಾತ್ರಿ, ಹಗಲೆನ್ನದೆ ನಾವುಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳು ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದೇವೆ. ಆದರೆ ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಪ್ರತಾಪ್‌ ಸಿಂಹ ಅವರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು. ಜಿ.ಪಂ ಸದಸ್ಯರುಗಳಾದ ಪಿ.ಆರ್‌.ಪಂಕಜ ಹಾಗೂ ಎಂ.ಬಿ.ಸುನೀತ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next