Advertisement

ಅನುದಾನ ಬಂದರೂ ನಿರ್ಮಾಣವಾಗದ ನೂತನ ಕಟ್ಟಡ 

11:49 AM Dec 01, 2018 | Team Udayavani |

ಬೆಳ್ತಂಗಡಿ: ರಾಜ್ಯ ಸರಕಾರವು 2015ರ ಆರಂಭದಲ್ಲಿ ಒಟ್ಟು 439 ಹೊಸ ಗ್ರಾ.ಪಂ.ಗಳನ್ನು ಘೋಷಣೆ ಮಾಡಿದ್ದು, ಅದರಂತೆ ಬೆಳ್ತಂಗಡಿ ತಾಲೂಕಿನಲ್ಲೂ ಒಟ್ಟು ಐದು ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿವೆ. ಗ್ರಾ.ಪಂ.ಗಳ ನೂತನ ಕಟ್ಟಡಕ್ಕೆ ಸರಕಾರದಿಂದ ಅನುದಾನ ಮಂಜೂರುಗೊಂಡಿದ್ದರೂ ಇನ್ನೂ ಯಾವುದೇ ಗ್ರಾ.ಪಂ.ಗಳಿಗೆ ಹೊಸ ಕಟ್ಟಡ ನಿರ್ಮಾಣಗೊಂಡಿಲ್ಲ.

Advertisement

ಬೆಳ್ತಂಗಡಿ ತಾ|ನಲ್ಲಿ ತೆಕ್ಕಾರು, ಕಳೆಂಜ, ಕಡಿರು ದ್ಯಾವರ, ನಾವೂರು ಹಾಗೂ ಸುಲ್ಕೇರಿ ಹೀಗೆ 5 ಹೊಸ ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿವೆ. ಇವುಗಳಲ್ಲಿ ಪ್ರತಿ ಗ್ರಾ.ಪಂ.ಗಳ ಕಟ್ಟಡ ನಿರ್ಮಾಣಕ್ಕೂ 40 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು, ಅದರಲ್ಲಿ 10 ಲಕ್ಷ ರೂ. ಬಿಡುಗಡೆಯಾಗಿದೆ.

ಆದರೆ ಅನುದಾನ ಬಂದಿದ್ದರೂ ಕೆಲಸ ಆರಂಭಗೊಂಡಿರುವುದು ಕಳೆಂಜ ಹಾಗೂ ಸುಲ್ಕೇರಿ ಗ್ರಾ.ಪಂ.ಗಳಲ್ಲಿ ಮಾತ್ರ. ಎರಡು ಗ್ರಾ.ಪಂ.ಗಳ ನೂತನ ಕಟ್ಟಡಕ್ಕೆ ಪ್ರಸ್ತುತ ಪಿಲ್ಲರ್‌ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. 5 ಗ್ರಾ.ಪಂ.ಗಳಲ್ಲಿ ಸುಲ್ಕೇರಿ ಗ್ರಾ.ಪಂ.ನ ಆರ್‌ಟಿಸಿಯೂ ಆಗಿದ್ದು, 4 ಗ್ರಾ.ಪಂ.ಗಳ ಹೆಸರಿನ ಆರ್‌ಟಿಸಿ ಕಾರ್ಯ ಪ್ರಗತಿಯಲ್ಲಿದೆ.

ಹಾಲಿ ಎಲ್ಲೆಲ್ಲಿದೆ?
ಮಿತ್ತಬಾಗಿಲು ಗ್ರಾ.ಪಂ.ನಿಂದ ಬೇರ್ಪಟ್ಟಿರುವ ಕಡಿರುದ್ಯಾವರ ಗ್ರಾ.ಪಂ. ಹಾಲಿ ಹೇಡ್ಯದಲ್ಲಿನ ಗ್ರಾಮಚಾವಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ನಿಡ್ಲೆ ಗ್ರಾ.ಪಂ.ನಿಂದ ಬೇರ್ಪಟ್ಟಿರುವ ಕಳೆಂಜ ಗ್ರಾ.ಪಂ. ಪ್ರತಿ ತಿಂಗಳಿಗೆ 4,000 ರೂ.ನಂತೆ ಕಳೆಂಜದಲ್ಲಿ ಬಾಡಿಗೆ ಕಟ್ಟಡದಲ್ಲಿದೆ. ಇಂದಬೆಟ್ಟು ಗ್ರಾ.ಪಂ.ನಿಂದ ಬೇರ್ಪಟ್ಟಿ ರುವ ನಾವೂರು ಗ್ರಾ.ಪಂ. ಹಾಲಿ ಇಂದ ಬೆಟ್ಟು ಗ್ರಾ.ಪಂ. ಕಚೇರಿಯ ಒಂದು ಸಣ್ಣ ಕೊಠಡಿಯಲ್ಲಿದೆ.

ಅಳದಂಗಡಿ ಗ್ರಾ.ಪಂ.ನಿಂದ ಬೇರ್ಪಟ್ಟಿರುವ ಸುಲ್ಕೇರಿ ಗ್ರಾ.ಪಂ. ಪ್ರಸ್ತುತ ಅಳದಂಗಡಿ ಗ್ರಾ.ಪಂ.ನ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಬಾರ್ಯ ಗ್ರಾ.ಪಂ. ನಿಂದ ಬೇರ್ಪಟ್ಟಿರುವ ತೆಕ್ಕಾರು ಗ್ರಾ.ಪಂ. ಹಾಲಿ 4,000 ರೂ.ನಂತೆ ಅಕ್ಷರ ಕರಾವಳಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.

Advertisement

ಸುಲ್ಕೇರಿ ಆರ್‌ಟಿಸಿ ಲಭ್ಯ
5 ಹೊಸ ಗ್ರಾ.ಪಂ.ಗಳ ಪೈಕಿ ಹಾಲಿ ಸುಲ್ಕೇರಿ ಗ್ರಾ.ಪಂ. ಹೆಸರಿಗೆ 40 ಸೆಂಟ್ಸ್‌ ಆರ್‌ಟಿಸಿ ಆಗಿದೆ. ಪ್ರಸ್ತುತ ಎನ್‌ಆರ್‌ ಇಜಿಯ 20 ಲಕ್ಷ ರೂ.ನಲ್ಲಿ ಕಾಮಗಾರಿ ನಡೆಯುತ್ತಿದ್ದು, ರಾಜೀವ ಗಾಂಧಿ ಸೇವಾ ಕೇಂದ್ರದ ಯೋಜನೆಯಂತೆ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಎನ್‌ಆರ್‌ಇಜಿ ಅನುದಾನ ಮುಗಿದ ಬಳಿಕ ಬಿಡುಗಡೆಗೊಂಡಿರುವ 10 ಲಕ್ಷ ರೂ.ಗಳನ್ನು ಬಳಕೆ ಮಾಡುವ ಕುರಿತು ತೀರ್ಮಾನಿಸಿದ್ದಾರೆ.

ಬಿಲ್‌ ಪಾವತಿ ಇಲ್ಲ !
2 ಗ್ರಾ.ಪಂ.ಗಳ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೂ ಗುತ್ತಿಗೆ ದಾರರಿಗೆ ಬಿಲ್‌ ಪಾವತಿ ಮಾಡುವಂತಿಲ್ಲ. ನಿವೇಶನದ ಕಡತ ಕಂದಾಯ ಇಲಾಖೆ ಯಲ್ಲಿದ್ದು, ಗ್ರಾ.ಪಂ. ಹೆಸರಿಗೆ ಆರ್‌ಟಿಸಿ ಹಸ್ತಾಂತರ ಬಳಿಕವೇ ಬಿಲ್‌ ಪಾವತಿಯಾ ಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಶಾಸಕರ ಸೂಚನೆ 
ನೂತನ ಗ್ರಾ.ಪಂ.ಗಳು ಮಂಜೂರುಗೊಂಡು 4 ವರ್ಷಗಳೇ ಆದರೂ ಇನ್ನೂ ಅವುಗಳ ನಿವೇಶನವೇ ಅಂತಿಮಗೊಳ್ಳದ ಕುರಿತು ಕಳೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಹರೀಶ್‌ ಪೂಂಜ ಅವರು, 2 ತಿಂಗಳೊಳಗೆ ನಿವೇಶನದ ಕಡತ ಪೂರ್ತಿಗೊಂಡು ಬಾಕಿ ಉಳಿದಿರುವ ಗ್ರಾ.ಪಂ.ಗಳ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಸೂಚನೆ ನೀಡಿದ್ದಾರೆ. ಜತೆಗೆ ಕಡತಗಳ ಪರಿಶೀಲನೆಗಾಗಿ ತಾ.ಪಂ.ನ ಶ್ರೀಧರ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಆರ್‌ಟಿಸಿ ಕಾರ್ಯ ಬಹುತೇಕ ಪೂರ್ಣ
ಆರ್‌ಟಿಸಿಗೆ ಬಾಕಿ ಇರುವ 4 ಗ್ರಾ.ಪಂ.ಗಳ ಪೈಕಿ 3 ಗ್ರಾ.ಪಂ.ಗಳ ಆರ್‌ಟಿಸಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ತೆಕ್ಕಾರು ಗ್ರಾ.ಪಂ. ಆರ್‌ಟಿಸಿ ಮಾತ್ರ ಪ್ರಗತಿಯಲ್ಲಿದೆ. ಕಳೆಂಜ, ಸುಲ್ಕೇರಿ ಗ್ರಾ.ಪಂ.ಗಳ ಕಟ್ಟಡದ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಉಳಿದಿರುವುದೂ ಶೀಘ್ರ ಆರಂಭಗೊಳ್ಳಲಿದೆ.
– ಕುಸುಮಾಧರ್‌ ಬಿ. ಕಾರ್ಯನಿರ್ವಹಣಾಧಿಕಾರಿ, ಬೆಳ್ತಂಗಡಿ ತಾ.ಪಂ. 

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next