ಬೆಂಗಳೂರು: ಸರಕಾರಿ ಶಾಲೆ ಮತ್ತು ಕಾಲೇಜುಗಳ ಆಸ್ತಿ ಸಂರಕ್ಷಣ ಆಂದೋಲನವನ್ನು ಕಾಲಮಿತಿಯಲ್ಲಿ ಪೂರ್ಣ ಗೊಳಿಸಲು ವಿಫಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸುವುದಾಗಿ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಅ.13ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಬಿ.ಸಿ.ನಾಗೇಶ್ ಅವರು ಇಲಾಖೆಯ ಪ್ರಗತಿ ಪರಿಶೀಲನ ಸಭೆ ಕರೆದಿರುವುದರಿಂದ ಈವರೆಗೆ ಎಷ್ಟು ಶಾಲೆ, ಕಾಲೇಜುಗಳ ಆಸ್ತಿ ನೋಂದಣಿ ಮಾಡಲಾಗಿದೆ, ಎಷ್ಟು ಬಾಕಿ ಇದೆ ಎಂಬ ಪ್ರಗತಿ ವರದಿಯನ್ನು ಇಲಾಖೆಗೆ ಸಲ್ಲಿಸುವಂತೆ ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಆಂದೋಲನ ರೂಪದಲ್ಲಿ ನೋಂದಣಿ ಮಾಡುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಒಂದು ವೇಳೆ ಯಾವುದೇ ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ಬಾಕಿ ಇದ್ದರೆ ತತ್‌ಕ್ಷಣ ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಅ.13ರಂದು ನಡೆಯಲಿರುವ ಪ್ರಗತಿ ಪರಿಶೀಲನ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಈ ವರೆಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.