ಬೆಂಗಳೂರು: ಮಹಾತ್ಮ ಗಾಂಧೀಜಿ ಅವರನ್ನು ಮರೆತರೆ ದೇಶಕ್ಕೆ ಒಳ್ಳೆಯ ಭವಿಷ್ಯವಿಲ್ಲ. ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಇನ್ನೂ ಹೆಚ್ಚು ದಿನ ಬದುಕಿದ್ದರೆ ದೇಶದಲ್ಲಿ ಒಳ್ಳೆಯ ಮೌಲ್ಯ ಸ್ಥಾಪನೆಯಾಗುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೋಮವಾರ ವಿಧಾನ ಸೌಧದ ಆವರಣ ದಲ್ಲಿರುವ ಅವರಿಬ್ಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಗಾಂಧೀಜಿ ಅವರ ತ್ಯಾಗ, ಬಲಿದಾನ ಶ್ಲಾಘನೀಯ ಹಾಗೂ ಯುದ್ಧ ಮಾಡದೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಜಗತ್ತಿನ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಗಾಂಧಿ ಸ್ಮರಣೆ ಅವಶ್ಯ: ಗಾಂಧೀಜಿ ನಾಯಕತ್ವದಲ್ಲಿ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ, ಚಳವಳಿಯಲ್ಲಿ ಸಕ್ರಿಯವಾಗಿ ಭಾಗ ವಹಿಸಿದ್ದರು. ಅಹಿಂಸಾ ತತ್ವದ ಮೂಲಕ ಗಾಂಧೀಜಿ ತಂದು ಕೊಟ್ಟಿರುವ ಸ್ವಾತಂತ್ರ್ಯದ ಫಲವನ್ನು ನಾವೆಲ್ಲರೂ ಇಂದು ಸವಿಯುತ್ತಿದ್ದೇವೆ. ಗಾಂಧೀಜಿ ಅವರನ್ನು ತಿಳಿದುಕೊಳ್ಳುವುದರ ಜತೆಗೆ ಸ್ಮರಣೆಯನ್ನೂ ಮಾಡಬೇಕು ಎಂದು ಹೇಳಿದರು. ಗಾಂಧೀಜಿಯವರು ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ನಾಯಕರು. ಗಾಂಧೀಜಿಯವರಲ್ಲಿ ವಿಶ್ವ ನಾಯಕನ ಎಲ್ಲ ಗುಣ, ತತ್ವ ಹಾಗೂ ಆದರ್ಶ ಅಡಗಿತ್ತು. ಈ ಬಗ್ಗೆ ಅನೇಕರು ತಮ್ಮ ಪುಸ್ತಕ, ಲೇಖನದಲ್ಲಿ ವರ್ಣಿಸಿದ್ದಾರೆ. ಅಂತಹ ಮಹಾನ್ ಚೇತನಕ್ಕೆ ನಾವೆಲ್ಲರೂ ಗೌರವ ಸಲ್ಲಿಸಲೇಬೇಕು ಎಂದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ಕೆಲವೇ ತಿಂಗಳಲ್ಲಿ ಮತಾಂಧನ ಗುಂಡಿಗೆ ಗಾಂಧೀಜಿ ಬಲಿಯಾಗಿದ್ದರು. ಭಾರತ ವಿಭಜನೆ ಆಗಬಾರದು, ಎಲ್ಲರೂ ಒಂದೇ ದೇಶದಲ್ಲಿರಬೇಕು. ಭಾರತ ಮತ್ತು ಪಾಕಿಸ್ತಾನ ಎರಡು ಭಾಗ ಆಗಬಾರದು ಎಂದು ಗಾಂಧೀಜಿ ಹೋರಾಟ ಮಾಡಿದ್ದರು. ದೇಶದ ಇಂದಿನ
ರಾಜಕಾರಣಕ್ಕೆ ಗಾಂಧೀಜಿಯವರ ಮಾರ್ಗದರ್ಶನ ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತತ್ವಕ್ಕೆ ಬದ್ಧರಾಗಿದ್ದ ಶಾಸ್ತ್ರೀ: ಗಾಂಧೀಜಿಯವರು ಹುಟ್ಟಿದ ದಿನವೇ ಲಾಲ್ ಬಹದ್ದೂರ್ ಶಾಸ್ತ್ರೀ ಹುಟ್ಟಿದ್ದರು. ಅತ್ಯಂತ ಕಡಿಮೆ ಅವಧಿಗೆ ದೇಶದ ಪ್ರಧಾನಿಯಾದರೂ, ಪ್ರಾಮಾಣಿಕ ವಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದರು. ಅವರು ಇನ್ನೂ ಹೆಚ್ಚು ದಿನ ಬದುಕಿದ್ದರೆ ಒಳ್ಳೆಯ ಮೌಲ್ಯಗಳು ದೇಶದಲ್ಲಿ ಸ್ಥಾಪನೆಯಾಗು
ತ್ತಿದ್ದವು. ಅವರು ನಂಬಿರುವ ಮೌಲ್ಯಕ್ಕೆ, ತತ್ವಕ್ಕೆ ಬದ್ಧರಾಗಿ ಜೀವನ ನಡೆಸಿದ್ದರು ಎಂಬುದನ್ನು ನೆನಪಿಸಿದರು.
ಶಾಸ್ತ್ರೀಯವರು ದೇಶಕ್ಕೆ ನೀಡಿದ್ದ ಜೈ ಜವಾನ್, ಜೈ ಕಿಸಾನ್ ಘೋಷಣೆಯು ಜನರಲ್ಲಿ ರಾಷ್ಟ್ರಾಭಿಮಾನ ಮೂಡಿಸುವು ದರ ಜತೆಗೆ ರೈತರ ಮತ್ತು ಸೈನಿಕರ ಬಗ್ಗೆ ಸಾಮಾನ್ಯ ಜನರಲ್ಲೂ ಗೌರವ ಮೂಡುವಂತೆ ಮಾಡಿದೆ. ದೇಶಕ್ಕೆ ರೈತರು ಹಾಗೂ ಸೈನಿಕರು ಎಷ್ಟು ಅವಶ್ಯಕ ಎಂಬುದನ್ನು ಅಂದೇ ಅರಿತಿದ್ದರು ಎಂಬುದನ್ನು ವಿವರಿಸಿದರು.