ಅಫಜಲಪುರ: ಯಾವುದೋ ಘಟನೆಯಲ್ಲಿ ಅಪರಾಧ ಕೃತ್ಯವೆಸಗಿ ಜೈಲುವಾಸ ಅನುಭವಿಸಿರುವ ರೌಡಿಗಳು ಇನ್ಮುಂದೆ ಶಾಂತಿಯುತವಾಗಿ ಜೀವನ ನಡೆಸಬೇಕು. ಮತ್ತೇನಾದರೂ ಅಪರಾಧ ಚಟುವಟಿಕೆಯಲ್ಲಿ ತೊಡಗಿದರೆ ಗಡಿ ಪಾರು ಮಾಡಲಾಗುವುದು ಎಂದು ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಎಚ್ಚರಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ನಡೆದ ಪರೇಡ್‌ನಲ್ಲಿ ವಿವಿಧ ಪ್ರಕರಣದಡಿ ದಾಖಲಾಗಿರುವ 150ಕ್ಕೂ ಹೆಚ್ಚು ರೌಡಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಳ್ಳತನ ಸೇರಿ ಹಲವು ಅಪರಾಧದಡಿ ರೌಡಿಗಳಾದವರು ಇನ್ಮುಂದೆ ಸಮಾಜದಲ್ಲಿ ಶಾಂತಿಯುತವಾಗಿ ಇರಬೇಕು. ಹಿಂದೆ ನಡೆದ ಘಟನೆಗಳು ಮರೆತು ಕುಟುಂಬದವರೊಂದಿಗೆ ಉತ್ತಮ ರೀತಿ ಬಾಳಬೇಕು. ಸನ್ನಡತೆ ಆಧರಿಸಿ ಇಲಾಖೆ ರೌಡಿ ಶಿಟರ್ ಪಟ್ಟಿಯಿಂದ ತೆಗೆಯಲಾಗುವುದು. ಹೀಗಾಗಿ ಎಲ್ಲರೊಂದಿಗೆ ಪ್ರಿತಿಯಿಂದ ಇರಬೇಕು ಎಂದು ತಾಕೀತು ಮಾಡಿದರು.
ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಮಾತನಾಡಿ, ರೌಡಿ ಶಿಟರ್‌ಗಳು ಇತರರಂತೆ ಒಳ್ಳೆಯವರಾಗಿ ಇರಬೇಕು. ಯಾವುದೇ ಕಾರಣಕ್ಕೂ ಇಲಾಖೆ ಸೂಚಿಸುವ ನಿಯಮ ಮೀರಿ ನಡೆಯಬಾರದು. ತಮ್ಮ ಚಲನವಲನಗಳ ಮೇಲೆ ಇಲಾಖೆ ನಿಗಾ ಇಡಲಾಗುತ್ತದೆ. ಹೀಗಾಗಿ ಸನ್ನಡತೆಯಿಂದ ಇರಬೇಕು ಎಂದರು.
ಪ್ರೊಬೇಶನರಿ ಪಿಎಸ್‌ಐ ಅಮೋಗಿ, ಎಎಸ್‌ಐ ಮಹಾಂತೇಶ, ರಜೀಯಾ ಬೇಗಂ, ಸಿಬ್ಬಂದಿಗಳಾದ ಭಾಗಣ್ಣ ಸಾತಿಹಾಳ, ಯಲಗೊಂಡ ಉಪ್ಪಾರ, ಸತೀಶ ಕರಜಗಿ, ವಿಶ್ವನಾಥ ಅಕ್ಕಲಕೋಟ, ಚಂದ್ರಶೇಖರ ದೇಗಿನಾಳ, ಚಂದ್ರಕಾಂತ ಕರಜಗಿ, ಸಿದ್ಧರಾಮ ಪಾಟೀಲ, ಚಂದ್ರಶೇಖರ ದೇಗಿನಾಳ, ಸಂತೋಷ ಮಲಘಾಣ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.