Advertisement

ಭೂಮಿಯನ್ನು ಕಾಪಾಡಿಕೊಳ್ಳದಿದ್ದರೆ ಅನಾಹುತಾ ತಪ್ಪಿದ್ದಲ್ಲ

05:08 PM Jun 05, 2020 | mahesh |

ಭೂಮಿಯ ಮೇಲೆ ನಿರಂತರ ಸ್ಫೋಟಗೊಳ್ಳುತ್ತಿರುವ ಜನಸಂಖ್ಯೆಯೇ ಭೂಮಿಯ ಸಹಜ ಸ್ಥಿತಿ ಅಲ್ಲೋಲ ಕಲ್ಲೋಲವಾಗಲು ಪ್ರಮುಖ ಕಾರಣ. 6 ಶತಕೋಟಿಗೂ ಮೀರಿ ಬೆಳೆಯುತ್ತಿರುವ ಜನಭಾರವನ್ನು ನಿಭಾಯಿಸಲು ಭೂ ತಾಯಿಗೆ ಸಾಧ್ಯವಾಗುತ್ತಿಲ್ಲ. ಭೂಮಿಯ ಸಮತೋಲನ ತಪ್ಪಿಹೋಗಿದೆ. ಇದರಿಂದಾಗುವ ಅನಾಹುತ ಹೇಳಲು ಅಸಾಧ್ಯ. ಮಾನವನ ನೆಮ್ಮದಿಯ ಜೀವನಕ್ಕೆ ಏನೆಲ್ಲಾ ಕೊಡುಗೆ ನೀಡಿರುವ ಭೂಮಿಯ ಬಗ್ಗೆ ಮಾನವ ನಿರ್ದಯಿಯಾಗಿ ನಡೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ತಾನು ನಿಂತ ನೆಲವೇ ಕುಸಿದು ತಾನು ಮಣ್ಣಾಗುವ ಅಪಾಯಕಾರಿ ಸಂಕೇತಗಳು ಗೋಚರಿಸುತ್ತಿದ್ದರೂ ಮಾನವ ಎಚ್ಚೆತ್ತುಕೊಳ್ಳುತ್ತಿಲ್ಲ.

Advertisement

ಇಂತಹ ಪರಿಸ್ಥಿತಿ ದಿಢೀರೆಂದು ಬರಲಿಲ್ಲ. ಭೂಮಿ ತನ್ನ ಮೇಲೆ ಹೆಚ್ಚುತ್ತಿರುವ ಹೊರೆ ಕುರಿತು ಆಗಾಗ ಮುನ್ಸೂಚನೆಗಳನ್ನು ನೀಡುತ್ತಲೇ ಇದೆ. ಭೂಕಂಪ, ನೀರಿನ ಕೊರತೆ, ವಿಷಯುಕ್ತ ವಾತಾವರಣ, ಪ್ರವಾಹ, ಪ್ರಾಣಿ ಸಂಕುಲದ ಕಣ್ಮರೆ, ಆಹಾರದ ಅಭಾವ, ಬರಿದಾಗುತ್ತಿರುವ ಸಂಪನ್ಮೂಲಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಭೂಮಿಯ ಮೇಲೆ ಇರುವ ಸಂಕಟಗಳ ಪಟ್ಟಿ ಕೊನೆಗೊಳ್ಳುವುದೇ ಇಲ್ಲ.

ಜನಸಂಖ್ಯೆ ನಿರಂತರವಾಗಿ ಅಧಿಕವಾಗಿತ್ತಿರುವುದರಿಂದ ಕುಡಿಯುವ ನೀರು ಸಿಗುವುದು ಕಷ್ಟಕರವಾಗಿದೆ. ಶುದ್ಧಗಾಳಿ ಸಿಗುತ್ತಿಲ್ಲ. ಬಗೆ ಬಗೆಯ ರೋಗರುಜಿನಗಳು ಹೆಚ್ಚಾಗುತ್ತಲೇ ಇವೆ. ಹವಾಮಾನ ವೈಪರಿತ್ಯದಿಂದಾಗಿ ವಾತಾವರಣ ಸಮತೋಲನದಲ್ಲಿಲ್ಲ. ನಿಸರ್ಗದಲ್ಲಿ ಅನಿರೀಕ್ಷಿತ ಅವಘಡಗಳು ಅಪ್ಪಳಿಸುತ್ತಲೇ ಇವೆ. ನಿಗದಿಯಂತೆ ಮಳೆಯಾಗುತ್ತಿಲ್ಲ. ಭೂಮಿ ಬಿಸಿಯೇರುತ್ತಿದೆ. ಜೀವ ಸಂಕುಲಗಳ ರಕ್ಷಣಾ ಕವಚ ಅಪಾಯದಂಚಿನಲ್ಲಿದೆ. ಇವೆಲ್ಲವುಗಳಿಂದ ಭೂಮಿಯ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಸಂಕಷ್ಟಗಳು ಬಿಚ್ಚಿಕೊಳ್ಳುತ್ತಲೇ ಇವೆ. ಭೂಮಿಯಿಂದ ಸಿಗುತ್ತಿದ್ದ ಅನುಕೂಲಗಳು ದಿನಕಳೆದಂತೆ ಕಡಿಮೆಯಾಗುತ್ತಿವೆ. ಶುದ್ಧ ಪರಿಸರದ ಉಸಿರುಗಟ್ಟಿ ಭೂಮಿಯ ನಾಶದ ತೂಗುಕತ್ತಿ ಗೋಚರಿಸುತ್ತಿದೆ.

ತಪ್ಪು ಹೆಜ್ಜೆಗಳನ್ನಿಡುತ್ತಿರುವ ನಾವು ವಾಸ್ತವ ಸ್ಥತಿಯನ್ನು ಮನಗಂಡು ಭೂಮಿಯ ರಕ್ಷಣೆಗೆ ಮುಂದಡಿಯಿಡುವದು ಇಂದಿನ ತುರ್ತು ಕ್ರಮವಾಗಿದೆ. ಭೂಮಿಯಲ್ಲಿ ಸೀಮಿತವಾಗಿರುವ ಸಂಪನ್ಮೂಲಗಳನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಉಪಯೋಗಿಸಬೇಕು. ಯಥೇಚ್ಛವಾಗಿ ಹಾಗೂ ಸುಲಭವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಸೀಮಿತ ಸಂಪನ್ಮೂಲಗಳ ಬಳಕೆ ನಿಯಂತ್ರಿಸಬೇಕು. ನವೀಕರಿಸಬಹುದಾದ ಇಂಧನ ಮೂಲಗಳಿಂದ ಶಕ್ತಿ ಪಡೆದು ಪರಿಸರದ ಮೇಲೆ ಬೀಳುವ ಅನಗತ್ಯ ಹೊರೆಯನ್ನು ಕಡಿಮೆ ಮಾಡಬೇಕು. ಜೈವಿಕ ವ್ಯವಸ್ಥೆಗೆ ಧಕ್ಕೆ ತರುವಂತಹ ಯೋಜನೆಗಳನ್ನು ನಿಷೇಧಿಸಬೇಕು.

ರಾಸಾಯನಿಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸ್ವತ್ಛ ಪರಿಸರದ ಉಳಿವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯೀಕರಣಕ್ಕೆ ಹೆಚ್ಚು ಒತ್ತು ಕೊಡಬೇಕು. ಪ್ರಕೃತಿಯನ್ನು ಸಂರಕ್ಷಿಸಲು ಸಣ್ಣಪುಟ್ಟ ಕೆಲಸ ಮಾಡುವ ಜವಾಬ್ದಾರಿಯನ್ನು ದೊಡ್ಡ ಮನಸ್ಸಿನಿಂದ ಸ್ವೀಕರಿಸಬೇಕು. ನಿಸರ್ಗ ಸಮರಕ್ಷಣೆಗೆ ಎಲ್ಲರೂ ಪಣತೊಡಬೇಕು. ಜನಸಂಖ್ಯೆ ನಿರ್ವಹಣೆಗೆ ರೂಪಿಸಿರುವ ಜಾಗತಿಕ ಕಾರ್ಯಕ್ರಮಗಳನ್ನು ಅನುಸರಿಸಬೇಕು. ನಮ್ಮೊಡನೆ ಜೀವಿಸುವ ಪ್ರಾಣಿ ಪಕ್ಷಿ ಕೀಟ ಸಂಕುಲಗಳನ್ನು ರಕ್ಷಿಸಲು ಮುಂದಾಗಬೇಕು. ಈ ಸಮಸ್ಯೆಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ತೊಡೆದುಹಾಕುತ್ತೇವೆ ಎಂಬ ಹುಚ್ಚುತನವನ್ನು ಮೊದಲು ಬಿಡಬೇಕು.

Advertisement

ಭೂಮಿಯನ್ನು ಕಾಪಾಡಿಕೊಂಡು ಹೋಗದಿದ್ದರೆ ತುರ್ತು ಕಾರ್ಯಾಚರಣೆ ಮಾಡದಿದ್ದರೆ ಈಗಾಗಲೇ ಜಗತ್ತು ಅನುಭವಿಸುತ್ತಿರುವ ಘೋರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದು ಖಚಿತ. ಆದರೂ ಈ ಪರಿಸ್ಥಿತಿ ಇನ್ನೂ ವಿಪರೀತ ಮಟ್ಟವನ್ನು ತಲುಪಿಲ್ಲ. ಭೂಮಿಯನ್ನು ಜತನದಿಂದ ಕಾಪಾಡಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ಈ ಸಮಯವನ್ನು ಉಪಯೋಗಿಸಿಕೊಂಡರೆ ಮಾತ್ರ ಭೂಮಿ ಉಳಯುತ್ತದೆ.

ಸೋಮು ಕುದರಿಹಾಳ, ಬರಗೂರು, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next