ದಾವಣಗೆರೆ: ಕಳಪೆ ಬಿತ್ತನೆ ಬೀಜ ವಿತರಣೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಯಕೊಂಡ ಶಾಸಕ ಪ್ರೊ| ಎನ್. ಲಿಂಗಣ್ಣ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಾಲೂಕಿನ ಆನಗೋಡು ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದೆ. ಕೃಷಿ ಇಲಾಖೆ ವತಿಯಿಂದ ರೈತರಿಗೆ ಅವಶ್ಯವಿರುವ ಎಲ್ಲಾ ಬಿತ್ತನೆ ಬೀಜಗಳನ್ನು ಕಡ್ಡಾಯವಾಗಿ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಕೋವಿಡ್ ಮಹಾಮಾರಿಯ ಕರಿನೆರಳಿನ ಛಾಯೆಯ ನಡುವೆಯೂ ಎಲ್ಲಾ ರೈತರು ಅಗತ್ಯ ಕ್ರಮ ಅನುಸರಿಸಿ ಮುಂಗಾರು ಬಿತ್ತನೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯೂ ಸಹ ಮುಂಗಾರು ಬಿತ್ತನೆಗೆ ತಾಲೂಕಿನಾದ್ಯಂತ ಬಿತ್ತನೆ ಬೀಜ ಹಾಗೂ ರಸಗೊಬ್ಬರ, ಪರಿಕರ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ರೈತರು ಸದುಪಯೋಗ ಪಡೆದುಕೊಂಡು ಉತ್ತಮ ಇಳುವರಿ ಪಡೆಯಬೇಕು ಎಂದು ಆಶಿಸಿದರು.
ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್. ರೇವಣಸಿದ್ದನಗೌಡ ಮಾತನಾಡಿ, ತಾಲೂಕಿನಾದ್ಯಂತ 58 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದೆ. 32 ಸಾವಿರ ಹೆಕ್ಟೇರ್ ಮೆಕ್ಕೆಜೋಳ, 1 ಸಾವಿರ ಹೆಕ್ಟೇರ್ ಭತ್ತ, 2 ಸಾವಿರ ಹೆಕ್ಟೇರ್ ತೊಗರಿ, 650 ಹೆಕ್ಟೇರ್ ಜೋಳ, 2 ಸಾವಿರ ಹೆಕ್ಟೇರ್ ಕಬ್ಬು ಇತರೆ ಬೆಳೆ ಬೆಳೆಯುವ ಗುರಿ ಇದೆ. 18 ಟನ್ ಮೆಕ್ಕೆಜೋಳ, 15 ಕ್ವಿಂಟಾಲ್ ತೊಗರಿ, 10 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜಗಳ ದಾಸ್ತಾನಿದೆ. ಬೇಡಿಕೆಗೆ ಅನುಗುಣವಾಗಿ ವಿತರಣೆ
ಜೊತೆಗೆ ಅವಶ್ಯಕತೆ ಇರುವ ಬಿತ್ತನೆ ಬೀಜಗಳ ದಾಸ್ತಾನು ಪ್ರಕ್ರಿಯೆ ನಿರಂತರವಾಗಿರಲಿದೆ. ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.