Advertisement
ಈವರೆಗೆ ಉಪಲಬ್ಧವಾಗಿರುವ ಕನ್ನಡ ಗ್ರಂಥಗಳಲ್ಲಿ ಅತ್ಯಂತ ಹಳೆಯದಾದ “ಕವಿರಾಜಮಾರ್ಗ’ವು ಅಲಂಕಾರ ಶಾಸ್ತ್ರಕ್ಕೆ ಸಂಬಂಧಪಟ್ಟ ಗ್ರಂಥ. ಹಾಗಿದ್ದರೂ ಇದರಲ್ಲಿ ಅಲ್ಲಲ್ಲಿ ಕನ್ನಡನಾಡು, ನುಡಿ, ಜನ, ಮೊದಲಾದವುಗಳ ಬಗೆಗೆ ಒಂದೆರಡು ಮಾತುಗಳೂ ಇವೆ. ಅದರಲ್ಲಿ, ಇದೇನು ಹೀಗೆ ಹೇಳಿಬಿಟ್ಟಿದ್ದಾನಲ್ಲ ಅನ್ನಿಸುವಂಥ ಪದ್ಯವೊಂದು ಪ್ರಥಮ ಪರಿಚ್ಛೇದದಲ್ಲಿ ಬರುತ್ತದೆ, ಅದನ್ನು ಬಿಡಿಸಿ, ಗದ್ಯರೂಪದಲ್ಲಿ ಬರೆದರೆ, ಅದು ಹೀಗೆ ಕಂಡೀತು:
Related Articles
Advertisement
ಹಳೆಯ ಭಾಷೆ ಉಳಿದ ಸೋಜಿಗಹವಿಗನ್ನಡವು ಕನ್ನಡದ್ದೇ ಒಂದು ರೂಪ; ಬಹುಶಃ ಕದಂಬರ ಕಾಲದಲ್ಲಿ ಬನವಾಸಿ ದೇಶದಲ್ಲಿ ಜನರು ಆಡುತ್ತಿದ್ದ ಹಳಗನ್ನಡದ ಒಂದು ದೇಸಿರೂಪ. ಹಾಗಾಗಿಯೇ ಅದು ಹಳಗನ್ನಡ ಮತ್ತೆ ನಡುಗನ್ನಡದ ಕಂಪನ್ನು ಈಗಲೂ ಉಳಿಸಿಕೊಂಡಿರುವ ಭಾಷೆ. ಪಂಪನು ಒಂದು ಕಡೆ “ಓಡ’ ಎಂಬ ಪದ ಬಳಸುತ್ತಾನೆ. ವಿದ್ವಾಂಸರೊಬ್ಬರು, ಈ ಪದವು ಎಲ್ಲಿಂದ ಬಂತಪ್ಪಾ, ಇದರ ಅರ್ಥ ಏನಪ್ಪಾ ಎಂದು ಯೋಚನೆ ಮಾಡಿದ್ದನ್ನು ನೋಡಿದೆ . ಆದರೆ ನನಗದರ ಅರ್ಥ ಕೂಡಲೇ ಹೊಳೆದಿತ್ತು. ಕಾರಣ ಇಷ್ಟೇ; ನಮ್ಮಲ್ಲಿ ಈಗಲೂ ದೋಣಿ ಎಂಬುದನ್ನು “ಓಡ’ ಅಂತಲೇ ಹೇಳುತ್ತಾರೆ. “ಎಕ್ಕಸಕ್ಕತನಂಗಳು’ ಎಂಬುದು ಪಂಪನ ಇನ್ನೊಂದು ಬಳಕೆ. ಡಿ.ಎಲ್. ನರಸಿಂಹಾಚಾರ್ಯರು ಎಕ್ಕಸಕ್ಕತನಂಗಳು = ನಿಂದೆ ಪರಿಹಾಸಗಳು ಎಂದು ಅರ್ಥವನ್ನು ಕೊಟ್ಟಿದ್ದಾರೆ, ಅದಕ್ಕೆ ತೆಲುಗಿನ ಎಕ್ಕಸಕ್ಕಮು ಅನ್ನುವ ಪ್ರಯೋಗ ಅವರಿಗೆ ಆಧಾರವಾಗಿ ಕಂಡಿದೆ. ಆದರೆ ತುಳುನಾಡಿನವರಿಗೆ ಇದಕ್ಕೆ ಇನ್ನೊಂದು ಅರ್ಥ ಗೋಚರಿಸುತ್ತದೆ. ಯಾಕೆಂದರೆ ಇದು ತುಳುವಿನಲ್ಲಿ ಮತ್ತು ಹವಿಗನ್ನಡದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಪದವೇ. ಬೇಕಾಬಿಟ್ಟಿ, ಲಂಗುಲಗಾಮಿಲ್ಲದ ಎಂಬ ಅರ್ಥದಲ್ಲಿ ಇದು ನಮ್ಮಲ್ಲಿ ತುಳು ಮತ್ತು ಹವಿಗನ್ನಡಗಳಲ್ಲಿ ಈಗಲೂ ಬಳಕೆಯಲ್ಲಿದೆ. ಭಾಷೆ ಬದಲಾಗುವ ಕ್ರಮ
ಕನ್ನಡಿಗರು ಬಿಟ್ಟಿರುವ ಕನ್ನಡದ್ದೇ ಎಷ್ಟೋ ಪ್ರಯೋಗಗಳು ಈ ಉಪಭಾಷೆ ಯಲ್ಲಿ ಹೇಗೆ ಉಳಿದವು ಎಂದು ಯೋಚನೆ ಮಾಡಿದಾಗ ಹೊಳೆದದ್ದು ಇಷ್ಟು: ಒಂದು ಭಾಷೆಯು ಬದಲಾಗುವುದು ಕೊಡು ಕೊಳೆಯಿಂದ, ಅನುಕರಣೆಯಿಂದ. ಬಹುಭಾಷಿಕರು ಇರುವಲ್ಲಿ, ನಗರಗಳಲ್ಲಿ ಇದು ಹೆಚ್ಚಾಗಿ ಆಗುತ್ತದೆ. ಹವಿಕರು ಹಳ್ಳಿಗಳಲ್ಲಿಯೇ ಕೃಷಿ ಮಾಡಿಕೊಂಡು ಎರಡು ಮೂರು ಜಿಲ್ಲೆಗಳಲ್ಲಿ ಮಾತ್ರ ಇದ್ದವರು. ಹೀಗಾಗಿ ಬೇರೆ ಭಾಷೆಗಳ ಪ್ರಭಾವ ಅವರ ಮೇಲೆ ಅಷ್ಟಾಗಿ ಆಗಲಿಲ್ಲ ಅಂತ ಹೇಳಬಹುದು. ಈ ಭಾಷೆ ಒಂದು ಸೀಮಿತ ವಲಯದಲ್ಲಿ ಮಾತ್ರ ಚಾಲ್ತಿಯಲ್ಲಿದ್ದರಿಂದ ಬಹಳಷ್ಟು ಹಳೆಯ ಪ್ರಯೋಗಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಯಿತು ಅಂತ ಕಾಣುತ್ತದೆ. ಹಾಗಂತ ಎಷ್ಟೋ ಹಳೆಯ ಶಬ್ದಗಳು ಬದಲಾಗಿ ಉಳಿದಿರುವುದೂ ಉಂಟು. “ಅಡರು’ ಅನ್ನುವ ಶಬ್ದವನ್ನು ಪಂಪ “ಮೇಲಕ್ಕೇರು’ ಅನ್ನುವ ಅರ್ಥದಲ್ಲಿ ಬಳಸಿದ್ದಾನೆ (ಉದಾ: ರಥವನ್ನು ಅಡರಿದನು). ಹವಿಕರಲ್ಲಿ ಏನಾದರೂ ತಲೆಗೆ ಏರುವುದು ಎಂಬ ಸೀಮಿತ ಅರ್ಥದಲ್ಲಿ ಇದು ಈಗಲೂ ಇದೆ. ಉದಾ: ಅವಂಗೆ ಹಾಂಕಾರ ತಲೆಗೆ ಅಡರಿದ್ದು (ಅವನಿಗೆ ಅಹಂಕಾರ ತಲೆಗೆ ಏರಿದೆ). ಹವಿಕರು “ಬೆಳಗ್ಗೆ, ಸಂಜೆ’ ಅನ್ನುವುದನ್ನು “ಉದಿಯಪ್ಪಗ, ಹೊತ್ತೋಪ್ಪಗ’ ಅನ್ನುತ್ತಾರೆ. ಸ್ವಲ್ಪ ಯೋಚಿಸಿದರೆ ಇದರ ಅರ್ಥ ಹೊಳೆಯುತ್ತದೆ. (ಸೂರ್ಯ) ಉದಯ ಆಗುವಾಗ – ಉದಯ ಅಪ್ಪಗ – ಉದಿಯಪ್ಪಗ. ಹೊತ್ತು ಹೋಗುವಾಗ – ಹೊತ್ತು ಹೋಪಗ – ಹೊತ್ತೋಪ್ಪಗ. ಇದೆಲ್ಲ ಕನ್ನಡದ ಹಳೆಯ ಪ್ರಯೋಗಗಳೇ ಹವಿಕರ ನಾಲಗೆಯಲ್ಲಿ ಸ್ವಲ್ಪ ತಿರುಚಲ್ಪಟ್ಟ ರೂಪದಲ್ಲಿವೆ. ಸಂಸ್ಕೃತಿ ಮರೆಯಾಗುವುದರ ಸೂಚನೆ
ನಗರಗಳಿಗೆ ವಲಸೆ ಹೆಚ್ಚಾಗಿ ಈ ಭಾಷೆಯಲ್ಲಿಯೂ ಎಷ್ಟೋ ಪ್ರಯೋಗಗಳು ಇತ್ತೀಚೆಗೆ ಮಾಯವಾಗುತ್ತಿವೆ. ಹಳಗನ್ನಡದಲ್ಲಿ ಅಮ್ಮ = ತಂದೆ, ಅಬ್ಬೆ = ತಾಯಿ, ಹವಿಕರಲ್ಲೂ ಮೊನ್ನೆ ಮೊನ್ನೆಯವರೆಗೆ ಅಮ್ಮನನ್ನು “ಅಬ್ಬೆ’ ಅನ್ನಲಾಗುತ್ತಿತ್ತು ಅಡುಗೆ ಮನೆಯನ್ನು ಮೊನ್ನೆ ಮೊನ್ನೆಯವರೆಗೂ ಹಳ್ಳಿಗಳಲ್ಲಿ “ಅಟ್ಟುಂಬೊಳ’ ಅನ್ನಲಾಗುತ್ತಿತ್ತು (ಅಟ್ಟು ಉಂಬ ಒಳ = ಅಟ್ಟುಂಬೊಳ, ಇದು ಈಗಿನ ಅಡುಗೆ ಮನೆ + ಡೈನಿಂಗ್ ಹಾಲ…). ಹಾಗೆಯೇ ಮನೆಯಲ್ಲಿ ಕೈಸಾಲೆ, ಮುಖಮಂಟಪ, ಉಪ್ಪರಿಗೆ ಇತ್ಯಾದಿ ಭಾಗಗಳು. ಉಪಭಾಷೆ ಉಳಿಸಿಕೊಳ್ಳುವ ಕೆಲಸವಾಗಲಿ
ಮೇಲೆ ಹವಿಗನ್ನಡವನ್ನು ಇಟ್ಟುಕೊಂಡು ಹೇಳಿದ ಮಾತುಗಳನ್ನು ಧಾರವಾಡ, ಮಂಡ್ಯ, ಕುಂದಾಪುರ, ಕನ್ನಡಗಳಿಗೂ ಅನ್ವಯಿಸಿ ಅರ್ಥ ಮಾಡಿಕೊಳ್ಳಬೇಕು. ಮುದ್ದಣನ “ಓವೊ! ಕಾಲಪುರುಷಂಗೆ ಗುಣಮಣಮಿಲ್ಲಂ ಗಡ! ನಿಸ್ತೇಜಂ ಗಡ! ಜಡಂ ಗಡ! ಎಂಬ ಸಾಲನ್ನೇ ತೆಗೆದುಕೊಳ್ಳಿ. ಇಲ್ಲಿ ಗಡ = ಅಂತೆ/ಅಲ್ಲವೇ ಎಂದು ಅರ್ಥ. ಕನ್ನಡದಲ್ಲಿ ಬಿಟ್ಟುಹೋಗಿರುವ ಈ ಪ್ರಯೋಗವು ಅರೆಭಾಷೆಯಲ್ಲಿ ಈಗಲೂ ಅಂವ ಬಾತ್ ಗಡ, ಕೊಡೊಕಡ ಎಂಬ ಪ್ರಯೋಗಗಳಲ್ಲಿ ಇರುವುದನ್ನು ಪ್ರೊ| ಕುಶಾಲಪ್ಪ ಗೌಡರು ಗುರುತಿಸಿದ್ದಾರೆ. ಸಣ್ಣ ಎಂಬ ಅರ್ಥದ “ಕುಂಞಿ’ ಎಂಬ ಪದ, ಅತಿಸಾರ ಅಥವಾ ಆಮಶಂಕೆಗೆ ಇರುವ “ಹೊಟ್ಟೆಂದ ಹೋಪದು’ ಎಂಬ ಪ್ರಯೋಗ ಇವೆಲ್ಲ ಅರೆಭಾಷೆಯ ಹಳಗನ್ನಡದ ಸೊಗಡಿನ ವಿಶಿಷ್ಟ ಪ್ರಯೋಗಗಳು. ಇಲಿಗೆ ಪೂರ್ವದ ಹಳಗನ್ನಡದಲ್ಲಿ “ಎಲಿ’ ಎಂದು ಪ್ರಯೋಗ. ಅರೆಭಾಷೆಯಲ್ಲಿ ಇದು ಈಗಲೂ ಎಲಿ ಎಂದೇ ಇದೆ. ಎಲ್ಲವನ್ನೂ ಒತ್ತಿ, ಸಂಕ್ಷೇಪ ಮಾಡಿ ಹೇಳುವ ಅದ್ಭುತ ಶಕ್ತಿ ಇರುವ ಕುಂದಾಪುರ ಕನ್ನಡದಿಂದಲೂ ಇಂಥವನ್ನು ಎತ್ತಿ ತೋರಿಸಬಹುದು. ಹಳಗನ್ನಡದ ಈಗಳ್, ಆಗಳ್, ಏಗಳ್ ಇವುಗಳಂತೆ ಕುಂದಾಪುರದಲ್ಲಿ ಏಗಳಿಕೆ (ಯಾವಾಗ) ಇದೆ. ಹಳಗನ್ನಡದ ಮಿಡುಕು “ಮಿಡುಕ್ತ/ಮಿಡುಕ್ತಳ್’ ಎಂಬ ಪ್ರಯೋಗಗಳಲ್ಲಿ ಕಾಣಸಿಗುತ್ತದೆ. ಇನ್ನು ಬಪ್ಪದು, ಹೋಪದು, ದಾಂಟು ಇವೆಲ್ಲ ಹಳೆಯ ಪ್ರಯೋಗಗಳನ್ನು ಈಗಲೂ ಜತನದಿಂದ ಉಳಿಸಿಕೊಂಡಿರುವುದಕ್ಕೆ ನಿದರ್ಶನಗಳು. ಧಾರವಾಡದ ಭಾಷೆಯ ಬಗೆಗಂತೂ ಹೇಳುವುದೇ ಬೇಡ, ಅದು ವಿಶಿಷ್ಟ ಪ್ರಯೋಗಗಳ ಆಡುಂಬೊಲ. ಹಳೆಯ ದೊಡ್ಡ ಕವಿಗಳೆಷ್ಟೋ ಜನ ಆ ಪ್ರದೇಶದವರೇ ತಾನೇ. “ಕವಿರಾಜಮಾರ್ಗ’ದಲ್ಲಿ ಕಿಸುವೊಳಲು (ಪಟ್ಟದಕಲ್ಲು), ಕೊಪಣನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಂಕುಂದ (ಒಕ್ಕುಂದ) ಈ ಗ್ರಾಮಗಳ “ನಡುವಣ ನಾಡೆ ನಾಡೆ ಕನ್ನಡದ ತಿರುಳ್’ ಎಂದು ಹೇಳಿದೆ. ಪಂಪನೂ ತನ್ನ “ವಿಕ್ರಮಾರ್ಜುನವಿಜಯ’ವನ್ನು ಪುಲಿಗೆರೆಯ ತಿರುಳ ಕನ್ನಡದಲ್ಲಿ ಬರೆದಿದ್ದೇನೆಂದು ಹೇಳಿದ್ದಾನೆ. ಅಂದರೆ ಆ ಕಾಲಕ್ಕೆ ಉತ್ತರ ಕರ್ನಾಟಕದ ಭಾಷೆಯೇ ಕನ್ನಡದ ತಿರುಳು. ಬ್ಯಾನಿ (ಬೇನೆ), ಮಾರಿ (ಮೋರೆ), ಮಳ್ಳ (ಮರುಳ), ಮುತ್ಯಾ (ಅಜ್ಜ) ಇದೆಲ್ಲ ಹಳೆಯ ಕಾಲದ ಕನ್ನಡದ ಪರಿಮಳವೇ ಉಂಟು. ತುಳು, ಕೊಡವ, ಬ್ಯಾರಿ ಭಾಷೆಗಳ ಅಭಿವೃದ್ಧಿಗೆ ನಿಗಮ ಮಾಡಿರುವಂತೆ ಕನ್ನಡದ್ದೇ ಉಪಭಾಷೆಗಳಿಗೂ ಮಾಡಿದರೆ ಪ್ರಯೋಜನ ಆದೀತು. ಎಲ್ಲ ಉಪಭಾಷೆಗಳ ಗಾದೆಮಾತುಗಳ ಸಂಗ್ರಹ, ಪಡೆನುಡಿ ಕೋಶಗಳು, ನಿಘಂಟುಗಳು ಬಂದರೆ ಒಳ್ಳೆಯದು. ಉಪಭಾಷೆಗಳಲ್ಲಿ ನಾಟಕ, ಯಕ್ಷಗಾನಾದಿಗಳು, ಕೃತಿ ರಚನೆಗಳು, ಕೃತಿ ರಚನೆಗಳ ಸ್ಪರ್ಧೆಗಳು ಎಲ್ಲ ಆದರೆ, ಪ್ರಚಾರಕ್ಕೆ ಸಹಾಯವಾದೀತು. ಎಲ್ಲ ಪ್ರಾಂತಗಳ ಜನರ ಜ್ಞಾನಭಂಡಾರದ ಕೀಲಿಕೈ ಅವರವರ ಭಾಷೆ ಗಳಲ್ಲಿವೆ ಎಂಬುದನ್ನು ಮರೆಯದಿರೋಣ. ಆಗಬೇಕಾದ್ದೇನು?
1. ತುಳು, ಕೊಡವ, ಬ್ಯಾರಿ ಭಾಷೆಗಳ ಅಭಿವೃದ್ಧಿಗೆ ನಿಗಮ ಮಾಡಿರುವಂತೆ ಕನ್ನಡದ್ದೇ ಉಪ ಭಾಷೆಗಳಿಗೂ ಅಭಿವೃದ್ಧಿ ನಿಗಮಗಳಾಗಲಿ. 2. ಎಲ್ಲ ಉಪಭಾಷೆಗಳ ಗಾದೆಮಾತು ಸಂಗ್ರಹ, ಪಡೆ ನುಡಿ ಕೋಶ, ನಿಘಂಟು ಬಂದರೆ ಒಳ್ಳೆಯದು. 3. ಉಪಭಾಷೆಗಳಲ್ಲಿ ನಾಟಕ, ಯಕ್ಷಗಾನಾದಿಗಳು, ಕೃತಿ ರಚನೆಗಳು ಹೆಚ್ಚಾದರೆ ಪ್ರಚಾರಕ್ಕೆ ಸಹಾಯ 4. ಉಪಭಾಷೆಗಳ ಕಣ್ಮರೆಯಾದರೆ ಸಂಸ್ಕೃತಿ ನಾಶ ವಾದಂತೆ. ಹಾಗಾಗಿ ಅವುಗಳ ರಕ್ಷಣೆಯಾಗಬೇಕು 5. ಉಪ ಭಾಷೆಗಳ ಸಂಶೋಧನೆ ಹಾಗೂ ಮತ್ತಿತರ ಚಟುವಟಿಕೆಗಳಿಗೆ ಸರಕಾರ ನೆರವು ನೀಡಲಿ – ಶರತ್ ಭಟ್ ಸೇರಾಜೆ, ಸಾಫ್ಟ್ವೇರ್ ತಂತ್ರಜ್ಞ