ಶಿರಸಿ: ಎಲ್ಲ ಇದ್ದೂ ಸತ್ತು ಹೋದ ದೂರವಾಣಿ. ಬಿಎಸ್ಸೆನ್ನೆಲ್ ಎಲ್ಲಿದೆ ಎಂದು ಕೇಳಬೇಕಾಗಿದೆ. ತಾಲೂಕಿನ ದೂರವಾಣಿ ಅವ್ಯವಸ್ಥೆ ಕುರಿತು ತಕ್ಷಣ ಸಂಸದ ಅನಂತಕುಮಾರ ಹೆಗಡೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ದಾಖಲಿಸಬೇಕು ಎಂದು ತಾಪಂ ಠರಾವು ಕೈಗೊಳ್ಳಬೇಕು ಎಂಬ ಸದಸ್ಯ ನರಸಿಂಹ ಹೆಗಡೆ ಬಕ್ಕಳ ಅವರ ಒತ್ತಾಯಕ್ಕೆ ಇಡೀ ಸಭೆ ಒಕ್ಕೊರಲಿನ ನಿರ್ಣಯ ಅಂಗೀಕರಿಸಿತು.
ಶುಕ್ರವಾರ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಕ್ಕಳ, ದೂರವಾಣಿ ವಿನಿಮಯ ಕೇಂದ್ರಗಳಿಗೆ ಕರೆಂಟ್ ಬಂದರೆ ಮಾತ್ರ ಚಾಲೂ ಇರುತ್ತವೆ. ಜನರೇಟರ್, ಬ್ಯಾಟರಿ ಎಲ್ಲ ಇದ್ದರೂ ನಿರ್ವಹಣೆ ಇಲ್ಲ. ಕೇಬಲ್ ಕಟ್ ಆಗಿದ್ದರೆ ದುರಸ್ತಿಗೂ ತಂತಿ ಇಲ್ಲ. ನಿರ್ಲಕ್ಷಿತ ನಿಗಮ ಇದಾಗಿದೆ ಎಂದರು.
ಶಿರಸಿ ಕಚೇರಿಗೆ ಕೇಳಿದರೂ ಬೇಕಾಬಿಟ್ಟಿ ಉತ್ತರ ಕೊಡುತ್ತಾರೆ. ಗ್ರಾಹಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದೂ ಗೊತ್ತಿಲ್ಲ ಎಂದೂ ಸದಸ್ಯರು ಧ್ವನಿಗೂಡಿಸಿ, ತಕ್ಷಣ ಶಿರಸಿ ತಾಲೂಕಿನಲ್ಲಿ ಈ ಬಗ್ಗೆ ಕ್ರಮ ಆಗಬೇಕು ಎಂದಾಗ ಉಪಾಧ್ಯಕ್ಷ ಚಂದ್ರು ಎಸಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಅಧ್ಯಕ್ಷೆ ಕಾಳೇರಮನೆ ಕೂಡ ಧ್ವನಿಗೂಡಿಸಿದರು.
ಹೆಸ್ಕಾಂ ಅಧಿಕಾರಿಗಳು ಸಭೆಗೆ ವರದಿ ಕೊಟ್ಟಿಲ್ಲ ಎಂದೇ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷೆ ಕಾಮಗಾರಿ ವಿಳಂಬ, ದಾಸನಕೊಪ್ಪ ಗ್ರಿಡ್ ಸಮಸ್ಯೆಗಳ ಕುರಿತೂ ಪ್ರಶ್ನಿಸಿ ನಾವೇನು ಉತ್ತರ ಕೊಡಬೇಕು. ಯಾಕೋ ಕಳಪೆ ಕಾಮಗಾರಿ ಆದಂತಿದೆ ಎಂದೂ ಹೇಳಿದರು.
ಎಷ್ಟೋ ಕಡೆ ರಸ್ತೆ ಪಕ್ಕವೇ ಕಂಬ ನೆಟ್ಟಿದ್ದಾರೆ. ಒಂದು ಟೊಂಗೆ ಕೂಡ ಹೊಸ ಲೈನ್ ಮಾಡುವಾಗಲೂ ಕಡಿಯುವುದಿಲ್ಲ. ಮೇಲೆ ಮೇಲೆ ಕಂಬ ಹುಗೀತಾರೆ, ಇನ್ಸುಲೇಟರ್ ಕತೆ ಹೇಳುವದೂ ಬೇಡ. ಪದೇ ಪದೇ ಪಂಚರ್ ಆಗುತ್ತದೆ ಎಂದು ಉಪಾಧ್ಯಕ್ಷ ಚಂದ್ರು ಎಸಳೆ ಪ್ರಶ್ನಿಸಿದರು. ಸದಸ್ಯೆ ರತ್ನಾ ಶೆಟ್ಟಿ ಲಂಡಕನಳ್ಳಿಯಲ್ಲಿ ಟಿಸಿ ಕೂಡಿಸಿ ಆರು ತಿಂಗಳಾದರೂ ಪವರ್ ಕನೆಕ್ಷನ್ ಕೊಟ್ಟಿಲ್ಲ ಎಂದೂ ದೂರಿದಾಗ ಸ್ಥಳದಲ್ಲಿ ಸಮಸ್ಯೆ ಇರಬೇಕು ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದರು. ಸಮಸ್ಯೆ ಏನೂ ಇಲ್ಲ, ನೀವು ಸ್ಥಳಕ್ಕೆ ಬನ್ನಿ ಎಂದೂ ಶೆಟ್ಟಿ ಆಹ್ವಾನಿಸಿದರು.
ಬಿಇಒ ಸದಾನಂದ ಸ್ವಾಮಿ, ಎರಡನೇ ಸೆಮಿಸ್ಟರ್‌ನ ಎರಡೂವರೆ ಸಾವಿರ ಪುಸ್ತಕಗಳು ವಾರದೊಳಗೆ ಬರುತ್ತವೆ. ಸಮವಸ್ತ್ರ ಬಂದಿಲ್ಲ, 2450 ಬೈಸಿಕಲ್ ಬಂದಿದ್ದು, ಫಿಟಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇಒಒ ಚಿನ್ನಣ್ಣನವರ್, ಸದಸ್ಯೆ ಸರೋಜಾ ಭಟ್ಟ, ಸದಸ್ಯರಾದ ವಿನಾಯಕ ಹೆಗಡೆ, ನಾಗರಾಜ್ ಶೆಟ್ಟಿ ಇತರರು ಇದ್ದರು.