ಕೆಂಗೇರಿ: “ದೇಶದಲ್ಲಿ ಎಲ್ಲಿಯ ವರೆಗೆ ಭ್ರಷ್ಟ ವ್ಯವಸ್ಥೆಯನ್ನು, ಭ್ರಷ್ಟರನ್ನು ಬಹಿಷ್ಕರಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯ ವರೆಗೆ ಸಮಾಜದ ಪ್ರಗತಿಯೂ ಅಸಾಧ್ಯ,’ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಆರ್.ಎನ್.ಎಸ್ ಶೆಟ್ಟಿ ಟ್ರಸ್ಟ್ ವತಿಯಿಂದ ಚನ್ನಸಂದ್ರದ ಆರ್.ಎನ್.ಎಸ್ ಪಿಯು ಯೂನಿವರ್ಸಿಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರಥಮ ಪಿಯು ತರಗತಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅದರ ಮೂಲಕ ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಲು ಸಮೂಹಿಕವಾಗಿ ಪ್ರಯತ್ನಿಸಬೇಕು,’ ಎಂದು ಸಲಹೆ ನೀಡಿದರು.
“ಏನಾದರೂ ಬದಲಾವಣೆ ಆಗಬೇಕಾದರೆ ಯುವ ಸಮೂಹದಿಂದ ಮಾತ್ರ ಸಾಧ್ಯ ಎಂಬ ಅಂಶವನ್ನು ಪರಿಗಣಿಸಿ ಈ ವರೆಗೆ 900 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಂವಾದ ನಡೆಸಿದ್ದೇನೆ. ಮೌಲ್ಯಗಳ ಕುಸಿತದಿಂದಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ಹೋಗಲಾಡಿಸಲು ವಿದ್ಯಾರ್ಥಿಗಳಲ್ಲಿ, ಯುವಸಮೂಹದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ,’ ಎಂದು ಹೇಳಿದರು.
ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರಿವಿಸಲಾಯಿತು. ಕಾಲೇಜಿನ ಆಡಳಿತಾಧಿಕಾರಿ ಡಾ.ಕೆ.ಎಲ್.ಸುದೀರ್‌ಪೈ ಮಾತನಾಡಿದರು. ಆರ್.ಎನ್.ಎಸ್.ಐ.ಟಿ ಸಂಸ್ಥೆ ಮುಖ್ಯಸ್ಥ ಡಾ.ಆರ್.ಎನ್.ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಡಾ.ಹೆಚ್.ಎಂ.ಶಿವಶಂಕರ್, ಪ್ರಾಂಶುಪಾಲ ಪ್ರೊ.ರವಿಶಂಕರ್ ಬಿ.ವಿ, ಉಪಪ್ರಾಂಶುಪಾಲೆ ವಿಜೇತ.ಎಸ್ ಮತ್ತಿತರರು ಇದ್ದರು.
ಭ್ರಷ್ಟಾರದ ಬಗ್ಗೆ ಸಂತೋಷ್ ಹೆಗ್ಡೆ ಮನೆಯಲ್ಲಿ ಚರ್ಚೆ: “ಇದೇನ್ರಿ ಈ ವಯಸ್ಸಲ್ಲೂ ರಾಜ್ಯದ ತುಂಬಾ ಓಡಾಡ್ತೀರಿ. ಭಾಷಣ ಮಾಡಿ ಬರ್ತೀರಿ. ನಿಜವಾಗಿಯೂ ಈ ಭ್ರಷ್ಟ ವ್ಯವಸ್ಥೆ ಸರಿಯಾಗುತ್ತಾ,’ ಎಂದು ನನ್ನ ಪತ್ನಿ ಕೇಳ್ತಾ ಇರ್ತಾರೆ. ಅದಕ್ಕೆ ನಾನು, “ಈ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕಾದ್ರೆ ಕೆಲವರಾದರು ಹೋರಾಡಲೇಬೇಕಿದೆ. ಭ್ರಷ್ಟಾರದ ಬಗ್ಗೆ ನಮ್ಮನ್ನು ಯಾರೂ ಜಾಗೃತಗೊಳಿಸಲಿಲ್ಲ.
ಯಾರೂ ನಮಗೆ ದಾರಿ ತೋರಿಲ್ಲ ಎಂಬ ಭಾವನೆ ಯುವ ಸಮೂಹಕ್ಕೆ ಬರಬಾರದು ಎಂಬ ಒಂದೇ ಕಾರಣಕ್ಕೆ ಕರೆದಲ್ಲಿಗೆ ಹೋಗಿ, ಆಶಾಭಾವದಿಂದ ಯುವಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬರುತ್ತಿದ್ದೇನೆ ಎಂದು ನನ್ನ ಪತ್ನಿಗೆ ಹೇಳುತ್ತಿರುತ್ತೇನೆ,’ ಎಂದು ಭ್ರಷ್ಟಾಚಾರದ ಕುರಿತು ತಮ್ಮ ಮನೆಯೊಳಗಣ ಚರ್ಚೆಯನ್ನು ಸಂತೋಷ್ ಹೆಗ್ಡೆ ಅವರು ತೆರೆದಿಟ್ಟರು.