ಬೀದರ್: ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಮಧ್ಯ ದಲಿತ ಮುಖ್ಯಮಂತ್ರಿ ಚರ್ಚೆಯೂ ಪ್ರಾರಂಭವಾಗಿದೆ. ಕಾಂಗ್ರೆಸ್ ಗೆ ಶಕ್ತಿ ಇದ್ದರೆ, ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮನಸ್ಸಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಕಚೇರಿ ನೂತನ ಕಟ್ಟಡ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅವಧಿ ಎರಡು ವರ್ಷ ಇರುವಾಗಲೇ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಸಂಗೀತ ಕುರ್ಚಿ ಶುರುವಾಗಿದೆ. ಮುಂದಿನ ಸಿಎಂ ಅಭ್ಯರ್ಥಿಗಾಗಿ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಗುಂಪುಗಾರಿಕೆ ಈಗ ಬೀದಿ ಜಗಳವಾಗಿ ಮಾರ್ಪಟ್ಟಿದೆ. ಹಾಗಾಗಿ ನಾನು- ನೀನು ಎನ್ನುವುದಕ್ಕಿಂತ ಖರ್ಗೆ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಿ ಎಂದು ಸಿದ್ಧರಾಮಯ್ಯಗೆ ಸಲಹೆ ಮಾಡಿದರು.
ಇದನ್ನೂ ಓದಿ:ಜು.21ರಂದು ಕೆಲವು ಶಾಸಕರೊಂದಿಗೆ ದೆಹಲಿಗೆ ಹೋಗುತ್ತೇನೆ: ರೇಣುಕಾಚಾರ್ಯ
ತಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸಿದ್ಧರಾಮಯ್ಯ ನಾಟಕ ಮಾಡಿಕೊಂಡು ಬರುತ್ತಾರೆ. ಈ ಹಿಂದೆ ಅಹಿಂದ ಚಳುವಳಿ ನಡೆಸಿ, ಸಿಎಂ ಆದ ಬಳಿಕ ಆ ಸಮಾಜವನ್ನು ಮರೆತರು, ನಂತರ ದಲಿತ ಸಿಎಂಗೆ ತಮ್ಮ ಬೆಂಬಲವಿದೆ ಎಂದು ಹೇಳಿ ಪರಮೇಶ್ವರ್ ಅವರನ್ನು ಸೋಲಿಸುವ ಕೆಲಸ ಮಾಡಿದರು. ಹೇಳುವುದೊಂದು, ಮಾಡುವುದು ಇನ್ನೊಂದು ಅವರ ಚಾಳಿ ಆಗಿದೆ ಎಂದು ಆರೋಪಿಸಿದರು.
ಮುಂದಿನ ಸಿಎಂ ನಾನೇ ಎಂಬ ಬಸವರಾಜ ಪಾಟೀಲ ಯತ್ನಾಳ್ ಹೇಳಿಕೆಗೆ ಉತ್ತರಿಸಿದ ಕಟೀಲ್, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೇಳಲು ಅವಕಾಶವಿದೆ. ಆದರೆ, ಸಿಎಂ ಮಾಡುವುದು ರಾಷ್ಟ್ರೀಯ ನಾಯಕರು, ಶಾಸಕಾಂಗ ಪಕ್ಷ. ಇದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಪಕ್ಷದ ಸಿದ್ಧಾಂತಗಳು ಅವರಿಗೆ ಗೊತ್ತಿರಬೇಕು ಎಂದು ಹೇಳಿದ ಅವರು, ತಾವು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ನನ್ನಂಥ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷದಂಥ ಶ್ರೇಷ್ಠ ಹುದ್ದೆಯನ್ನು ನೀಡಿದೆ. ನಾನು ಅಪೇಕ್ಷೆ ಪಟ್ಟು ಬರುವವನಲ್ಲ, ಸಂಘಟನೆ ಕಾರ್ಯಕರ್ತನಾಗಿ ಇರುವುದೇ ನನಗೆ ಹೆಮ್ಮೆ ಎಂದು ತಿಳಿಸಿದರು.
ಮುಂಬರುವ ಜಿ.ಪಂ- ತಾ.ಪಂ ಜತೆಗೆ ವಿಧಾನ ಪರಿಷತ್ ಗೂ ಚುನಾವಣೆಗಳು ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ತಂತ್ರಗಾರಿಕೆ, ಸಂಘಟನಾತ್ಮಕ ಚಟುವಟಿಕೆಗಳನ್ನು ಶುರು ಮಾಡಲಾಗಿದೆ. ಅತಿ ಹೆಚ್ಚು ಜಿ.ಪಂಗಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಇನ್ನೂ ಕಾಂಗ್ರೆಸ್‌ನ ಅಸಮಾಧಾನಿಕರು ಪಕ್ಷಕ್ಕೆ ಸೇರಲು ಸಿದ್ಧರಾಗಿದ್ದು, ಅವರನ್ನು ಸ್ವಾಗತಿಸುತ್ತೇವೆ ಎಂದು ಕಟೀಲ್ ಹೇಳಿದರು.
ಎಂಎಲ್‌ಸಿ ರಘುನಾಥರಾವ್ ಮಲ್ಕಾಪುರೆ, ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಮತ್ತಿತರರು ಇದ್ದರು.