ಬೆಂಗಳೂರು: ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಇವರು ವಸೂಲಿ ಗಿರಾಕಿ, ದತ್ತ ಜಯಂತಿಯನ್ನು ವಸೂಲಿಗೆ ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಲೂ ಸಿ.ಟಿ. ರವಿ ಅಂಗಡಿಗಳಿಂದ ವಸೂಲಿ ಮಾಡುತ್ತಾರೆ. ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡುವ ಇವರಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.
ನನಗೂ ಎರಡು ಲೀಗಲ್ ನೊಟೀಸ್ ಕೊಟ್ಟಿದ್ದಾರೆ. ಮಾನ ನಷ್ಟ ಮೊಕದ್ದಮ್ಮೆ ಹಾಕುತ್ತೇನೆ ಅಂದಿದ್ದಾರೆ. ತಮ್ಮವರನ್ನು ಬಿಟ್ಟು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ನಾನು ಇವತ್ತಿಗೂ ರೈಲಿನಲ್ಲೇ ಓಡಾಡ್ತಿದ್ದೇನೆ. ನಾನು ದಾಖಲೆ ಸಮೇತ ಬರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವನಹಳ್ಳಿ ಬಳಿ ಸಿ.ಟಿ. ರವಿಯದ್ದು ಎರಡು ಅಪಾರ್ಟ್‌ಮೆಂಟ್ ಇವೆ. ಹೆಚ್.ಎ.ಎಲ್. ಬಳಿ 10 ಮನೆಗಳಿವೆ. ದುಬೈನಲ್ಲಿ ರೆಸ್ಟೋರೆಂಟ್ ಗಳಿವೆ. ಎಲ್ಲವೂ ಬೇನಾಮಿ ಹೆಸರಿನಲ್ಲೇ ಇವೆ. ನಮ್ಮ ಸರ್ಕಾರ ಬಂದರೆ ಇದೆಲ್ಲವನ್ನೂ ಹೊರಗೆ ತರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ದಿನನಿತ್ಯ ಗುಲ್ಲೆಬ್ಬಿಸುವುದರಲ್ಲಿ ಸಿ.ಟಿ.ರವಿ ಎತ್ತಿದ ಕೈ. ಇವತ್ತು ಅವರ ಮೊದಲ ಎಪಿಸೋಡ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ. 1990-96 ರವರೆಗೆ ಅವರ ಬಳಿ ಏನೂ ಇರಲಿಲ್ಲ. ಹಿ ವಾಸ್ ವನ್ ಆಫ್ ದಿ ರೌಡಿಶೀಟರ್ (ಅವರು ರೌಡಿ ಶೀಟರ್ ಆಗಿದ್ದರು). ಚಿಕ್ಕಮಗಳೂರು ಟೌನ್ ಹಾಗೂ ರೂರಲ್ ಠಾಣೆಯಲ್ಲಿ ರೌಡಿ ಶೀಟ್ ಇತ್ತು. ಇತ್ತೀಚೆಗೆ ಅದನ್ನು ತೆಗೆಸುವ ಪ್ರಯತ್ನ ಮಾಡಿದ್ದಾರೆ. ಈಗಲೂ 4 ಕ್ರಿಮಿನಲ್ ಕೇಸ್ ಗಳು ಅವರ ಮೇಲಿದೆ. ಐಪಿಸಿ 419,420,120,120(ಬಿ) ಪ್ರಕರಣ ಇವರ ಮೇಲಿವೆ. ಲೋಕಾಯುಕ್ತದಲ್ಲೂ ಇವರ ಮೇಲೆ ಕೇಸ್ ಇವೆ. ರವಿಗೆ ನಾವು ಕ್ರಿಮಿನಲ್ ಸಿಟಿ ರವಿ ಅಂತ ಕರೆಯಬೇಕು ಎಂದು ಆಗ್ರಹಿಸಿದರು.
ನಾಲ್ಕು ಭಾರಿ ಚಿಕ್ಕಮಗಳೂರನ್ನು ಪ್ರತಿನಿಧಿಸುತ್ತಿದ್ದಾರೆ. ರಿಪಬ್ಲಿಕ್ ಆಫ್ ಚಿಕ್ಕಮಗಳೂರು ಮಾಡಿದ್ದಾರೆ. ಇವರ ಭಾವ ಹೆಚ್.ಪಿ.ಸುದರ್ಶನ್ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಾರೆ. ಸುದರ್ಶನ್ ಚಿಕ್ಕಮ್ಮನ ಮಗಳನ್ನು ರವಿ ಮದುವೆಯಾಗಿದ್ದಾರೆ. ಶೇ.95ರಷ್ಟು ಕಾಮಗಾರಿ ಇವರದ್ದೇ ಇವೆ. ಚಿಕ್ಕಮಗಳೂರು ಮೆಡಿಕಲ್ ಕಾಲೇಜು ನಿರ್ಮಾಣವಾಗ್ತಿದೆ ಎಂದರು.