Advertisement

ಗೆದ್ದರೆ ಎರಡೂ ಪಕ್ಷಗಳ ಆಸ್ತಿಯಾಗುವೆ: ಪ್ರಮೋದ್‌

02:06 AM Mar 25, 2019 | Team Udayavani |

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಆಯ್ಕೆಯಾದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ಆಸ್ತಿಯಾಗಿ ಉಳಿಯುತ್ತೇನೆ. ಉಭಯ ಪಕ್ಷದವರಿಗೂ ನೋವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

Advertisement

ರವಿವಾರ ಉಡುಪಿ ಜಿಲ್ಲಾ ಜೆಡಿಎಸ್‌ ಕಚೇರಿ ಆವರಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಎರಡು ಪಕ್ಷಗಳು ಜತೆಯಾಗಿದ್ದರೆ ಮಾತ್ರ ಗೆಲುವು ಸಾಧ್ಯ. ಬಿಜೆಪಿ ವಿರೋಧಿ ಮತಗಳು ಹರಿದು ಹಂಚಿಹೋಗದಂತೆ ನೋಡಿಕೊಳ್ಳಬೇಕು. ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಔದಾರ್ಯದಿಂದಾಗಿ ಒಂದು ಪಕ್ಷದ ಚಿಹ್ನೆಯಡಿ ಇನ್ನೊಂದು ಪಕ್ಷದವರು ಸ್ಪರ್ಧಿಸುವಂತಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಜೆಡಿಎಸ್‌ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಎರಡೂ ಪಕ್ಷಗಳು ವೈಮನಸ್ಸು ಬಿಟ್ಟು ಕೆಲಸ ಮಾಡಿದರೆ ಗೆಲುವು ಖಚಿತ ಎಂದರು.

ಜೆಡಿಎಸ್‌ ಕಚೇರಿಗೆ ಭೇಟಿ
ಸಭೆಯ ಅನಂತರ ಪ್ರಮೋದ್‌ ಅವರು ಜೆಡಿಎಸ್‌ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದರು.

Advertisement

ಸಭೆಯಲ್ಲಿ ಜೆಡಿಎಸ್‌ನ ಹಿರಿಯ ಮುಖಂಡ ಅಮರನಾಥ ಶೆಟ್ಟಿ ಅವರ ಕಾಲಿಗೆ ಅಡ್ಡಬಿದ್ದು ಪ್ರಮೋದ್‌ ಆಶೀರ್ವಾದ ಪಡೆದುಕೊಂಡರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಅವರು ಪ್ರಮೋದ್‌ಗೆ ಶಾಲು ಹೊದೆಸಿ ಸಮ್ಮಾನಿಸಿದರು.

ಜೆಡಿಎಸ್‌-ಕಾಂಗ್ರೆಸ್‌ ಶಾಲು
ಪ್ರಮೋದ್‌ ಮಧ್ವರಾಜ್‌ ಅವರು ಸಭೆಗಳು, ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುವಾಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಚಿಹ್ನೆ ಇರುವ ಶಾಲನ್ನು ಹಾಕಿಕೊಂಡಿದ್ದರು.

ಸಭೆಯ ವೇದಿಕೆಯಲ್ಲಿ ಜೆಡಿಎಸ್‌ ಮುಖಂಡ ಅಮರನಾಥ ಶೆಟ್ಟಿ, ಜೆಡಿಎಸ್‌ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ದ.ಕ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ, ಪಕ್ಷದ ಮುಖಂಡರಾದ ವಾಸುದೇವ ರಾವ್‌, ಸಬ್ಲಾಡಿ ಮಂಜಯ್ಯ ಶೆಟ್ಟಿ, ಎಂ.ಬಿ. ಸದಾಶಿವ, ಧಿಲ್ಲೇಶ್‌ ಶೆಟ್ಟಿ, ದಕ್ಷತ್‌ ಶೆಟ್ಟಿ, ಜಯ ಕುಮಾರ್‌ ಪರ್ಕಳ, ಶಾಲಿನಿ ಶೆಟ್ಟಿ, ಸುಧಾಕರ ಶೆಟ್ಟಿ ಹೆಜಮಾಡಿ, ಸಂದೇಶ್‌ ಭಟ್‌, ಪ್ರಕಾಶ್‌ ಶೆಟ್ಟಿ ತೆಕ್ಕಟ್ಟೆ, ಅಬ್ದುಲ್‌ ಖಾದರ್‌, ಬಿ.ಟಿ. ಮಂಜುನಾಥ್‌, ವೇದವ್ಯಾಸ ನಾಯಕ್‌, ಕಾಂಗ್ರೆಸ್‌ ಮುಖಂಡರಾದ ಎಂ.ಎ.ಗಫ‌ೂರ್‌, ಜಿ.ಎ. ಬಾವಾ, ವಿಶ್ವಾಸ್‌ ಅಮೀನ್‌, ಭರತ್‌ ಮುಂಡೋಡಿ ಮೊದ ಲಾದವರು ಪಾಲ್ಗೊಂಡಿದ್ದರು. ಜಯರಾಮ ಆಚಾರ್ಯ ವಂದಿಸಿದರು.

ಕಾಂಗ್ರೆಸ್‌-ಜೆಡಿಎಸ್‌ ಹಾಲು-ಜೇನಿನ ಮಿಶ್ರಣ
ಉಡುಪಿ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದಾಗಿ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿವೆ. ಇದು ಹಾಲು – ಜೇನಿನಂಥ ಮಿಶ್ರಣ. ಚಿಕ್ಕಮಗಳೂರು ಭಾಗದಲ್ಲಿಯೂ ಮೈತ್ರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಗೆಲ್ಲುವ ಸಂಕಲ್ಪ ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶಾಸಕನಾಗಿ, ಸಂಸದೀಯ ಕಾರ್ಯದರ್ಶಿಯಾಗಿ, ಸಚಿವನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೂ ಅಪಪ್ರಚಾರದಿಂದಾಗಿ ವಿಧಾನ ಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು. ನಾನು ಸಂಸತ್ತಿಗೆ ಆಯ್ಕೆಯಾದರೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ತಂದು ಈ ಭಾಗದ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.

ಮೀನುಗಾರರಿಗೆ ಕೇಂದ್ರ ದ್ರೋಹ
ಮೀನುಗಾರರ ಸಹಿತ ನಾಪತ್ತೆಯಾಗಿರುವ ಮಲ್ಪೆಯ ಬೋಟ್‌ಗೆ
ನೌಕಾದಳದ ಹಡಗು ಢಿಕ್ಕಿ ಹೊಡೆದಿರುವ ಶಂಕೆ ಇದೆ. ಅದನ್ನು ಮುಚ್ಚಿಟ್ಟು ನೌಕಾದಳದವರು ಹುಡುಕುವ ನಾಟಕ ಮಾಡಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರಕಾರ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಶೋಭಾ ಕರಂದ್ಲಾಜೆ ಮೀನುಗಾರರಿಗೆ ದ್ರೋಹ ಮಾಡಿದ್ದಾರೆ ಎಂದರು.

ಅತೃಪ್ತರ ಜತೆ ಮಾತುಕತೆ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಮೋದ್‌, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಾನು ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ನನ್ನಂತೆ ಹಲವರು ಟಿಕೆಟ್‌ ಆಕಾಂಕ್ಷಿಗಳಿದ್ದರು. ಅವರಿಗೆ ಪಕ್ಷದ ನಿರ್ಧಾರದಿಂದ ನೋವಾಗಿದ್ದರೆ ಅವರ ಜತೆಗೆ ಮಾತುಕತೆ ನಡೆಸಿ ಸರಿಪಡಿಸುತ್ತೇನೆ ಎಂದರು.

ಯು.ಆರ್‌. ಸಭಾಪತಿ, ಅಶೋಕ್‌ ಕುಮಾರ್‌ ಕೊಡವೂರು, ಎಂ.ಎ.
ಗಫ‌ೂರ್‌, ಜಿ.ಎ ಬಾವಾ, ಪ್ರಖ್ಯಾತ್‌ ಶೆಟ್ಟಿ, ಭರತ್‌ ಮುಂಡೋಡಿ, ಸತೀಶ್‌ ಅಮೀನ್‌ ಪಡುಕೆರೆ, ನರಸಿಂಹ ಮೂರ್ತಿ,ಯತೀಶ್‌ ಕರ್ಕೇರ, ಸಪ್ನಾ ಹರೀಶ್‌, ರೇಖಾ ಶ್ರೀನಿವಾಸ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next