ಚಿತ್ರದುರ್ಗ: ಬಿಜೆಪಿ – ಜೆಡಿಎಸ್ ನಾಯಕರಿಗೆ ರಾಜ್ಯದ ರೈತರ ಪರ ನಿಜವಾದ ಕಾಳಜಿ ಇದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಳ ಮಾಡಿಸಲಿ. ಓಬಿರಾಯನ ಮಾನದಂಡ ಇಟ್ಟುಕೊಂಡು ಬಿಡಿಗಾಸು ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅಸಮಧಾನ ವ್ಯಕ್ತಪಡಿಸಿದರು.
ಶುಕ್ರವಾರ (ಅ.25) ಚಿತ್ರದುರ್ಗ ಜಿಲ್ಲೆಗೆ ಮಳೆಯಿಂದ ಹಾನಿಗೊಳಗಾದ ಬೆಳೆ ಸಮೀಕ್ಷೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಪರವಾಗಿಲ್ಲ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂತಹ ಉಡಾಫೆ ಮಾತುಗಳನ್ನು ಬಿಟ್ಟು, ಮಧ್ಯ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 5300 ಕೋಟಿ ರೂ.ಗಳಲ್ಲಿ ಈವರೆಗೆ 53 ಪೈಸೆಯನ್ನೂ ಕೊಟ್ಟಿಲ್ಲ. ಇವರೆಲ್ಲಾ ಹೋಗಿ ಮೊದಲು ಅನುದಾನ ತರಲಿ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂ ಛಲವಾದ ನಾರಾಯಣ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯ ಎಂಟು ಜನ ಶಾಸಕರು ಕಾಂಗ್ರೆಸ್ಸಿಗೆ ಬರಲು ತಯಾರಿದ್ದಾರೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಮೊದಲು ಇದಕ್ಕೆ ಪ್ರತಿಕ್ರಿಯೆ ಕೊಡಲಿ ಎಂದರು.
ಬಿಜೆಪಿ ನಾಯಕರಿಗೆ ಗ್ಯಾರೆಂಟಿ ಯೋಜನೆಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಜನ ಸಾಮಾನ್ಯರಿಗೆ ದುಡ್ಡು ಕೊಡುವುದನ್ನು ಅವರಿಂದ ಸಹಿಸಲು ಆಗುತ್ತಿಲ್ಲ. ಅಂಬಾನಿ, ಅದಾನಿಗೆ ಕೊಟ್ಟಿದ್ದರೆ ಸುಮ್ಮನಿರುತ್ತಿದ್ದರು ಎಂದು ಹೇಳಿದರು.
ಗ್ಯಾರೆಂಟಿ ಬಂದ್ ಮಾಡಿಸಬೇಕು, ಸರ್ಕಾರ ಉರುಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗುವ ಬಯಕೆಯಲ್ಲಿದ್ದಾರೆ. ಇತ್ತ ಕಡೆಯಿಂದ ವಿಜಯೇಂದ್ರಣ್ಣ ಕೂಡಾ ಮುಖ್ಯಮಂತ್ರಿ ಆಗಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಷಿ ಕೂಡಾ ಇದ್ದಾರೆ. ಕುಮಾರಸ್ವಾಮಿ ಸಿಎಂ ಆದರೆ ಬಿಜೆಪಿಯಲ್ಲಿರುವ ಒಕ್ಕಲಿಗರು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ ಎಂದರು.