Advertisement

ಬಿಜೆಪಿ ಬಂದ್ರೆ ನೀರಾವರಿಗೆ ಲಕ್ಷ ಕೋಟಿ ಮೀಸಲು

03:21 PM Apr 30, 2018 | |

ಚಿಂಚೋಳಿ: ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿ ಕ್ಷೇತ್ರಕ್ಕೆ ಒಂದು ಲಕ್ಷ ಕೋಟಿ ರೂ. ಮೀಸಲಾಗಿಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು. ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರವಿವಾರ ನಡೆದ ಚಿಂಚೋಳಿ ಮೀಸಲು ವಿಧಾನಸಭೆ ಬಿಜೆಪಿ ಅಭ್ಯರ್ಥಿ ಸುನೀಲ ವಲ್ಯಾಪುರೆ ಪರವಾಗಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರೈತರು ಬೆಳೆದ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು 5 ಸಾವಿರ ಕೋಟಿ ರೂ. ಆವರ್ತ ನಿಧಿ ಮೀಸಲಿಡುತ್ತೇನೆ. ಇನ್ನು ಮುಂದೆ ರೈತರು ಸಾಲಗಾರರು ಆಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಗರೀಬಿ ಹಟಾವೂ ಘೋಷಣೆ ಮಾಡಿರುವುದು ಕೇವಲ ತನ್ನ ಪಕ್ಷದ ಮುಖಂಡರ ಬಡತನ ಹಟಾವೋ ಆಗಿದೆಯೇ ಹೊರತು ಜನಸಾಮಾನ್ಯರ, ಬಡವರ ಕಣ್ಣೀರು ಒರೆಸಿಲ್ಲ ಎಂದು ವ್ಯಂಗ್ಯವಾಡಿದರು.

ವೀರಶೈವ ಮತ್ತು ಲಿಂಗಾಯತ ಎಂಬ ಪ್ರತ್ಯೇಕ ಧರ್ಮ ಮಾಡಲು ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಈಗ ಅದೇ ತಿರುಗುಬಾಣ ಆಗಿದೆ ಎಂದು ಲೇವಡಿ ಮಾಡಿದರು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಗೋಸ್ಕರವಾಗಿ ಪ್ರತಿವರ್ಷ 4500 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಅದರಲ್ಲಿ ಕೇವಲ 1702 ಕೋಟಿ ರೂ. ನೀಡಲಾಗಿದೆ. ಆದರೂ ಹೈಕ ಪ್ರದೇಶ ಇನ್ನು ಅಭಿವೃದ್ಧಿಯಾಗಿಲ್ಲ ಎಂದು ಆಪಾದಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಭಾಗ್ಯಲಕ್ಷ್ಮೀ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತೇನೆ. ವಿಧವೆಯರು, ಅಂಗವಿಕಲರು, ವೃದ್ಧಾಪ್ಯರ ವೇತನ ಹೆಚ್ಚಳ ಮಾಡುತ್ತೇನೆ. ಅಲ್ಲದೇ ಸ್ತ್ರೀಶಕ್ತಿ ಸ್ವ ಸಹಾಯ ಮಹಿಳೆ ಸಂಘಕ್ಕಾಗಿ ಪ್ರತ್ಯೇಕವಾಗಿ ಬ್ಯಾಂಕ್‌ ಪ್ರಾರಂಭಿಸುತ್ತೇನೆ. ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಕಾರಣಾಂತರದಿಂದ ಆಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸುನೀಲ ವಲ್ಯಾಪುರೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಮತ್ತೇ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುತ್ತೇನೆ ಎಂದರು.

Advertisement

ಬಿಜೆಪಿ ಅಭ್ಯರ್ಥಿ ಸುನೀಲ ವಲ್ಯಾಪುರೆ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಚಿಂಚೋಳಿ ಕ್ಷೇತ್ರದಲ್ಲೇ ಅತಿ ಭ್ರಷ್ಟಾಚಾರವಾಗಿದೆ. ಚಿಂಚೋಳಿ-ಐನೋಳಿ ರಾಜ್ಯ ಹೆದ್ದಾರಿ ಇನ್ನು ಅಭಿವೃದ್ಧಿಗೊಂಡಿಲ್ಲ. ಹಿಂದುಳಿದ ಪ್ರದೇಶ ಅಭಿವೃದ್ಧಿಗೋಸ್ಕರ ಶಾಸಕ ಡಾ| ಉಮೇಶ ಜಾಧವ್‌ ಯಾವುದೇ ವಿಶೇಷ ಪ್ಯಾಕೇಜ್‌ ತರಲಿಲ್ಲ ಎಂದು ಹೇಳಿದರು. 

ಬೀದರ ಸಂಸದ ಭಗವಂತ ಖೂಬಾ, ಬಾಬುರಾವ್‌ ಪಾಟೀಲ, ಸುಭಾಷ ರಾಠೊಡ, ಲಕ್ಷ್ಮಣ ಆವಂಟಿ, ಬಾಬು ಪವಾರ ಚೆಂಗಟಾ ಮಾತನಾಡಿದರು. ಅಜೀತ ಪಾಟೀಲ, ಶ್ರೀಹರಿ ಕಾಟಾಪುರ, ನಾಗಯ್ಯ ಕೊಟ್ರಕಿ, ಚಂದ್ರಶೇಖರ ಹರಸೂರ, ಜಗನ್ನಾಥ ರಾಠೊಡ, ಕಿರಣರೆಡ್ಡಿ, ಆಕಾಶ ಕೊಳ್ಳುರ, ಸಂತೋಷ ಗಡಂತಿ, ಡಾ| ತುಕಾರಾಮ ಪವಾರ, ಶ್ರೀಮಂತ ಕಟ್ಟಿಮನಿ ಇನ್ನಿತರರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ ಸ್ವಾಗತಿಸಿದರು, ಶೇಖ ಭಕ್ತಿಯಾರ ಜಹಗೀರದಾರ ನಿರೂಪಿಸಿದರು, ಶಶಿಧರ ಸೂಗೂರ ವಂದಿಸಿದರು.

ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಖಚಿತ. ಜನರು ಅವರ ವಿರುದ್ಧ ಮತ
ಚಲಾಯಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಅವರು ಎರಡೂ ಕ್ಷೇತ್ರದಲ್ಲಿ ಸೋಲು ಅನುಭವಿಸಲಿದ್ದಾರೆ. ಅವರು ಕಾಂಗ್ರೆಸ್‌ ಪಕ್ಷದ ಕೊನೆಯ ಮುಖ್ಯಮಂತ್ರಿಗಳಾಗಲಿದ್ದಾರೆ. ಅಲ್ಲದೇ ಬಿಜೆಪಿ ಜೆಡಿಎಸ್‌ ಒಳ ಒಪ್ಪಂದ ಹಾಗೂ ಹೊಂದಾಣಿಕೆ ಆಗಿಲ್ಲ.
 ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next