Advertisement

ವಿಧಾನ ಕದನ-2023: ಬಿಜೆಪಿಯಲ್ಲಿ ಭರತರಾದರೆ ಕಾಂಗ್ರೆಸ್‌ನಲ್ಲಿ ಹಳಬರೋ? ಹೊಸಬರೋ?

08:57 PM Mar 17, 2023 | Team Udayavani |

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ಇರುವ ಕ್ಷೇತ್ರವೆಂದರೆ ಮಂಗಳೂರು ನಗರ ಉತ್ತರ.

Advertisement

ಪ್ರಸ್ತುತ ಬಿಜೆಪಿಯಿಂದ ಹಾಲಿ ಶಾಸಕ ಡಾ| ವೈ.ಭರತ್‌ ಶೆಟ್ಟಿ ಅವರಿಗೆ ಎರಡನೇ ಬಾರಿಗೆ ಸ್ಪರ್ಧಿಸುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಟಿಕೆಟ್‌ ಕುತೂಹಲವೆಲ್ಲವೂ ಕಾಂಗ್ರೆಸ್‌ ಸುತ್ತವೇ ಸುತ್ತತೊಡಗಿದೆ.

ಎರಡು ತಿಂಗಳ ಹಿಂದೆ ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಒಟ್ಟು 9 ಮಂದಿ ಅರ್ಜಿ ಹಾಕಿದ್ದರು. ಮಾಜಿ ಶಾಸಕ ಬಿ. ಎ. ಮೊದಿನ್‌ ಬಾವಾ ಟಿಕೆಟ್‌ ಪಡೆಯಲು ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಕಳೆದ ಬಾರಿ ಸೋತರೂ ಕ್ಷೇತ್ರದ ಜನತೆ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಾಗಾಗಿ ನನಗೇ ಟಿಕೆಟ್‌ ಎನ್ನುತ್ತಿದ್ದಾರೆ.

ಆದರೆ ಮೊದಿನ್‌ ಬಾವಾ ಅವರಿಗೆ ಒತ್ತಡ ಹೆಚ್ಚಾಗಿರುವುದು ಅವರಿಗೂ ಮೊದಲೇ ಇನಾಯತ್‌ ಅಲಿ ಕ್ಷೇತ್ರದಲ್ಲಿ ಸುತ್ತಾಡಿ, ಸಕ್ರಿಯರಾಗಿ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವುದರಿಂದ.

ಬಾವಾ ಅವರಿಗೆ ಸಿದ್ದರಾಮಯ್ಯ ಅವರ ಆಶೀರ್ವಾದವಿದ್ದರೆ ಇನಾ ಯತ್‌ ಅಲಿ ಅವರಿಗೆ ಡಿ.ಕೆ. ಶಿವಕುಮಾರ್‌ ಅವರ ಬೆಂಬಲ ವಿದೆ. ಇನ್ನೂ ಅಧಿಕೃತವಾಗಿ ಯಾವುದೇ ಹಿರಿಯ ನಾಯಕರು ಇಬ್ಬರಿಗೂ ಟಿಕೆಟ್‌ ಖಚಿತ ಪಡಿಸಿಲ್ಲ. ಒಬ್ಬರು ಇನ್ನೊಬ್ಬರ ಕಾಲೆಳೆಯದೆ ಕ್ಷೇತ್ರ ಕಾರ್ಯ ಮಾಡಿ ಎಂಬ ಕಿವಿಮಾತು ಹೇಳಿ ತೆರಳಿದ್ದಾರೆ.

Advertisement

ಇಬ್ಬರೂ ತಾವೇ ಅಭ್ಯರ್ಥಿಗಳು ಎಂಬ ರೀತಿಯಲ್ಲಿ ತಿರುಗಾಟ ದಲ್ಲಿದ್ದಾರೆ. ತಿಂಗಳ ಹಿಂದೆಯಷ್ಟೇ ಬಾವಾ ನೇತೃತ್ವದಲ್ಲಿ ಸುರತ್ಕಲ್‌ನಲ್ಲಿ ಬಿಜೆಪಿ ಸುಳ್ಳುಗಳ ವಿರುದ್ಧ ಸಮಾವೇಶ ಏರ್ಪಡಿಸಲಾಗಿತ್ತು. ಇನಾಯತ್‌ ಅಲಿ ಕೂಡ ಹಿಂದೆ ಬೀಳದೆ ವಿವಿಧೆಡೆ ನಡೆಯುವ ಸಣ್ಣ ಪುಟ್ಟ ಕಾರ್ಯ ಕ್ರಮಗಳಲ್ಲೂ ಭಾಗವಹಿಸುತ್ತಾ ಕ್ಷೇತ್ರ ಪರಿಚಯ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಕೊನೇ ಕ್ಷಣದ ವರೆಗೂ ಏನೂ ಹೇಳಲಾಗದು. ಇವರೊಂದಿಗೆ ಪ್ರತಿಭಾ ಕುಳಾಯಿ, ಶಶಿಧರ ಹೆಗ್ಡೆ, ಪುರುಷೋತ್ತಮ ಚಿತ್ರಾಪುರ ಅವರ ಹೆಸರೂ ಚಾಲ್ತಿಯಲ್ಲಿದೆ.

2018ರಲ್ಲಿ ದಿಢೀರನೆ ಹೊಸ ಮುಖವಾಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಗಿಟ್ಟಿಸಿ ಕೊಂಡಿದ್ದ ಡಾ| ಭರತ್‌ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ಗೆಲುವು ಸಾಧಿಸಿದ್ದರು. ಇವರು ಮೂಲತಃ ದಂತ ವೈದ್ಯಕೀಯ ಕ್ಷೇತ್ರದಲ್ಲಿದ್ದವರು. ತಮ್ಮ ಅವಧಿಯಲ್ಲಿ  ಕೆಲಸ ಮಾಡಿದ್ದೇನೆ. ಇದನ್ನು ಪರಿಗಣಿಸಿ ಈ ಬಾರಿಯೂ ಪಕ್ಷ ತನಗೆ ಟಿಕೆಟ್‌ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಅದಕ್ಕೆ ಪೂರಕವಾಗಿ ಕ್ಷೇತ್ರಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದರ ನಡುವೆ ಇನ್ನೊಂದು ಲೆಕ್ಕಾಚಾರವೂ ಚಾಲ್ತಿಯಲ್ಲಿದೆ. ಮೂಡುಬಿದಿರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಅವರಿಗೆ ಟಿಕೆಟ್‌ ಕೊಟ್ಟು ಉಮಾನಾಥ ಕೋಟ್ಯಾನ್‌ ಅವರನ್ನು ಇಲ್ಲಿಗೆ ಕರೆತರುವ ಸಾಧ್ಯತೆ ಇದೆ. ಆಗ ಭರತ್‌ ಶೆಟ್ಟಿ ಅವರಿಗೆ ಮುಂಬರುವ ಲೋಕಸಭೆಗೆ ಅವಕಾಶ ಕಲ್ಪಿಸುವ ಆಲೋಚನೆಯೂ ನಡೆದಿದೆ. ಮಂಗಳೂರು ಉತ್ತರ ಕ್ಷೇತ್ರ ಎರಡೂ ಪಕ್ಷಗಳಿಗೆ ಬಹಳ ಪ್ರಮುಖವಾದ ಕ್ಷೇತ್ರ. ಆದ ಕಾರಣ ಯಾರೇ ಅಭ್ಯರ್ಥಿಗಳು ಕಣಕ್ಕಿಳಿದರೂ ಪ್ರಬಲ ಪೈಪೋಟಿ ಏರ್ಪಡುವುದು ಖಚಿತ. ಜೆಡಿಎಸ್‌ ಮತ್ತಿತರ ಪಕ್ಷಗಳ ಉಮೇದುವಾರಿಕೆ ಬಗ್ಗೆ ಬಹಳ ಬೆಳವಣಿಗೆ ನಡೆದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿ
ಗಳನ್ನು ಆಧರಿಸಿ ಕ್ಷೇತ್ರದ ರಂಗು ಬದಲಾಗಲಿದೆ.

~  ವೇಣು ವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next