Advertisement

ತಾಕತ್ತಿದ್ದರೆ ನನ್ನ ಮೇಲೆ ಐಟಿ ದಾಳಿ ಮಾಡಲಿ: ಪಾಟೀಲ

10:58 PM Oct 13, 2019 | Team Udayavani |

ಬಾಗಲಕೋಟೆ: “ಕಾಂಗ್ರೆಸ್‌ ನಾಯಕರು ರಾಜಕೀಯದಿಂದ ಹೊರಗುಳಿಯಬೇಕು. ಇಲ್ಲವೇ ಬಿಜೆಪಿಗೆ ಬರಬೇಕೆಂಬ ಕಾರಣದಿಂದಲೇ ಕಾಂಗ್ರೆಸ್‌ ನಾಯಕರನ್ನು ಗುರಿ ಮಾಡಿಕೊಂಡು ಐಟಿ ದಾಳಿ ನಡೆಸ ಲಾಗುತ್ತಿದೆ. ತಾಕತ್ತಿದ್ದರೆ ನನ್ನ ಮೇಲೆ ತಕ್ಷಣವೇ ಐಟಿ ದಾಳಿ ಮಾಡಲಿ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಸವಾಲು ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, “ನನ್ನ ಬಳಿ ಏನೂ ಇಲ್ಲ. ಒಂದು ವೇಳೆ ದಾಳಿ ನಡೆಸಿದರೆ ಅವರೇ ದುಡ್ಡು ಕೊಟ್ಟು ಹೋಗಬೇಕಾಗುತ್ತದೆ. ಪ್ರಧಾನಿ ಮೋದಿ ಪ್ರಜಾ ಪ್ರಭುತ್ವಕ್ಕೆ ಮಾರಕವಾಗುವ ಕೆಲಸ ಮಾಡುತ್ತಿದ್ದಾರೆ. ದೇಶದ ಸಮರ್ಥ ಮುಖಂಡರ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್‌ ಮುಖಂಡರ ಮನೆಗಳನ್ನೇ ಗುರಿ ಮಾಡಲಾಗುತ್ತಿದೆ. ಇದಕ್ಕೆ ಜಗ್ಗುವುದಿಲ್ಲ’ ಎಂದರು.

“ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ರೀತಿ ಐಟಿ-ಇ.ಡಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡಿರಲಿಲ್ಲ. ಬಿಜೆಪಿ ನಾಯಕರು ಏನೆಂಬುದು ದೇಶದ 130 ಕೋಟಿ ಜನರಿಗೆ ಗೊತ್ತಿದೆ. ಬಿಜೆಪಿಯವರಲ್ಲಿ ಕಾನೂನು ಬಾಹಿರ ಹಣ ಇದ್ದರೂ ಐಟಿ ದಾಳಿ ನಡೆಯಲ್ಲ. ಕೇವಲ ಕಾಂಗ್ರೆಸ್‌ ನಾಯಕರನ್ನು ಗುರಿ ಮಾಡಿ, ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಹುನ್ನಾರ ಇದಾಗಿದೆ. ಇದು ತಿರುಕನ ಕನಸು’ ಎಂದರು.

ರಮೇಶ ಆತ್ಮಹತ್ಯೆ ತನಿಖೆಯಾಗಲಿ: ಮಾಜಿ ಡಿಸಿಎಂ ಡಾ| ಜಿ.ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ ಆತ್ಮಹತ್ಯೆ ಪ್ರಕರಣ ಯಾವ ಕಾರಣಕ್ಕಾಗಿ ಆಗಿದೆ ಎಂಬುದು ಗೊತ್ತಿಲ್ಲ. ಆದರೆ, ಈ ಕುರಿತು ತನಿಖೆ ಯಾಗಬೇಕು. ಆತ್ಮಹತ್ಯೆ ಮಾಡಿ ಕೊಳ್ಳಲು ಪ್ರೇರಣೆ ನೀಡಿದ್ದರೂ ತಪ್ಪು. ಐಟಿ ಅಧಿಕಾರಿಗಳ ಕಿರುಕುಳ, ಕಾನೂನು ಬಾಹಿರವಾಗಿ ಬೆದರಿಕೆ ಹಾಕುವುದು ಅಪರಾಧವಾಗುತ್ತದೆ. ಇದಕ್ಕೆ ಐಟಿ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next