Advertisement

ನಾಲ್ಕು ಗುಣಗಳ ಆರೋಗ್ಯಾಭಿವೃದ್ಧಿ ಇದ್ದರೆ ಮುಟ್ಟಿದ್ದೆಲ್ಲ ಚಿನ್ನ

09:54 AM Jan 02, 2018 | Team Udayavani |

ಕಲಬುರಗಿ: ಮನುಷ್ಯ ಈಗ ಏನೆಲ್ಲ ಸಾಧನೆ ಮಾಡುತ್ತಿದ್ದರೂ ಪ್ರಮುಖವಾದ ನಾಲ್ಕು ಗುಣಗಳ ಆರೋಗ್ಯ ಹೊಂದದೇ ಇರುವುದರಿಂದ ಸಂಪೂರ್ಣ ತೃಪ್ತಿ ಹೊಂದುತ್ತಿಲ್ಲ ಎಂದು ವೃದ್ಧಾಪ್ಯ ಕಾಯಿಲೆಗಳ ಪರಿಣಿತ ಹಿರಿಯ ತಜ್ಞ, ನವದೆಹಲಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ವೈದ್ಯ ಓಂಪ್ರಕಾಶ ಶರ್ಮಾ ಹೇಳಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಡಾ| ಪಿ.ಎಸ್‌. ಶಂಕರ ಪ್ರತಿಷ್ಠಾನದ 18ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಮನುಷ್ಯ ಪರಿಪೂರ್ಣತೆ ಹೊಂದಬೇಕಾದರೆ ದೈಹಿಕ ಆರೋಗ್ಯ, ಸಮರ್ಪಕ ಆರ್ಥಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಆರೋಗ್ಯ ಹೊಂದಿದ್ದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಮಾಡಬಹುದು ಎಂದು ಹೇಳಿದರು.

ದೈಹಿಕ ಆರೋಗ್ಯ ಹೊಂದಿದ್ದರೆ ಆರ್ಥಿಕ ಸಬಲತೆ ಇರುವುದಿಲ್ಲ. ಇವೆರಡು ಇದ್ದರೆ ಮಾನಸಿಕವಾಗಿ ಬಲಿಷ್ಠವಾಗಿರುವುದಿಲ್ಲ. ಈ ಮೂರು ಇದ್ದರೂ ಕೆಲವೊಮ್ಮೆ ಸಾಮಾಜಿಕವಾಗಿ ಬಲ ಸಿಗದೇ ಇರುವ  ಸಾಧ್ಯತೆಗಳಿರುತ್ತವೆ. ಈ ನಾಲ್ಕು ಗುಣಗಳು ಇದ್ದರೆ ವ್ಯಕ್ತಿ ಪರಿಪೂರ್ಣ ಎಂದು ಹೇಳಿದರು. 

ಡಾ| ಪಿ.ಎಸ್‌. ಶಂಕರ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈದ್ಯ ಸಾಹಿತಿ ಉಡುಪಿ ಜಿಲ್ಲೆ ಕೊಟೇಶ್ವರದ ಡಾ| ಎನ್‌.ಆರ್‌. ಆಚಾರ್ಯ ಸ್ಮಾರಕ ಆಸ್ಪತ್ರೆ ವೈದ್ಯ ಎನ್‌. ಭಾಸ್ಕರ ಆಚಾರ್ಯ ಅವರು, ವೈದ್ಯರ ಸೇವೆ ಈಗ ಸಾಮಾಜಿಕವಾಗಿ ಒಂದು ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಮಾಧ್ಯಮ ಹಾಗೂ ಸರ್ಕಾರಗಳ ಧೋರಣೆ ಕಾರಣ ಎಂದು ಟೀಕಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಕುಲಪತಿ ಡಾ| ಎ.ಎಚ್‌. ರಾಜಾಸಾಬ್‌ ಮಾತನಾಡಿ, ಶಿಕ್ಷಣವೇ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಡಾ| ಪಿ.ಎಸ್‌. ಶಂಕರ ಪ್ರತಿಷ್ಠಾನ ವೈದ್ಯಕೀಯ ಕೋರ್ಸ್‌ಗೆ ಹಾಗೂ ವೈದ್ಯ ಸಾಹಿತ್ಯ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಸಾಗರ ಭೈರಪ್ಪ ಮಾಳಿ, ಸೌಂದರ್ಯ, ಪೊನ್‌ಮೊಳಿಯನ್‌, ನಾಗವೇಣಿ ವಿಷ್ಣುಕುಮಾರ ಜಿಂದೆ, ಶರಣಬಸವಪ್ಪ ನೀಲಕಂಠ ಬೀಡಾ ಹಾಗೂ ಶಿವಶಂಕರ ದೊಡ್ಡಕಾಮಣ್ಣ ಎಂಬ ಬಡ ಪ್ರತಿಭಾನ್ವಿತ ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರದಾನ ಮಾಡಲಾಯಿತು.

Advertisement

ಡಾ| ಪಿ.ಎಸ್‌. ಶಂಕರ ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಸಾಹಿತಿ ಡಾ| ಪಿ.ಎಸ್‌. ಶಂಕರ, ಪ್ರತಿಷ್ಠಾನದ ಉಪಾಧ್ಯಕ್ಷ ಡಾ| ಎಚ್‌. ವೀರಭದ್ರಪ್ಪ ಇದ್ದರು.

ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ| ನರೇಂದ್ರ ಬಡಶೇಷಿ, ಖಜಾಂಚಿ ಪಿ.ಎಂ. ಬಿರಾದಾರ, ಸಹ ಕಾರ್ಯದರ್ಶಿ ಎಂ. ಸದಾನಂದ, ಡಾ| ರಾಜಶ್ರೀರೆಡ್ಡಿ ಸೇರಿದಂತೆ ಹಿರಿಯ ವೈದ್ಯರು, ಸಾಹಿತಿಗಳು ಹಾಜರಿದ್ದರು. ಪ್ರತಿಷ್ಠಾನದ ಧರ್ಮದರ್ಶಿ ಡಾ| ಈಶ್ವರಯ್ಯ ಮಠ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next