ನವದೆಹಲಿ: ಜಮ್ಮು ಕಾಶ್ಮೀರದ ಬಂಧಿತ ಡಿಎಸ್ಪಿ ದೇವೀಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಮುಖಂಡರ ವಾಕ್ಸಮರ ಮುಂದುವರಿದಿದ್ದು, ಸಿಂಗ್ ಮುಸ್ಲಿಮ್ ಅಲ್ಲದ ಕಾರಣ ಬಲಪಂಥೀಯ ಸಂಘಟನೆಗಳು ಮೌನಕ್ಕೆ ಶರಣಾಗಿರುವುದಾಗಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿಗೆ ಬಿಜೆಪಿ ತಿರುಗೇಟು ನೀಡಿದೆ.
ಒಂದು ವೇಳೆ ಜಮ್ಮು ಕಾಶ್ಮೀರ ಡಿಎಸ್ಪಿ ದೇವೀಂದರ್ ಸಿಂಗ್ ಮುಸ್ಲಿಂ ಆಗಿದ್ದರೆ ಏನಾಗುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಪ್ರಶ್ನಿಸಿದ್ದಾರೆ ಎಂದಿರುವ ಆರ್ಮಿ ನಿವೃತ್ತ ಮುಖ್ಯಸ್ಥ, ಬಿಜೆಪಿ ಸಚಿವ ವಿಕೆ ಸಿಂಗ್, ಒಂದು ವೇಳೆ ಅಧೀರ್ ರಂಜನ್ ಅಧೀರ್ ಖಾನ್ ಆಗಿದ್ದರೆ? ಈ ಹೇಳಿಕೆಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತೇ? ನಾವು ಹೇಗೆ ಇಷ್ಟು ಕೆಳಮಟ್ಟಕ್ಕೆ ಇಳಿಯಲಿ? ಇದಕ್ಕೆ ಹೇಗೆ ಕೋಮು ಬಣ್ಣ ಕೊಡುವುದು ಎಂದು ಪ್ರಶ್ನಿಸಿದ್ದಾರೆ.
2019ರ ಫೆಬ್ರುವರಿಯಲ್ಲಿ ನಡೆದ ಫುಲ್ವಾಮಾ ದಾಳಿ ಬಗ್ಗೆ ಮತ್ತೆ ಹೊಸ ತನಿಖೆ ನಡೆಸಬೇಕೆಂಬ ಅಧೀರ್ ರಂಜನ್ ಬೇಡಿಕೆಗೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಗ್, ಪುಲ್ವಾಮಾದ ನಿಜವಾದ ಆರೋಪಿ ಯಾರು? ಅಧೀರ್ ಸಂಶಯ ಏನು? ಅಪರಾಧಿ ಯಾರು? ನೀವು ಭಾರತೀಯರೇ ಅಥವಾ ಬೇರೆ ಯಾವುದಾದರೂ ಸಮುದಾಯದವರೇ? ನೀವು ಕೆಲ ಕಾಲ ವಿಶ್ರಾಂತಿ ಪಡೆಯುವುದು ಒಳ್ಳೆಯದು ಎಂದು ಚಾಟಿ ಬೀಸಿದ್ದಾರೆ.
ಅಧೀರ್ ಯೂನಿಫಾರಂ ಧರಿಸಿ ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಲಿ. ಆಗ ಕೆಲವು ಕೆಲವು ವಿಷಯ ಕಲಿಯಲಿದ್ದಾರೆ ಎಂದು ನಾನು ಆಶಿಸುತ್ತೇನೆ ಎಂದು ವಿಕೆ ಸಿಂಗ್ ಸಲಹೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಹಿಜ್ಜುಲ್ ಉಗ್ರರ ಮುಖಂಡರನ್ನು ಕಾರಿನಲ್ಲಿ ಎಸ್ಕಾರ್ಟ್ ಮಾಡುತ್ತಿರುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಡಿಎಸ್ಪಿ ದೇವೀಂದರ್ ಸಿಂಗ್ ಸೆರೆ ಸಿಕ್ಕಿದ್ದು, ಈ ಪ್ರಕರಣ ರಾಜಕೀಯ ವಲಯದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ.