ಉಡುಪಿ: ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡುವ ಕುರಿತಂತೆ ಸರಕಾರ ನಿಗದಿಪಡಿಸಿರುವ ದರ ಹೊರತುಪಡಿಸಿ ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ, ಜಿಲ್ಲಾಡಳಿತ , ಜಿ.ಪಂ., ವಿವಿಧ ಇಲಾಖೆಗಳ ವತಿಯಿಂದ ಹಿರಿಯ ನಾಗರಿಕರಿಗಾಗಿ ಇರುವ ಯೋಜನೆಗಳು ಮತ್ತು ಹಿರಿಯ ನಾಗರಿಕರ ಗುರುತು ಚೀಟಿಯನ್ನು ಆನ್‌ಲೈನ್ ಮೂಲಕ ಪಡೆಯುವ ವಿಧಾನದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರಿಗೆ ಸೇವಾ ಸಿಂಧು ಯೋಜನೆಯಲ್ಲಿ ಆನ್‌ಲೈನ್ ಮೂಲಕ ಗುರುತುಚೀಟಿ ವಿತರಿಸಲಾಗುತ್ತಿದ್ದು, ಇದರ ಫ್ರಾಂಚೈಸಿಗಳು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ದರ ವಸೂಲು ಮಾಡುತ್ತಿವೆ ಎಂದು ಸಭೆಯಲ್ಲಿದ್ದ ಹಿರಿಯ ನಾಗರಿಕರು ದೂರಿದರು. ಈ ವೇಳೆ ಅಂತಹ ಫ್ರಾಂಚೈಸಿಗಳ ಬಗ್ಗೆ ಸಾಕ್ಷ್ಯಾಧಾರ ನೀಡಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವುಗಳನ್ನು ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿರಿಯ ನಾಗರಿಕರ ಆಸ್ತಿಯನ್ನು ಲಪಟಾಯಿಸುವವರಿಂದ ಮರಳಿ ಆಸ್ತಿಯನ್ನು ದೊರಕಿಸಿಕೊಡುವ ಬಗ್ಗೆ ಮತ್ತು ಖಾತೆಯನ್ನು ಬದಲಾಯಿಸಿದ್ದರೆ ಅದನ್ನು ರದ್ದುಗೊಳಿಸಿ ಪುನಃ ಹಿರಿಯ ನಾಗರಿಕರ ಹೆಸರಿಗೆ ಮಾಡುವ ಬಗ್ಗೆ ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್ ವಿವರಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ್, ಜಿಲ್ಲಾ ಅಂಕಿ ಅಂಶ ಸಂಗ್ರಹಣಾಧಿಕಾರಿ ನಾಗರಾಜ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಶಕ್ತೀಕರಣ ಅಧಿಕಾರಿ ನಿರಂಜನ ಭಟ್ ಸ್ವಾಗತಿಸಿ, ವಂದಿಸಿದರು.