Advertisement

ಬೆಕ್ಕು ಕದ್ದು ಹಾಲು ಕುಡಿದರೆ, ಕುಡಿಯಲಿ ಬಿಡಿ!

06:00 AM Oct 25, 2018 | |

ಬೆಕ್ಕನ್ನು ಎಂದಾದರೂ ಹಿಡಿಯಲು ಪ್ರಯತ್ನಿಸಿದ್ದೀರಾ? ಅದು ನಿಮ್ಮ ಮನೆಯಲ್ಲಿ ಸಾಕಿದ ಬೆಕ್ಕಲ್ಲದೇ ಹೋದರೆ ಕೈಗೆ ಖಂಡಿತಾ ಸಿಕ್ಕದು. ಒಂದು ವಿಚಾರ ಅರ್ಥ ಮಾಡಿಕೊಂಡುಬಿಡಿ ಬೆಕ್ಕು ಕೈಗೆ ಸಿಕ್ಕಿತೆಂದರೆ ಅದು ನಿಮ್ಮ ಕೈಚಳಕದಿಂದಂತೂ ಖಂಡಿತಾ ಅಲ್ಲ. ಬೆಕ್ಕು ತಾನೇ ಸ್ವಯಿಚ್ಛೆಯಿಂದ ನಿಮ್ಮ ಕೈಗೆ ಬಂದುಬಿಟ್ಟಿದೆ. ಏಕೆಂದರೆ ಬೆಕ್ಕು ತುಂಬಾ ಚುರುಕು. 

Advertisement

ಮನುಷ್ಯರ ಕಿವಿಗೆ ಬೀಳದ ಸದ್ದು ಕೂಡಾ ಬೆಕ್ಕಿಗೆ ಕೇಳಿಸುತ್ತೆ. ಕಳ್ಳರನ್ನು ಬೆಕ್ಕಿಗೆ ಹೋಲಿಸುವುದು ಸುಮ್ಮನೆ ಅಲ್ಲ. ಸದ್ದಾಗದಂತೆ, ಯಾರ ಕಣ್ಣಿಗೂ ಕಾಣಿಸಿಕೊಳ್ಳದಂತೆ ತನ್ನ ಕೆಲಸ ಸಾಧಿಸಿಕೊಳ್ಳುವ ನೈಪುಣ್ಯತೆ ಅದಕ್ಕೆ ಕರತಲಾಮಲಕ! ಇದಕ್ಕೆ ಕಾರಣವೇನು ಗೊತ್ತಾ? ಬೆಕ್ಕಿನ ಕಿವಿಯಲ್ಲಿ 32 ನರಗಳಿವೆಯಂತೆ. ಆದ್ದರಿಂದಲೇ ಅವುಗಳ ಕಿವಿ ತುಂಬಾ ಸೂಕ್ಷ ಮತ್ತು ಅತೀವ ಸಾಮರ್ಥ್ಯ ಹೊಂದಿದೆ. ಗುಂಡು ಸೂಜಿ ಬಿದ್ದರೂ ಅದರ ಕಿವಿ ನಿಮಿರಿಬಿಡುತ್ತದೆ. 

ವಿಪರ್ಯಾಸ ಎಂದರೆ ಸುತ್ತಮುತ್ತಲಿನ ಮನೆಯವರಿಗೆ ಗೊತ್ತಾಗದಂತೆ ಬಾಗಿಲು ಮುರಿದು ಕಳ್ಳತನ ಮಾಡುವವರನ್ನು ಬೆಕ್ಕಿಗೆ ಹೋಲಿಸುತ್ತೇವೆ. ಅಡುಗೆ ಮನೆಯಿಂದ ಕದ್ದು ಹಾಲು ಕುಡಿದ ಕಳ್ಳ ಬೆಕ್ಕನ್ನು ಬಡಿಯುವಂತೆ ಕಳ್ಳರನ್ನು ಹಿಡಿದು ಬಡಿಯಬೇಕೆಂದುಕೊಳ್ಳುತ್ತೇವೆ. ಆದರೆ, ಜನರ ನಡುವೆಯೇ ಇದ್ದು, ರಾಜಾರೋಷವಾಗಿ ಓಡಾಡಿಕೊಂಡು, ನೋಡ ನೋಡುತ್ತಲೇ ಪಂಗನಾಮ ಹಾಕುವವರನ್ನು ಮಾತ್ರ ಶಿಕ್ಷಿಸುವುದಿರಲಿ, ಕಳ್ಳ ಎಂದು ಕರೆಯಲೂ ಹಿಂಜರಿಯುತ್ತೇವೆ. ಅದರ ಮುಂದೆ ಬೆಕ್ಕು ಕದ್ದು ಹಾಲು ಕುಡಿಯುವುದು ಏನೇನೂ ಅಲ್ಲ. ಇರಲಿ ಬಿಡಿ, ಅವೆಲ್ಲಾ ದೊಡ್ಡವರ ಸಮಾಚಾರ! ಮುಂದೊಂದು ದಿನ, ಯಾರದೇ ಮನೆಯ ಬೆಕ್ಕು ನಿಮ್ಮ ಮನೆಯಲ್ಲಿ ಕದ್ದು ಹಾಲು ಕುಡಿಯುತ್ತಿದ್ದರೆ ಛೂ ಎಂದು ಓಡಿಸದೆ ಅದಕ್ಕೊಂದು ಬಟ್ಟಲು ಹಾಲಿಡುತ್ತೀರಾ ಅಲ್ವಾ?

Advertisement

Udayavani is now on Telegram. Click here to join our channel and stay updated with the latest news.

Next