ಸಾಗರ: ತಾಲೂಕಿನ ತಾಳಗುಪ್ಪ ಕಾರ್ಗಲ್ ಮಾರ್ಗದ ನಡುವಿನ ಬಚ್ಚಗಾರು ಹಾಗೂ ಇಡುವಾಣಿ ನಡುವಿನ ಕಾಡಿನ ಕಣಿವೆ ಪ್ರದೇಶದಲ್ಲಿ ಆಸ್ಪತ್ರೆಯಲ್ಲಿ ಬಳಸುವ ವೈದ್ಯಕೀಯ ಪ್ಲಾಸ್ಟಿಕ್ ತ್ಯಾಜ್ಯಗಳ ಮೂಟೆಗಳನ್ನು ಬಿಸಾಕಿರುವುದು ಕಂಡುಬಂದಿದ್ದು, ಇವುಗಳ ವಿಲೇವಾರಿಗೆ ಬಿಗಿಯಾದ ಕ್ರಮಗಳ ಹೊರತಾಗಿಯೂ ಇಂತಹ ಕೃತ್ಯ ನಡೆದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ತಲವಾಟ ಗ್ರಾಪಂ ವ್ಯಾಪ್ತಿಯ ನಾಗರಿಕರು ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಳಸುವ ಸಿರಿಂಜ್, ಡ್ರಿಪ್ ಬಾಟಲ್, ಔಷಧ ಬಾಟಲ್ಗಳು ಈ ಪ್ರದೇಶದಲ್ಲಿ ಕಂಡುಬಂದಿದೆ. ದೊಡ್ಡ ಪ್ರಮಾಣದಲ್ಲಿಯೇ ವೈದ್ಯಕೀಯ ತ್ಯಾಜ್ಯ ಇರುವ ಹಿನ್ನೆಲೆಯಲ್ಲಿ ಇದು ದೊಡ್ಡ ಆಸ್ಪತ್ರೆ ನಡೆಸುವವರ ಕೃತ್ಯ ಎಂದು ಭಾವಿಸಲಾಗಿದೆ. ಈ ಭಾಗದಲ್ಲಿ ಜನವಸತಿ ಇಲ್ಲದಿರುವುದರಿಂದ ತ್ಯಾಜ್ಯ ಎಸೆಯುವವರನ್ನು ಗುರುತಿಸುವುದು ಕಷ್ಟವಾಗಿದೆ. ಆದರೆ ಆಸ್ಪತ್ರೆ ತ್ಯಾಜ್ಯ ವಿಲೇವಾರಿಗೆ ಅಧಿಕೃತ ಏಜೆನ್ಸಿಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿಯೂ ಅಂತಹ ಅಧಿಕೃತ ಏಜೆನ್ಸಿ ಇದೆ. ಈ ಸಂಸ್ಥೆಯ ಮೇಲೆ ತನಿಖೆ ನಡೆಸಿದರೆ ವಿಷಯ ಬಯಲಿಗೆ ಬರಬಹುದು ಎಂದು ಸ್ಥಳೀಯರಾದ ಸೀತಾರಾಂ ಬಚ್ಚಗಾರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಎಲ್ಲ ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಲ್ಯಾಬ್‌ಗಳ ತ್ಯಾಜ್ಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಶಿವಮೊಗ್ಗದ ಏಜೆನ್ಸಿಯೊಂದು ನಿರ್ವಹಿಸುತ್ತಿದೆ. ಇವರೆಲ್ಲರ ಪರವಾನಗಿ ನವೀಕರಣಕ್ಕೆ ಸರ್ಕಾರ ತ್ಯಾಜ್ಯ ವಿಲೇವಾರಿಯ ಒಪ್ಪಂದವನ್ನು ಕಡ್ಡಾಯ ಮಾಡಿರುವುದರಿಂದ ಅವರು ಕಾನೂನುಬಾಹಿರ ತ್ಯಾಜ್ಯ ವಿಲೇವಾರಿಗೆ ಮುಂದಾಗುವುದಿಲ್ಲ. ಶಿವಮೊಗ್ಗದ ಏಜೆನ್ಸಿ ತಾಳಗುಪ್ಪ, ಕಾರ್ಗಲ್, ಜೋಗಕ್ಕೂ ತೆರಳಿ ತ್ಯಾಜ್ಯ ವಸ್ತುಗಳನ್ನು ಒಯ್ಯುತ್ತದೆ. ಈ ರೀತಿಯ ವೈದ್ಯಕೀಯ ತ್ಯಾಜ್ಯ ಸೃಷ್ಟಿಯಾಗಲು ಖಾಸಗಿ ವೃತ್ತಿ ನಡೆಸುವ ಸರ್ಕಾರಿ ಆಸ್ಪತ್ರೆಗಳ ವೈದ್ಯರೇ ಕಾರಣ ಎಂಬ ಅನುಮಾನ ಪ್ರಬಲವಾಗಿದೆ. ಖಾಸಗಿಯಾಗಿ ಉದ್ಯೋಗ ಮಾಡುವುದರಿಂದ ಇವರಿಗೆ ಏಜೆನ್ಸಿ ಜೊತೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲು ಬರುವುದಿಲ್ಲ. ತಮ್ಮ ಮನೆಯಲ್ಲಿಯೇ ಉದ್ಯೋಗ ನಡೆಸುವ ಈ ಜನರು ರೋಗಿಗಳಿಗೆ ಡೇ ಕೇರ್ ತರಹದ ಸೇವೆ ನೀಡುತ್ತಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಹೆಸರು ಬಹಿರಂಗ ಬಯಸದ ವೈದ್ಯಕೀಯ ವಸ್ತುಗಳ ಮಾರಾಟ ಏಜೆನ್ಸಿಯನ್ನು ನಿರ್ವಹಿಸುತ್ತಿರುವ ಪ್ರತಿನಿಧಿಯೋರ್ವರು ಪ್ರತಿಪಾದಿಸಿದರು. ತ್ಯಾಜ್ಯ ಎಸೆಯುವವರು ರಾತ್ರಿಯ ಹೊತ್ತು ಈ ಕೆಲಸ ಮಾಡುವುದರಿಂದ ಪತ್ತೆ ಮಾಡುವುದು ಕಷ್ಟ. ಇವುಗಳು ತುಂಬಾ ಅಪಾಯಕಾರಿಯಾಗಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ತಲವಾಟ ಗ್ರಾಪಂ ಸದಸ್ಯ ಶ್ರೀಕಾಂತ್ ಹೊತ್ಗುಂಡಿ ತಿಳಿಸಿದರು.
ಟೆಲಿಪೋನ್ ಕೇಬಲ್ ಪತ್ತೆ: ಇದೇ ಕಣಿವೆ ಪ್ರದೇಶದಲ್ಲಿ ಬಳಕೆಗೆ ಅನರ್ಹವಾದ ಟೆಲಿಫೋನ್ ಒಎಫ್‌ಸಿ ಕೇಬಲ್ಗಳನ್ನು ಎಸೆದಿರುವುದು ಕೂಡ ಕಂಡುಬಂದಿದೆ. ನೂರಾರು ವರ್ಷಕ್ಕೂ ಕರಗದ ಟೆಲಿಪೋನ್ ಕೇಬಲ್ಗಳನ್ನು ಎಸೆದು ಹೋಗಲಾಗಿದೆ. ಇದು ರಾತ್ರಿ ಸಂಚಾರ ಮಾಡುವ ಪ್ರಾಣಿಗಳ ಕಾಲಿಗೆ ಸುತ್ತಿಕೊಂಡರೆ ಅವುಗಳ ಅಸಹಾಯಕತನ ಯಾರಿಗೂ ಹೇಳಲಾಗದು ಎಂದು ಕಡವಿನಮನೆ ರಾಘವೇಂದ್ರ ಪ್ರತಿಕ್ರಿಯಿಸಿದರು.