Advertisement
ಪ್ರತಿಯೊಂದು ಕ್ಷೇತ್ರಗಳು ಕೂಡ ಈಗ ವ್ಯಾಪಾರ ಆಗಿ ಬಿಟ್ಟಿದೆ. ವ್ಯವಾರ ವಹಿವಾಟಿನ ನಡುವ ಒಬ್ಬನ ಬದುಕು ಭವಿಷ್ಯ ಕಾಣದಂತಾಗುವ ಕಾದಂಬರಿ ಇದು. ಅಂತಹುದರ ನಡುವೆ ಸಕ್ಕರೆಯೊಳಗೆ ಕಾಣದ ಸಿಹಿಯಂತಹ ಮಧುರ ಪ್ರೇಮ ಪ್ರಣಯದ ಎದೆಸ್ಪರ್ಶಿ ಭಾಗವನ್ನೂ ಕೂಡ ಈ ಕಾದಂಬರಿ ಓದುಗನಿಗೆ ನೀಡುತ್ತದೆ.
Related Articles
Advertisement
ಕಾಲೇಜುಗಳಲ್ಲಿ ಹೊಸದಾಗಿ, ತಾತ್ಕಾಲಿಕ ಅವಧಿಗೆ ಪ್ರಾದ್ಯಾಪಕರಾಗಿ ವೃತ್ತಿ ಜೀವನಕ್ಕೆ ಸೇರ್ಪಡೆಗೊಳ್ಳುವ ಯುವ ಶಿಕ್ಷಕರ ಅಸಹನೀಯ ಹಾಗೂ ಅಸಹಾಯಕ ಸ್ಥಿತಿಯನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ ಈ ಕಾದಂಬರಿ.
ಮಾನವನ ಬದುಕಿನ ವಿಕಾಸಕ್ಕೆ ಒಂದು ಮೈಲಿಗಲ್ಲು ನೀಡುವುದು ಶಿಕ್ಷಣ. ಅಂತಹ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರಲ್ಲಿ ನಡೆಯುವ ವಹಿವಾಟು, ಶಿಕ್ಷಣವನ್ನು ವ್ಯಾಪಾರೀಕರಣಕ್ಕೆ ತಿರುಗಿಸುವ ಭ್ರಷ್ಟಾಚಾರ, ಈಗಷ್ಟೇ ಹೊಸದಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಯುವ ಶಿಕ್ಷಕರನ್ನು ಮೆಷಿನ್ ಹಾಗೆ ದುಡಿಸಿಕೊಳ್ಳುವ ‘ಮ್ಯಾನೆಜ್ ಮೆಂಟ್ ಧೋರಣೆ’, ಶಿಕ್ಷಣ ಸಂಸ್ಥೆಗಳ ಅವ್ಯವಸ್ಥೆ, ಒಟ್ಟಾರೆಯಾಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಮೇಲಾಟ, ಒಳ ಆಟ ಎಲ್ಲವನ್ನೂ ತೋರಿಸಿದ ರೀತಿ ಪ್ರಸ್ತುತಕ್ಕೆ ರಾಚುವಂತೆ ಈ ಕೃತಿ ಇದೆ ಎನ್ನುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿಲ್ಲ.
ಶಿಕ್ಷಣ ಅದೊಂದು ಮನುಷ್ಯ ಬದುಕಿನ ತಳಹದಿ. ಸಮಾಜದಲ್ಲಿ, ಶಿಕ್ಷಣ ಸಾಮಾಜಿಕ ಒಳಿತಿನ ಬಹು ಮುಖ್ಯ ಅಂಗ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯತೆಗಳನ್ನು ತೊಡೆದು ಹಾಕಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಸಮಗ್ರ ಸಮಾಜವನ್ನು ಹೆಣೆದುಕೊಳ್ಳುವ ಒಟ್ಟು ಪ್ರಕ್ರಿಯೆಯಲ್ಲಿ ಶಿಕ್ಷಣದ ಪಾಲು ಮಹತ್ತರವಾದದ್ದು.
ದುರಂತದ ಸಂಗತಿಯೆಂದರೆ, ಸಾಮಾಜಿಕವಾಗಿ ಬೆಳಕಾಗಬೇಕಿದ್ದ ಹಾಗೂ ಒಳಿತಿಗಾಗಬೇಕಿದ್ದ ಶಿಕ್ಷಣ ಇಂದು ವ್ಯಾಪರೀಕರಣಗೊಂಡು ಕಾರ್ಪೋರೇಟ್ ಚಿಂತನೆಯತ್ತ ಭೀಮ ಹೆಜ್ಜೆಯನ್ನಿಟ್ಟಿರುವುದು. ಇಂದು ಶಿಕ್ಷಣ ಎನ್ನುವುದು ಮಾರಾಟವಾದ ವಸ್ತುವಾಗಿದೆ. ನವ ವಸಾಹತುಶಾಹಿಯ ವ್ಯಾಪಾರದ ಮನಸ್ಥಿತಿಗೆ ಇಂದು ನಾವೆಲ್ಲರೂ ವೈಯಕ್ತಿಕವಾಗಿ ಮತ್ತು ಸಾಮುದಾಯಿಕವಾಗಿ ಬಲಿಯಾಗಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ.
ನವ ವಸಾಹತುಶಾಹಿಯ ಒಂದು ಮುಖ್ಯ ಲಕ್ಷಣವೆಂದರೆ ಜೀವನದ ಪ್ರತಿಯೊಂದು ಮೂಲಭೂತ ಅಗತ್ಯತೆಗಳನ್ನು ಮಾರಾಟಮಾಡಬಲ್ಲ ಸರಕುಗಳನ್ನಾಗಿ ಮಾರ್ಪಡಿಸುವುದರ ಮೂಲಕ ಅದರಿಂದ ಗರಿಷ್ಠ ಲಾಭಗಳಿಸುವ ತಳಹದಿಯನ್ನು ನಿರ್ಮಾಣ ಮಾಡಿಕೊಂಡು ಮೆರೆಯುವುದು.
ನವ ವಸಾಹತುಶಾಹಿಯ ಯುಗಧರ್ಮವೆಂದರೇ ಹಾಗೆ, ಎಲ್ಲಾ ಮಾನವ ಸಂಬಂಧಗಳನ್ನು ಹಣಕ್ಕೆ ಕೊಂಡು ಬಳಸಿಕೊಳ್ಳುವುದು. ಹಣದ ಸಂಬಂಧಗಳನ್ನಾಗಿ ಬದಲಾಯಿಸಿ ಮಾನವೀಯತೆಯ ಜಾಗದಲ್ಲಿ ಲಾಭ ನುಂಗುವ ಸಂಸ್ಕತಿಯನ್ನು, ಪದ್ಧತಿಯನ್ನು ಜೀವನಕ್ರಮವನ್ನಾಗಿಸಿ ಆಟ ನೋಡುವುದಾಗಿದೆ. ಇಂತಹ ವ್ಯವಸ್ಥೆಯೊಲಗೆ ಸಿಲುಕಿದ ಒಬ್ಬ ಯುವ ಪ್ರಾಧ್ಯಾಪಕನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿ ಹೆಣೆದುಕೊಂಡಿದೆ.
ನಸುಕು ಹರಿದು ನಾಲ್ಕೂ ದಿಕ್ಕುಗಳಿಗೆ ಬೆಳಕು ಹಬ್ಬಲಾರಂಭಿಸಿದ ಹೊತ್ತಿಗೆ ರೈಲಿನ ಪ್ರಯಾಣದೊಂದಿಗೆ ಆರಂಭ ಪಡೆಯುವ ಕಾದಂಬರಿ, ಯಾವುದೋ ಅಲೆಮಾರಿ ಬದುಕನ್ನು ತೋರಿಸುವ ಕಥೆ, ವ್ಯಥೆ ಎಂಬ ಹಾಗೆ ಮೊದಲ ಕೆಲ ಹೊತ್ತು ಅನ್ನಿಸುತ್ತದೆ. ಹಳ್ಳಿಯ ತೀರದ ಬದುಕನ್ನು ರೈಲಿನ ಕಿಟಕಿಯಾಚೆಗಿನ ನೋಟದಲ್ಲಿ ಕಾಣಿಸುವ ಚಿತ್ರಣ ರಾಜಸ್ಥಾನದ ಹಳ್ಳಿ ಬದುಕನ್ನು ದಾಟಿ ಹೋದ ಮೇಲೆ ಕಥೆ ಬೇರೇನೆ ಇದೆ. ಕಾದಂಬರಿಯ ಆರಂಭವೇ ಓದುಗನನ್ನು ಬಿಡಿಸಲಾರದ ನಂಟೊಂದನ್ನು ಕಟ್ಟಿಕೊಡುತ್ತಾ ಸಾಗುತ್ತದೆ.
ಸಂಭಾಷಣೆ, ವೃತ್ತಿ ಜೀವನದ ಆರಂಭ. ಶಿಕ್ಷಣ ಸಂಸ್ಥೆಗಳು ಯುವ ಶಿಕ್ಷಕರನ್ನು ನೋಡಿಕೊಳ್ಳವ ರೀತಿ, ಕಡಿಮೆ ಸಂಬಳ, ಹೆಚ್ಚು ದುಡಿಮೆ, ಬದುಕು, ಜಂಜಾಟ, ‘ನೀವಲ್ಲವಾದ್ರೆ ನೂರಾರ್ ಮಂದಿ ಇದ್ದಾರೆ ರೀ’ ಎನ್ನುವ ವ್ಯಾಪಾರದ ಅಹಂಕಾರ, ವೃತ್ತಿ ಬದುಕಿನ ಅನುಭವದ ಸಮಾಧಾನ, ಎಲ್ಲವೂ.. ಪ್ರಾಧ್ಯಾಪಕನೋರ್ವನ ಏಕತ್ರ ವಲಸೆ ಬದುಕು, ಒದ್ದಾಟ ಎಲ್ಲವೂ ಪ್ರಸ್ತುತ ದಿನಗಳಿಗೆ ಕನ್ನಡಿ ಹಿಡಿಯುತ್ತವೆ.
ಥಿಸೀಸ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಪ್ರಾಧ್ಯಾಪಕ ಸುಭಾಷ್ ಆರ್ಯ, ಒಂದೊಂದಾಗಿ ವೃತ್ತಿ ಬದುಕನ್ನು ಅನುಭವಿಸುವುದರೊಂದಿಗೆ ಆತನ ಖಾಸಗಿ ಬದುಕಿನ ಮುಖ ಇಲ್ಲಿ ಸೊಗಸಾದ ಚಿತ್ರಣವನ್ನು ನೀಡುತ್ತದೆ.
ರಾಜಸ್ಥಾನದ ಹಳ್ಳಿಯೊಂದಕ್ಕೆ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸುಭಾಷ್ ಆರ್ಯ ಹೋಗುವುದರಿಂದ ‘ಇದು ವಿದಾಯವಲ್ಲ’ ಕಾದಂಬರಿ ವೇಗ ಪಡೆಯುತ್ತದೆ. ಆ ಹಳ್ಳಿಯಲ್ಲಿನ ಅನಾಗರಿಕರ ನಡುವೆ ಏಕಾಂಗಿ ಅಸಾಯಕ ನಾಗರಿಕನಾಗಿ ಅನುಭವಿಸಬಹುದಾದ ಕಷ್ಟಗಳು, ಕಾಲೇಜಿನ ಭ್ರಷ್ಟಾಚಾರ, ಇವೆಲ್ಲ ಅಸಹನೀಯ ಬದುಕಿನ ಜಂಜಾಟದ ನಡುವೆ ಪ್ರೀತಿಯೆನ್ನುವ ಹೇಳಿ ವರ್ಣಿಸಲಾಗದ ಒಂದು ಮಜಬೂತಾದ ಭಾವವೊಂದನ್ನು ಹೆಣೆದುಕೊಡುವ ಸೊಗಸಾದ ಕಾದಂಬರಿಯಿದು.
ರಾಜಸ್ಥಾನದ ಹಳ್ಳಿ ಬದುಕಿನ ಸುಂದರ ಚಿತ್ರಣವು ಈ ಕಾದಂಬರಿಯ ಜೊತೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ. ಅಲ್ಲಿನ ಬದುಕಿನೊಂದಿಗೆ ವೃತ್ತಿ ಜೀವನದ ಸಂಕಷ್ಟಗಳನ್ನು ದಾಟುವ ಸುಭಾಷ್ ಆರ್ಯನಿಗೆ ಕೃತಿಯ ಲೇಖಕರು ಯುವ ಪ್ರಾಧ್ಯಾಪಕರ ಬದುಕನ್ನು ಪ್ರತಿನಿಧಿಸುವ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಪ್ರಾಧ್ಯಾಪಕರ ಬೇಕು ಬೇಡಗಳ ಕುರಿತು, ಅವರ ಕಷ್ಟ ಭವಣೆಗಳ ಕುರಿತು ಅಗಾಧವಾದ ನೋಟ ಪುಟಪುಟಗಳಲ್ಲಿಯೂ ಕಾಣಸಿಗುತ್ತವೆ.
ಶಿಕ್ಷಕರ ಮೇಲಾಗುವ ಶೋಷಣೆ, ಶೈಕ್ಷಣಿಕ ಕ್ಷೇತ್ರದ ದುರವಸ್ಥೆಗಳಿಗೆ ಹಿಡಿದ ಕನ್ನಡಿಯಾಗಿ ಈ ಪುಸ್ತಕ ನಿರೂಪಿಸಲ್ಪಟ್ಟಿದೆ. ನಿರುದ್ಯೋಗದ ಸಮಸ್ಯೆಯಿಂದ ಬಳಲಿ, ಕೊನೆಗೆ ಖಾಸಗೀ ಸಂಸ್ಥೆಗಳಲ್ಲಿ ಹೊಸದಾಗಿ ಸೇರಿಕೊಳ್ಳುವ ಯುವ ಶಿಕ್ಷಕರು ಯಾವ ರೀತಿ ತಮ್ಮ ಮೇಲಾಗುವ ಶೋಷಣೆಯನ್ನು ಅಸಹಾಯಕವಾಗಿ, ಬೇಸತ್ತು ಸಹಿಸುವಿಕೆಯ ಮಿತಿಯನ್ನೂ ಕೂಡ ಮೀರಿ ಬದುಕುಳಿದು ಕೊನೆಗೆ ಎಲ್ಲೋ ಹೇಗೋ ಹೊಟ್ಟೆ ಪಾಡಿಗೆ ಬದುಕು ದೂಡುವುದಕ್ಕೆ ಮುಂದಾಗುವ ವಿಷಾದವನ್ನು ಯಾವುದೇ ಫಿಲ್ಟರ್ ಹಾಕದೇ ಚಿತ್ರಿಸಿದ್ದು ವಿಶೇಷ.
ಇನ್ನು, ಹಳ್ಳಿಯ ಬದುಕಿನ ಮುಗ್ಧೆ ಲಕ್ಷ್ಮಿಯೊಂದಿಗಿನ ಅಪ್ಯಾಯಮಾನವಾದ ಒಲವು, ಹಳ್ಳಿ ಮತ್ತು ಮತ್ತು ಅಲ್ಲಿನ ನಂಟು, ಈ ಪ್ರೀತಿಯ ಪ್ರತಿಗಳಿಗೆಯ ಬೇಕು ಬೇಡಗಳ ನಡುವೆ ಉಳಿಯುವ ನಿಷ್ಕಲ್ಮಶ ಎದೆಯ ಭಾವ ಓದುಗನಿಗೆ ಮತ್ತಷ್ಟು ಹಿತ ನೀಡುತ್ತದೆ.
ಶಿಕ್ಷಣ ವ್ಯವಸ್ಥೆಯ ಎಲ್ಲಾ ಕಷ್ಟ, ದುಃಖ ದುಮ್ಮಾನಗಳೊಂದಿಗೆ… ಲಕ್ಷ್ಮಿಯಿಂದ ಭೌತಿಕವಾಗಿ ದೂರವಾಗುವ ಸುಭಾಷ್ ನ ಗದ್ಗದಿತ ಒಳ ಉಸಿರು ‘ಇದು ವಿದಾಯವಲ್ಲ’ ಎನ್ನುತ್ತದೆ.
ಓದು ನಿಮ್ಮದಾಗಲಿ
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಬ್ಲ್ಯಾಕ್ ಫಂಗಸ್ 7000 ಕೋವಿಡ್ ಸೋಂಕಿತರನ್ನು ಬಲಿ ತೆಗೆದುಕೊಂಡಿದೆ : ಡಾ. ರಣದೀಪ್ ಗುಲೇರಿಯಾ